ADVERTISEMENT

ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌: ಲೋಕಾಯುಕ್ತ ಎಸ್ಪಿಗೆ ಪ್ರದೀಪ್‌ಕುಮಾರ್ ದೂರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 6:43 IST
Last Updated 25 ಸೆಪ್ಟೆಂಬರ್ 2024, 6:43 IST
<div class="paragraphs"><p>ಸಿಎಂ ಸಿದ್ದರಾಮಯ್ಯ ವಿರುದ್ಧ&nbsp;ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿ ದೂರುದಾರ ಪ್ರದೀಪ್‌ಕುಮಾರ್ ಲೋಕಾಯುಕ್ತ ಎಸ್ಪಿಗೆ  ಮನವಿ ಸಲ್ಲಿಸಿದರು.</p></div>

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿ ದೂರುದಾರ ಪ್ರದೀಪ್‌ಕುಮಾರ್ ಲೋಕಾಯುಕ್ತ ಎಸ್ಪಿಗೆ ಮನವಿ ಸಲ್ಲಿಸಿದರು.

   

ಮೈಸೂರು: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಕೊಟ್ಟಿದ್ದ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್‌, ತನಿಖೆಗೆ ಅಸ್ತು ಎಂದಿರುವುದರಿಂದ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು’ ಎಂದು ಒತ್ತಾಯಿಸಿ ದೂರುದಾರರಲ್ಲಿ ಒಬ್ಬರಾದ ಬೆಂಗಳೂರಿನ ಎಸ್.ಪಿ. ಪ್ರದೀಪ್‌ಕುಮಾರ್ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಜೆಡಿಎಸ್‌ ಮುಖಂಡರೊಂದಿಗೆ ಇಲ್ಲಿನ ಲೋಕಾಯುಕ್ತ ಕಚೇರಿಗೆ ಬಂದ ಅವರು, ಮಂಗಳವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದ ತೀರ್ಪಿನ ಪ್ರತಿಯೊಂದಿಗೆ ದೂರು ಸಲ್ಲಿಸಿದರು. ಪ್ರತಿಯಾಗಿ ಸ್ವೀಕೃತಿ ನೀಡಲಾಯಿತು. ಆದರೆ, ‘ನಾನು ಹಿಂದೆ ಸಲ್ಲಿಸಿದ್ದ ದೂರು ಆಧರಿಸಿ ಕೈಗೊಂಡ ಕ್ರಮದ ಬಗ್ಗೆ ಹಿಂಬರಹ ಕೊಡಬೇಕು’ ಎಂದು ಪ್ರದೀಪ್‌ಕುಮಾರ್‌ ಪಟ್ಟು ಹಿಡಿದರು. ‘ಈಗ ಕೊಡುವುದಕ್ಕೆ ಬರುವುದಿಲ್ಲ’ ಎಂಬ ಪ್ರತಿಕ್ರಿಯೆ ನೀಡಿದ ಎಸ್ಪಿ ವಿರುದ್ಧ ಏರುದನಿಯಲ್ಲಿ ಪ್ರಶ್ನಿಸಿ, ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರದೀಪ್‌ಕುಮಾರ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಭಾಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಅಕ್ರಮದಲ್ಲಿ ಭಾಗಿಯಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಬಂಧಿಸುವಂತೆ ದೂರು ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಹೈಕೋರ್ಟ್‌ ಮಂಗಳವಾರ ನೀಡಿರುವ ಪ್ರಕಾರ, ನಾನು ಜುಲೈ 31ರಂದು ಹಾಗೂ ಆ.19ರಂದು ಸಲ್ಲಿಸಿರುವ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸಲು ಅವಕಾಶವಿದೆ. ನ್ಯಾಯಾಲಯವೇ ಹೇಳಿರುವಂತೆ ಪೂರ್ವ ಅನುಮತಿಯೇನೂ ಬೇಕಾಗುವುದಿಲ್ಲ. ಆದ್ದರಿಂದ ತನಿಖೆಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ’ ಎಂದರು.

‘ಈ ಕ್ಷಣದಲ್ಲೇ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದೆ. ಪ್ರತಿಕ್ರಿಯಿಸಿದ ಅಧಿಕಾರಿ, ತೀರ್ಪಿನ ಪ್ರತಿ ಓದಲು ಸಮಯಬೇಕಾಗುತ್ತದೆ ಎಂದರು. ಪ್ರತ ಕೊಟ್ಟಿದ್ದೇನೆ, ಓದಿ ಮನವರಿಕೆ ಮಾಡಿಕೊಡುತ್ತೇನೆ ಎಂದರೂ ಕೇಳಲಿಲ್ಲ. ನಾನು ಹಿಂದೆ ನೀಡಿದ ದೂರುಗಳನ್ನು ಆಧರಿಸಿಯೂ ಕ್ರಮ ಕೈಗೊಂಡಿಲ್ಲ; ಈಗ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಎಫ್‌ಐಆರ್‌ ಮಾಡಿ, ಆರೋಪಿಗಳನ್ನು ಬಂಧಿಸಬೇಕು ಎನ್ನುವುದು ನನ್ನ ಒತ್ತಾಯ. ಆದರೆ, ಲೋಕಾಯುಕ್ತ ಅಧಿಕಾರಿಗಳು ದುರ್ವರ್ತನೆ ತೋರುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಎಫ್‌ಐಆರ್ ದಾಖಲಿಸುವುದಕ್ಕೆ ಯಾವುದೇ ತಡೆಯಾಜ್ಞೆ ಕೂಡ ಇಲ್ಲ. ಆದರೆ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ. ಹಿಂಬರಹ ನೀಡದೇ ಹಾರಿಕೆ ಉತ್ತರ ಕೊಡುತ್ತಿದ್ದಾರೆ’ ಎಂದು ದೂರಿದರು.

‘ನಾನು ಮೊದಲ ದೂರು ಸಲ್ಲಿಸಿದ್ದಾಗ ಅಧಿಕಾರಿಯೇ ಬೇರೆ. ಈಗಿರುವ ಅಧಿಕಾರಿಯೇ ಬೇರೆ. ಮೈಸೂರು ಲೋಕಾಯುಕ್ತ ಎಸ್ಪಿ ವರ್ಗಾವಣೆಯಲ್ಲಿ ದುರುದ್ದೇಶಪೂರ್ವಕ ಕ್ರಮ ಕಂಡುಬರುತ್ತಿದೆ’ ಎಂದು ಆರೋಪಿಸಿದರು.

‘ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿ, ಪ್ರಕರಣ ದಾಖಲಿಸುವಂತೆ ನಿರ್ದೇಶನ ಕೊಡಿಸುವ ಕೆಲಸ ಮಾಡುತ್ತೇನೆ. ಎಫ್‌ಐಆರ್‌ ದಾಖಲಾದ ಮೇಲೆ, ಲೋಕಾಯುಕ್ತದ ಮೇಲೆ ನಮಗೆ ನಂಬಿಕೆ ಇಲ್ಲವಾದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ಕೇಳುತ್ತೇನೆ’ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಘಟಕದ ವಕ್ತಾರ ರವಿಚಂದ್ರೇಗೌಡ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಸ್‌ಬಿಎಂ ಮಂಜು ಸೇರಿದಂತೆ ಜೆಡಿಎಸ್‌ ಮುಖಂಡರು ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.