ADVERTISEMENT

ಮುಡಾ ಪ್ರಕರಣ: CM ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 23:30 IST
Last Updated 30 ಸೆಪ್ಟೆಂಬರ್ 2024, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಇಲ್ಲಿನ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದು, ಪೂರಕ ದಾಖಲೆಗಳ ಸಂಗ್ರಹ ಶುರು ಮಾಡಿದ್ದಾರೆ.

ತನಿಖಾ ತಂಡಗಳ ನೇತೃತ್ವ ವಹಿಸಿರುವ ಮೈಸೂರು ಡಿವೈಎಸ್‌ಪಿ ಎಸ್‌.ಕೆ. ಮಾಲತೇಶ್‌, ಚಾಮರಾಜನಗರ ಡಿವೈಎಸ್‌ಪಿ ಮ್ಯಾಥ್ಯು ಥಾಮಸ್‌, ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್ ಹಾಗೂ ಲೋಕೇಶ್‌ಕುಮಾರ್‌ ಜೊತೆ ಮೈಸೂರು ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್‌ ಸೋಮವಾರ ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು.

‘ಬಳಿಕ ಈ ಐವರ ತಂಡವು ಬೆಂಗಳೂರಿಗೆ ತೆರಳಿ, ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬೇಕರ್ ಅವರನ್ನು ಭೇಟಿ ಮಾಡಿ ಪ್ರಕರಣದ ಸದ್ಯದ ಬೆಳವಣಿಗೆಗಳ ಕುರಿತು ವಿವರಣೆ ನೀಡಿತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತನಿಖೆ ಪೂರ್ಣಗೊಳಿಸಲು 85 ದಿನಗಳಷ್ಟೇ ಉಳಿದಿವೆ. ಮೊದಲ ಹಂತದಲ್ಲಿ ಮುಡಾ ಆಯುಕ್ತರು, ಹಿಂದಿನ ಆಯುಕ್ತರಿಗೆ ನೋಟಿಸ್ ನೀಡಲಿದ್ದು, ‌ಮೂಲ ದಾಖಲೆ ಗಳನ್ನು ಪರಿಶೀಲಿಸಲಿದ್ದಾರೆ. ನಂತರ ದಲ್ಲಿ ದೂರಿನಲ್ಲಿ ಉಲ್ಲೇಖಗೊಂಡಿರು ವವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವರನ್ನು ಯಾವಾಗ ವಿಚಾರಣೆಗೆ ಕರೆಯಬೇಕು? ತಾವೇ ತನಿಖೆ ನಡೆಸಬೇಕೆ ಅಥವಾ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕೆ ಎಂಬ ಕುರಿತು ಚಿಂತನೆಯೂ ನಡೆದಿದೆ.

ಮತ್ತೊಂದು ಮನವಿ:

ದೂರುದಾರ ಸ್ನೇಹಮಯಿ ಕೃಷ್ಣ ತನಿಖೆಗೆ ಪೂರಕವಾಗಿ ಲೋಕಾಯುಕ್ತ ಎಸ್‌.ಪಿ. ಕಚೇರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು. ಆರೋಪಿಗಳ ಲೋಪಗಳನ್ನು ಅವರು ಉಲ್ಲೇಖಿಸಿದ್ದಾರೆ. ಯಾರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬಹುದು ಎಂದು ಸಲಹೆಯನ್ನೂ ನೀಡಿದ್ದಾರೆ

‘ಮುಡಾದಲ್ಲಿ 2015ರಿಂದ ಈವವರೆಗೆ ₹5ಸಾವಿರ ಕೋಟಿ ಮೊತ್ತದ ಅಕ್ರಮ ನಡೆದಿದ್ದು, ಎಲ್ಲವನ್ನೂ ತನಿಖೆಗೆ ಒಳಪಡಿಸಬೇಕು. 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ನೈಜತೆ ಪರಿಶೀಲಿಸಬೇಕು’ ಎಂದು ಕೋರಿದ್ದಾರೆ.

ಇ.ಡಿಗೆ ಲಿಖಿತವಾಗಿಯೂ ದೂರು: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸೋಮವಾರ ಜಾರಿ ನಿರ್ದೇಶನಾಲಯದ(ಇಡಿ)ಬೆಂಗಳೂರು ವಿಭಾಗದ ಜಂಟಿ ಆಯುಕ್ತರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 27ರಂದು ಅವರು ಇ–ಮೇಲ್‌ ಹಾಗೂ ಅಂಚೆ ಮೂಲಕ ದೂರು ನೀಡಿದ್ದು, ಸೋಮವಾರ ಮತ್ತೊಮ್ಮೆ ದೂರು ಸಲ್ಲಿಸಿದ್ದಾರೆ.

ಸ್ನೇಹಮಯಿ ಕೃಷ್ಣಗೆ ನೋಟಿಸ್‌:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್ ನೋಟಿಸ್ ನೀಡಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ನೋಟಿಸ್‌ ಕಳುಹಿಸಿದ್ದು, ಮಂಗಳವಾರ (ಅ.1) ಬೆಳಿಗ್ಗೆ 7.30ಕ್ಕೆ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ನೀಡಿದ ಮೊದಲ ನೋಟಿಸ್ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.