ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಬಿಐ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜವಾದಿಯಾಗಿ ಬೆಳೆದ ಸಿದ್ದರಾಮಯ್ಯ, ಆಪ್ತರು ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಅನುಭವ ಇಲ್ಲದ ಆಡಳಿತದಿಂದ ತಮ್ಮ ಅಧೀನ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರವಂತಾಗಿದೆ’ ಎಂದರು.
‘ಲೋಕಾಯುಕ್ತ ಆಮಿಷಕ್ಕೆ ಒಳಗಾಗದೆ ಕೆಲಸ ಮಾಡಬೇಕು. ಆದರೆ ಲೋಕಾಯುಕ್ತ ಐಜಿ ಬಾಲಸುಬ್ರಹ್ಮಣ್ಯ ಈ ಹಿಂದಿನ ಪೊಲೀಸ್ ಅಧಿಕಾರಿ ಕೆಂಪಯ್ಯ ಶಿಷ್ಯರಾಗಿರುವ ಕಾರಣ ಈ ತನಿಖೆಯಿಂದ ಅವರನ್ನು ಹೊರಗಿಡಬೇಕು’ ಎಂದು ಆಗ್ರಹಿಸಿದರು
‘ಆರೋಪ ಕೇಳಿಬಂದ ಸಂದರ್ಭದಲ್ಲೇ 14 ನಿವೇಶನಗಳನ್ನು ಒಪ್ಪಿಸಿ, ತನಿಖೆಗೆ ಆದೇಶ ನೀಡಲು ಸಲಹೆ ನೀಡಿದ್ದೆ. ಅದರಿಂದ ಅನೇಕ ಅಕ್ರಮ ಹೊರಬರುತ್ತಿತ್ತು. ಆದರೆ ಅವರನ್ನು ರಕ್ಷಿಸಲು ಹೋಗಿ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಸ್ಥಾನ ಎರಡನೇ ಪ್ರಮುಖ ಹುದ್ದೆ. ಮತ ನೀಡಿ ಆ ಹುದ್ದೆಗೇರಿಸಿದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ. ನಾನು ವಕೀಲ ಎಂದು ಹೇಳಿಕೊಳ್ಳುವ ಅವರಿಗೆ ನೆಲದ ಕಾನೂನಿನ ಅರಿವು ಇಲ್ಲವೇ. ಕಾನೂನು ಮಂತ್ರಿ ಎಚ್.ಕೆ.ಪಾಟೀಲ್ ನೆಲದ ಕಾನೂನು ಹಾಗೂ ಪ‍್ರಕರಣದ ಗಂಭೀರತೆ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಬೇಕು’ ಎಂದರು.
‘ಅರ್ಕಾವತಿ ಪ್ರಕರಣ ಬಾಕಿ ಇದ್ದು, ಕೆಂಪಣ್ಣ ವರದಿ ಹೊರತರಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದು, ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಗುರಿಯಾಗಿಸಿ ಷಡ್ಯಂತ್ರ ಮಾಡುವುದು ಸರಿಯಲ್ಲ. ಜೆಡಿಎಸ್, ಬಿಜೆಪಿ ಅವರಿಗೆ ಬೆಂಬಲವಾಗಿ ನಿಲ್ಲಲಿದೆ’ ಎಂದು ತಿಳಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಿದ್ದರಾಮಯ್ಯ ಏನು ಮಾಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತೀರ್ಮಾನಿಸಲು ನೀವೇನು ನ್ಯಾಯಾಧೀಶರೇ. ದಸರಾ ವ್ಯವಸ್ಥೆ ಹಾಳು ಮಾಡಿದ್ದಾರೆ. ಯಾವುದೇ ಸಮಿತಿಗಳಿಗೆ ಶಾಸಕರ ಆಯ್ಕೆ ಮಾಡಿಲ್ಲ. ಎಲ್ಲಾ ನೀವೇ ಹೊಡ್ಕೊಂಡ್ರೆ ಹೇಗೆ ಮಂತ್ರಿಗಳೇ’ ಎಂದು ಪ್ರಶ್ನಿಸಿದರು.
‘ದಸರಾದಲ್ಲಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದ್ದು ನಾವು, ಆದರೆ ಈಗ ನಾವೇನೋ ವಿಶೇಷವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಬರ ಇದ್ದಾಗ ಅರಮನೆ ಮುಂಭಾಗ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಕೀರ್ತಿ ಎಂದು ತಿಳಿದು ಕಲಾವಿದರು ಬರುತ್ತಿದ್ದರು. ಈಗ ಕೋಟಿ ನೀಡಿ ಕರೆಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.