ADVERTISEMENT

MUDA Scam | 3,500 ನಿವೇಶನಗಳ ಲೆಕ್ಕವೇ ಇಲ್ಲ!

ಮುಡಾ: ಸರ್ಕಾರಕ್ಕೆ ಹೇಳಿದ್ದೇ ಬೇರೆ, ವಾಸ್ತವವೇ ಬೇರೆ

ಆರ್.ಜಿತೇಂದ್ರ
Published 14 ಆಗಸ್ಟ್ 2024, 4:37 IST
Last Updated 14 ಆಗಸ್ಟ್ 2024, 4:37 IST
ಮುಡಾ ಕಚೇರಿ
ಮುಡಾ ಕಚೇರಿ   

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮಂಜೂರು ಮಾಡಿರುವ ನಿವೇಶನಗಳಿಗೂ, ಅಧಿಕಾರಿಗಳು ಸರ್ಕಾರಕ್ಕೆ ನೀಡಿದ ಅಂಕಿ–ಅಂಶಕ್ಕೂ ತಾಳೆಯಾಗುತ್ತಿಲ್ಲ. ಇದು ಮುಡಾ ಹಗರಣದ ಹೊಸ ರೂಪವನ್ನು ಬಯಲು ಮಾಡಿದೆ.

ನಾಲ್ಕು ವರ್ಷದಲ್ಲಿ 4,829 ನಿವೇಶನ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ. ಆದರೆ ಅಧಿಕಾರಿಗಳು ನೀಡಿರುವ ನಿವೇಶನಗಳ ನೋಂದಣಿ ಲೆಕ್ಕದ ಸಂಖ್ಯೆ 1,200 ದಾಟುತ್ತಿಲ್ಲ!

2021ರ ಏಪ್ರಿಲ್‌ನಿಂದ 2024ರ ಜುಲೈ 3ರವರೆಗೆ ಮುಡಾದಲ್ಲಿ ಬಳಕೆಯಾಗಿರುವ ಸೆಕ್ಯುರಿಟಿ ಬಾಂಡ್ ಶೀಟ್‌ ದಾಖಲೆಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕೇವಲ 54 ದಿನಗಳಲ್ಲಿ ಅಂದರೆ, 2024ರ ಮೇ 9ರಿಂದ ಜುಲೈ 3ರ ಅವಧಿಯಲ್ಲಿ 1,200 ಮಂಜೂರಾತಿ ಪತ್ರಗಳನ್ನು ಬಳಸಿರುವುದು ಕಡೆಯ ಕ್ಷಣದ ಕಸರತ್ತಿಗೆ ದಾಖಲೆಯಾಗಿದೆ.

ADVERTISEMENT

ಮುಡಾದಲ್ಲಿ ನಿವೇಶನ ಹಂಚಿಕೆಗೂ ಮುನ್ನ ಅಧಿಕೃತವಾಗಿ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಅದಕ್ಕೆಂದೇ ಬಾರ್‌ಕೋಡ್‌ ಇರುವ ವಿಶಿಷ್ಟ ಬಾಂಡ್‌ ಶೀಟ್‌ ಬಳಸಲಾಗುತ್ತದೆ. ಪ್ರತಿ ಪತ್ರಕ್ಕೂ ಪ್ರತ್ಯೇಕ ಸಂಖ್ಯೆ ಇರುತ್ತದೆ. ಪ್ರತಿ  ನಿವೇಶನ ಮಂಜೂರಾತಿಗೆ ಪ್ರತ್ಯೇಕ ಶೀಟ್‌ ಬಳಸಲಾಗುತ್ತದೆ.

ಸೀಮಿತ ಸಂಖ್ಯೆಯಲ್ಲಿ ಪತ್ರಗಳನ್ನು ಮುದ್ರಿಸಿದ ಬಳಿಕ ಅವುಗಳನ್ನು ಎಂಜಿನಿಯರ್‌ ದರ್ಜೆಯ ಅಧಿಕಾರಿಯ ವಶಕ್ಕೆ ನೀಡಲಾಗುತ್ತದೆ. ಯಾರೇ ಈ ಪತ್ರಗಳನ್ನು ಬಳಸಬೇಕಾದರೂ ಸಂಬಂಧಿಸಿದ ರಿಜಿಸ್ಟರ್‌ನಲ್ಲಿ ಪ್ರತಿ ಪತ್ರದ ವಿವರಗಳನ್ನು ನಮೂದಿಸಬೇಕು. ನಿವೇಶನ ಮಂಜೂರಾತಿ ಆದೇಶವನ್ನು ಮುದ್ರಿಸಿದ ಬಳಿಕ, ಯಾರಿಗೆ, ಯಾವ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ನೀಡಬೇಕು. ಆದರೆ ಹಲವು ಪ್ರಕರಣಗಳಲ್ಲಿ ಅಧಿಕಾರಿಗಳು ಮಾಹಿತಿಯನ್ನು ಮರೆಮಾಚಿಸಿ ಪತ್ರಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

‘ನಿಯಮಗಳ ಪ್ರಕಾರ ಮುಡಾ ಆಯುಕ್ತರಿಗೆ ಮಾತ್ರ ಈ ಪತ್ರ ಬಳಸುವ ಅಥವಾ ಬಳಸಲು ಅನುಮತಿ ನೀಡುವ ಅಧಿಕಾರವಿದೆ. ಅವರ ಒಪ್ಪಿಗೆ ಪಡೆದು ಕಾರ್ಯದರ್ಶಿಗಳು ‌ಬಳಸಬಹುದು. ಹಾಳೆ ಹರಿದರೂ ಅದನ್ನು ಸಂಬಂಧಿಸಿದ ವಿಭಾಗಕ್ಕೆ ಹಿಂತಿರುಗಿಸಿ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಆದರೆ, ನಿಯಮ ಮೀರಿ ಕ್ಲರ್ಕ್ ದರ್ಜೆಯ ಸಿಬ್ಬಂದಿಗೂ ಪತ್ರ ಸಿಕ್ಕಿದೆ’ ಎಂದು ಅಧಿಕಾರಿಯೊಬ್ಬರು ದೂರುತ್ತಾರೆ.

ಇಂತಹ ಪತ್ರಗಳನ್ನು ಬಳಸಿ ಅನಧಿಕೃತವಾಗಿ ನಿವೇಶನಗಳನ್ನು ಮಂಜೂರು ಮಾಡಿ, ಅನ್ಯರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಸಾಧ್ಯತೆ ಹೆಚ್ಚಿದೆ. ಮಂಜೂರಾತಿ ಪತ್ರ ಮುಂದಿಟ್ಟುಕೊಂಡು ಹಣಕ್ಕೆ ಒತ್ತಾಯಿಸಲಾಗಿದೆ. ಅದರಲ್ಲೂ ಸಾವಿರಾರು ಸಂಖ್ಯೆಯಲ್ಲಿ ಪತ್ರಗಳ ಬಳಕೆಯಾಗಿದ್ದು, ಭಾರಿ ಪ್ರಮಾಣದ ಅಕ್ರಮ ನಡೆದಿದೆ.

‘ಹೀಗಾಗಿ ಇಡೀ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಈ ಹಿಂದಿನ ಆಯುಕ್ತರು, ಕಾರ್ಯದರ್ಶಿ, ವಿಶೇಷ ತಹಶೀಲ್ದಾರ್, ಆಯುಕ್ತರ ಆಪ್ತ ಸಹಾಯಕರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂಬ ಆಗ್ರಹ ಕೇಳಿಬಂದಿದೆ.

ಮುಡಾದಲ್ಲಿ 5 ಸಾವಿರಕ್ಕೂ ಹೆಚ್ಚು ನಿವೇಶನ ಅಕ್ರಮವಾಗಿ ಹಂಚಿಕೆಯಾಗಿರುವುದಕ್ಕೆ ಈ ದಾಖಲೆಯೇ ಸಾಕ್ಷಿ. ಸರ್ಕಾರ ಪಾರದರ್ಶಕ ತನಿಖೆ ನಡೆಸಿ ಜನರಿಗೆ ಸೇರಬೇಕಾದ ನಿವೇಶನಗಳನ್ನು ಹಿಂಪಡೆಯಬೇಕು
-ರಘು ಕೌಟಿಲ್ಯ ಬಿಜೆಪಿ ಮುಖಂಡ

ವರ್ಗಾವಣೆ ಆಗಿದ್ದರೂ 500 ಪತ್ರ ಬಳಕೆ

ನಿವೇಶನಗಳ ಅಕ್ರಮ ಹಂಚಿಕೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜುಲೈ 1ರಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಮುಡಾ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಕಾರ್ಯದರ್ಶಿ ಶೇಖರ್‌ ಅವರನ್ನು ವರ್ಗಾವಣೆ ಮಾಡಿರುವುದಾಗಿಯೂ ಘೋಷಿಸಿದ್ದರು. ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ವ್ಯವಹಾರ–ನಿರ್ಧಾರ ಕೈಗೊಳ್ಳದಂತೆಯೂ ಸೂಚಿಸಿದ್ದರು. ಹೀಗಿದ್ದೂ ಆಯಕ್ತರ ಆಪ್ತ ಸಹಾಯಕ ಪ್ರಶಾಂತ್‌ ಜುಲೈ 3ರಂದು 500 ಬಾಂಡ್‌ಶೀಟ್‌ಗಳನ್ನು ಪಡೆದಿದ್ದಾರೆ. ಆಯುಕ್ತರು ವರ್ಗಾವಣೆಯಾಗಿದ್ದರೂ ಪತ್ರಗಳನ್ನು ಪಡೆದಿದ್ದು ಏಕೆ? ಅದನ್ನು ಯಾರು ಯಾರಿಗೆ ಕೊಡಲಾಗಿದೆ ಎಂಬುದರ ಕುರಿತು ತನಿಖೆ ಆಗಬೇಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು ಸೆಕ್ಯುರಿಟಿ ಬಾಂಡ್‌ ಶೀಟ್‌?

ಮುಡಾದಲ್ಲಿ ಅಧಿಕಾರಿಗಳ ಪತ್ರ ಸಹಿ ನಕಲು ಮಾಡಿ ನಿವೇಶನಗಳ ಅಕ್ರಮಗಳ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸುತ್ತಿದ್ದ ಜಾಲ ಪತ್ತೆಯಾಗಿದ್ದರಿಂದ 2007ರಲ್ಲಿ ವಿಶೇಷ ವಿನ್ಯಾಸದ ಸೆಕ್ಯುರಿಟಿ ಬಾಂಡ್‌ ಶೀಟ್‌ ರೂಪದ ಮಂಜೂರಾತಿ ಪತ್ರಗಳ ಬಳಕೆ ಆರಂಭವಾಯಿತು. ‘ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳ ರೀತಿ ವಿನ್ಯಾಸಗೊಳಿಸಲಾಗಿದ್ದು ನಕಲು ಮಾಡಲು ಆಗದು. ಪ್ರತಿ ಪತ್ರದಲ್ಲೂ ಬಾರ್ ಕೋಡ್ ಆಧಾರಿತ ವಿಶಿಷ್ಟ ಸಂಖ್ಯೆ ಇದ್ದು ಸ್ಕ್ಯಾನ್‌ ಮಾಡಿದರೆ ಅದರ ಅಸಲಿಯತ್ತು ಪತ್ತೆ ಮಾಡಬಹುದು’ ಎಂದು ವಿವರಿಸುತ್ತಾರೆ ಮುಡಾದ ನಿವೃತ್ತ ಅಧಿಕಾರಿ ಪಿ.ಎಸ್. ನಟರಾಜ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.