ADVERTISEMENT

Muda Scam: ಮುಂದುವರಿದ ತನಿಖೆ : 14 ನಿವೇಶನಗಳ ಸ್ಥಳ ಮಹಜರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
   

ಮೈಸೂರು: ಲೋಕಾಯುಕ್ತ ಪೊಲೀಸರು ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ಮುಂದುವರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ವಿಜಯನಗರ ಮೂರನೇ ಹಂತದಲ್ಲಿ ಹಂಚಿಕೆಯಾಗಿದ್ದ 14 ನಿವೇಶನಗಳ ಸ್ಥಳ ಮಹಜರು ನಡೆಸಿದರು.

ಶುಕ್ರವಾರ ಬೆಳಿಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಮುಡಾ ಅಧಿಕಾರಿಗಳೊಂದಿಗೆ ತೆರಳಿದ ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್ ನೇತೃತ್ವದ ತಂಡವು, ಪ್ರತಿ ನಿವೇಶನದ ಅಳತೆ ಕೈಗೊಂಡು, ಅದರ ಮಾರುಕಟ್ಟೆ ಮೌಲ್ಯ, ನಕ್ಷೆ, ಚೆಕ್ಕುಬಂದಿ ಮೊದಲಾದ ದಾಖಲೆಗಳನ್ನು ಪರಿಶೀಲಿಸಿತು. ನಂತರ ಚರ್ಚಿಸಿ ವರದಿ ಸಿದ್ಧಪಡಿಸಿತು. ಸಂಜೆ 6ರ ವೇಳೆಗೆ ಮಹಜರು ಮುಗಿಯಿತು.

‘ಸೆಟ್ಲ್‌ಮೆಂಟ್’ ಡೀಡ್‌ ತನಿಖೆಗೆ ಮನವಿ:

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದೂರುದಾರ ಸ್ನೇಹಮಯಿ ಕೃಷ್ಣ, ‘ಸೆಟ್ಲ್‌ಮೆಂಟ್ ಡೀಡ್‌ ಹೆಸರಿನಲ್ಲಿ ಮುಡಾದಲ್ಲಿ ಕೋಟ್ಯಂತರ ರೂಪಾಯಿಯ ಅಕ್ರಮ ನಡೆದಿದೆ. ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಹೋದರನ ಪುತ್ರ, ಮುಡಾ ಅಧ್ಯಕ್ಷ ಕೆ. ಮರೀಗೌಡ ಸಂಬಂಧಿ ಹೆಸರಿನಲ್ಲೂ ಸೆಟ್ಲ್‌ಮೆಂಟ್‌ ಅಡಿ ನಿವೇಶನ ನೋಂದಣಿ ಆಗಿವೆ. ಈ ಎಲ್ಲ ದಾಖಲೆಗಳನ್ನೂ ಇ.ಡಿ.ಗೆ ನೀಡಿದ್ದೇನೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿಲ್ಲ’ ಎಂಬ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಳ್ಳರು– ಕಳ್ಳರು ಒಂದಾಗಿದ್ದಾರೆ. ತಮ್ಮ ರಕ್ಷಣೆಗಾಗಿ ಒಂದು ಕೂಟ ರಚಿಸಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿ.ಟಿ. ದೇವೇಗೌಡರು ನಾಡಹಬ್ಬದ ಉದ್ಘಾಟನಾ ವೇದಿಕೆಯಲ್ಲಿ ಹಾಗೆ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಅವರ ಅಕ್ರಮವೂ ಇರಬಹುದು. ಅದಕ್ಕಾಗಿಯೇ ಎಲ್ಲರೂ ಒಂದಾಗಿದ್ದಾರೆ. ಸೇಲ್ ಡೀಡ್ ಮೂಲಕ ಮುಡಾದಲ್ಲಿ ಅಕ್ರಮವಾಗಿದೆ. ಆ ಬಗ್ಗೆಯೂ ಲೋಕಾಯುಕ್ತಕ್ಕೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ’ ಎಂದು ತಿಳಿಸಿದರು.

ನಿವೇಶನ ವಾಪಸ್ ಸ್ವಾಗತಾರ್ಹ: ಅಬ್ರಹಾಂ
‘ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ 14 ನಿವೇಶನಗಳನ್ನು ವಾಪಸ್ ಪಡೆದ ಮುಡಾ ಕ್ರಮವು ಕಾನೂನಾತ್ಮಕವಾಗಿ ಸರಿ ಇದೆ’ ಎಂದು ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಹೇಳಿದರು. ಮುಡಾ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ‘ನಿವೇಶನಗಳನ್ನು ಹಿಂಪಡೆಯುವಂತೆ ನಾನು ಹಿಂದೆಯೇ ಆಗ್ರಹಿಸಿದ್ದೆ. ಈಗ ವಾಪಸ್ ಪಡೆದಿರುವುದರಿಂದ ಧನ್ಯವಾದ ಹೇಳಲು ಬಂದಿದ್ದೆ. ಇದರಿಂದ ತನಿಖೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದು’ ಎಂದರು. ‘ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಐವರು ಮುಖ್ಯಮಂತ್ರಿಗಳ ವಿರುದ್ಧ ಹೋರಾಡಿದ್ದೇನೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವೆ’ ಎಂದರು. ಜಿ.ಟಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಹಿಂದೆ ತುಳಸಿದಾಸಪ್ಪನವರು ಸಣ್ಣ ಆರೋಪಕ್ಕೆ ರಾಜೀನಾಮೆ ನೀಡಿದ್ದರು. ಮಹಾನ್ ವ್ಯಕ್ತಿಗಳಿದ್ದ ಊರಿನವರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.