ADVERTISEMENT

ಅಕ್ರಮ ನಿವೇಶನ ವಾಪಸ್ ಮಾಡದಿದ್ದರೆ, ಸರ್ಕಾರದ ವಶಕ್ಕೆ: ಎನ್. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 19:51 IST
Last Updated 5 ಅಕ್ಟೋಬರ್ 2024, 19:51 IST
ಎನ್‌.ಚಲುವರಾಯಸ್ವಾಮಿ 
ಎನ್‌.ಚಲುವರಾಯಸ್ವಾಮಿ    

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಮುಡಾದಿಂದ ಕಾನೂನುಬಾಹಿರವಾಗಿ ನಿವೇಶನ ಪಡೆದಿರುವ ಎಲ್ಲರೂ ಅದೇ ರೀತಿ ವಾಪಸ್ ಕೊಟ್ಟರೆ ಗೌರವ. ಇಲ್ಲದಿದ್ದರೆ, ಸರ್ಕಾರ ರಚಿಸಿರುವ ಸಮಿತಿಯ ವರದಿ ಆಧರಿಸಿ ಅವುಗಳನ್ನು ಹಿಂಪಡೆಯಲಾಗುವುದು’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಡಾದಲ್ಲಿ ಶೇ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಕಾನೂನು ಪ್ರಕಾರವಾಗಿ ನಡೆದಿಲ್ಲ. ಪರಿಹಾರ ಪಡೆದವರಿಗೆ ಒಂದು ನಿವೇಶನ, ಪಡೆಯದೇ ಇದ್ದವರಿಗೆ ಹೆಚ್ಚು ನಿವೇಶನ ಕೊಡಬೇಕೆಂಬ ನಿಯಮವಿದೆ. ಈ ಬಗ್ಗೆ ಗೊಂದಲಗಳಿವೆ’ ಎಂದರು.

‘ಶಾಸಕ ಜಿ.ಟಿ. ದೇವೇಗೌಡರ ಹೆಸರಿನಲ್ಲಿಯೂ ನಿವೇಶನವಿದ್ದು, ಆ ಕಾರಣಕ್ಕೆ ಅವರು ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ’ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ಮುಡಾದಲ್ಲಿ ಅವರದ್ದು ಮಾತ್ರವಲ್ಲ, ಬೇಕಾದಷ್ಟು ಜನರ ಬೇನಾಮಿ ನಿವೇಶನಗಳಿವೆ. ಅವರೇ ವಾಪಸ್ ಕೊಡುತ್ತಾರೆಯೇ ಇಲ್ಲವೇ ಸರ್ಕಾರವೇ ವಾಪಸ್ ಪಡೆದುಕೊಳ್ಳಬೇಕೇ ನೋಡೋಣ’ ಎಂದರು.

ADVERTISEMENT

‘ನಾನು ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಇಲ್ಲ. ಸದ್ಯ ಆ ಕುರ್ಚಿ ಖಾಲಿಯೂ ಇಲ್ಲ. ಎಲ್ಲರೂ ಸಿದ್ದರಾಮಯ್ಯ ಜೊತೆಗಿದ್ದೇವೆ. ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ಜೋಡೆತ್ತಿನಂತೆ ಸರ್ಕಾರ ಮುನ್ನಡೆಸುತ್ತಿದ್ದಾರೆ’ ಎಂದರು.

‘ಲೋಕಾಯುಕ್ತ ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸಲಿದ್ದು, ಸಿದ್ದರಾಮಯ್ಯ ನಿರ್ದೋಷಿ ಎಂದು ವರದಿ ಬರುವ ವಿಶ್ವಾಸವಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಸತೀಶ ಜಾರಕಿಹೊಳಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಾನೂ ಖರ್ಗೆ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ’ ಎಂದರು.

‘ಇಡೀ ದೇಶಕ್ಕೆ ಬುದ್ದಿ ಹೇಳುವ ಎಚ್‌.ಡಿ.ದೇವೇಗೌಡರು ತಮ್ಮ ಮಗನಿಗೆ ಏಕೆ ಬುದ್ದಿ ಹೇಳುತ್ತಿಲ್ಲ. ನಾಯಿ, ನರಿ, ಹಂದಿ ಎಂದೆಲ್ಲ ಪದ ಬಳಸಿದ್ದಾರೆ. ತಾವೊಬ್ಬರೇ ಸಭ್ಯಸ್ಥ ಎಂದುಕೊಂಡಿರುವ ಕುಮಾರಸ್ವಾಮಿ ಇದನ್ನೆಲ್ಲ ಬಿಡಬೇಕು’ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯವರ ಪತ್ನಿಗೆ ನಿವೇಶನಗಳನ್ನು ಕೊಟ್ಟಿದ್ದು ಮುಡಾ. ಹೀಗಾಗಿ ಅದು ಅಕ್ರಮವೋ ಸಕ್ರಮವೋ ಎಂಬುದನ್ನು ಅಲ್ಲಿನ ಅಧಿಕಾರಿಗಳೇ ಹೇಳಬೇಕು
ಕೆ. ವೆಂಕಟೇಶ್‌ ಪಶುಸಂಗೋಪನಾ ಸಚಿವ
ಜಾನುವಾರುಗಳಿಗೆ ವಿಮೆ:
‘ಜಾನುವಾರುಗಳಿಗೂ ವಿಮೆ ಕಲ್ಪಿಸುವ ಯೋಜನೆಯ ಕುರಿತು ಪಶು ಸಂಗೋಪನೆ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುವೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಇಲ್ಲಿನ ಜೆ.ಕೆ. ಮೈದಾನದಲ್ಲಿ ಶನಿವಾರ ರೈತ ದಸರಾ ಉದ್ಘಾಟಿಸಿ ಅವರು ಮಾತನಾಡಿ, ‘ಕೆಲವು ಹಳ್ಳಿಕಾರ್ ತಳಿಯ ಹಸುಗಳು ₹8–10 ಲಕ್ಷ ಮೌಲ್ಯ ಹೊಂದಿದ್ದು, ಅವು ಸತ್ತಾಗ ರೈತರಿಗೆ ಭಾರಿ ನಷ್ಟವಾಗುತ್ತದೆ. ಹೀಗಾಗಿ ಅವುಗಳಿಗೂ ವಿಮೆಯ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.