ADVERTISEMENT

ಮುಡಾ ಹಗರಣ | ಸಿದ್ದರಾಮಯ್ಯ ಆಪ್ತನಿಗೂ ‘50:50’ ನಿವೇಶನ

ನ್ಯಾಯಾಲಯದ ಆದೇಶ ಉಲ್ಲೇಖಿಸಿ ಹಂಚಿಕೆ; ನಂತರ ಆದೇಶಕ್ಕೆ ತಡೆ

ಆರ್.ಜಿತೇಂದ್ರ
Published 9 ಜುಲೈ 2024, 0:05 IST
Last Updated 9 ಜುಲೈ 2024, 0:05 IST
ಮುಡಾ ಕಚೇರಿ
ಮುಡಾ ಕಚೇರಿ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಕೇಶ್‌ ಪಾಪಣ್ಣ ಅವರ ತಂದೆ ಎ. ಪಾಪಣ್ಣ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ‘50:50’ ಅನುಪಾತದಲ್ಲಿ 20 ಬದಲಿ ನಿವೇಶನ ಹಂಚಿದೆ. ಇದೀಗ ಆ ಆದೇಶಕ್ಕೆ ತಡೆ ಬಿದ್ದಿದ್ದು, ದಾಖಲೆಗಳು ತನಿಖಾ ಸಮಿತಿಯ ಕೈ ಸೇರಿವೆ.

ಮೈಸೂರು ತಾಲ್ಲೂಕಿನ ಹಿನಕಲ್‌ ಗ್ರಾಮದ ಸರ್ವೆ ಸಂಖ್ಯೆ 211ರಲ್ಲಿದ್ದ 3 ಎಕರೆ 5 ಗುಂಟೆ ಜಮೀನನ್ನು ಮುಡಾ ವಿಜಯನಗರ ಬಡಾವಣೆಗಾಗಿ ವಶಪಡಿಸಿಕೊಂಡು 1981ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಭೂ ಮಾಲೀಕರು ಪರಿಹಾರ ಪಡೆಯದೇ ನ್ಯಾಯಾಲಯದ ಮೊರೆ ಹೋಗಿದ್ದರು.

2024ರ ಏಪ್ರಿಲ್‌ 15ರಂದು ಮಾಲೀಕರಾದ ಎ. ಪಾಪಣ್ಣ ಮುಡಾಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಕೋರಿದ್ದು, ಆಯುಕ್ತರು ಜೂನ್‌ 12ರಂದು ಒಟ್ಟು 36,753 ಚ.ಅಡಿ ಅಳತೆಯ ನಿವೇಶನಗಳನ್ನು ವಿಜಯನಗರ ಬಡಾವಣೆಯಲ್ಲೇ ಮಂಜೂರು ಮಾಡಿದ್ದಾರೆ.

ADVERTISEMENT

ಪ್ರಕರಣವೇನು?:
‘ನ್ಯಾಯಾಲಯದ ಸೂಚನೆಯಂತೆ ಭೂಸಂತ್ರಸ್ತರಿಗೆ ಆದ ನಷ್ಟಕ್ಕೆ ಅಂದಿನ ನಿಯಮಗಳಿಗೆ ಅನುಗುಣವಾಗಿ ಪರಿಹಾರ ಹಾಗೂ ಬಡ್ಡಿ ಪಾವತಿಯನ್ನು ಮುಡಾ ನೀಡಬಹುದಿತ್ತು. ಆದರೆ 50:50 ಅನುಪಾತದಲ್ಲಿ ಯಾವುದೇ ಬದಲಿ ನಿವೇಶನ ಹಂಚಿಕೆ ಮಾಡದಂತೆ ಸರ್ಕಾರವು 2023ರ ಅಕ್ಟೋಬರ್‌ನಲ್ಲೇ ಸ್ಪಷ್ಟ ನಿರ್ದೇಶನ ನೀಡಿದ್ದು, ಆ ಆದೇಶವನ್ನು ಉಲ್ಲಂಘಿಸಿ ಅವರಿಗೆ ಬದಲಿ ನಿವೇಶನಗಳನ್ನು ಹಂಚಲಾಗಿದೆ. ಇದು ಸರ್ಕಾರದ ಆದೇಶದ ವಿರುದ್ದ ನಡೆಯಾಗಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಲಾಗಿದೆ ’ ಎಂಬ ದೂರುಗಳು ಕೇಳಿಬಂದಿವೆ.

ಈ ಕುರಿತು ಮುಡಾ ಅಧ್ಯಕ್ಷ ಕೆ. ಮರಿಗೌಡ ಪ್ರತಿಕ್ರಿಯಿಸಿ, ‘ ಪಾಪಣ್ಣ ಅವರಿಗೆ ನ್ಯಾಯಾಲಯದ ಆದೇಶದ ಅನ್ವಯ ನಿವೇಶನ ಮಂಜೂರು ಮಾಡಲಾಗಿತ್ತು. ನಂತರ ಪರಿಶೀಲಿಸಲಾಗಿ, ಕೆಲವು ಲೋಪಗಳು ಕಂಡುಬಂದವು. ಇದೀಗ ಈ ಪ್ರಕರಣವೂ ಸೇರಿದಂತೆ 50:50 ಅನುಪಾತದಲ್ಲಿ ಹಂಚಿಕೆಯಾದ ಎಲ್ಲ ನಿವೇಶನಗಳನ್ನೂ ಸರ್ಕಾರವೇ ತಡೆ ಹಿಡಿದಿದೆ. ತನಿಖಾ ಸಮಿತಿಯು ಈ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪಾಪಣ್ಣ ಅವರಿಗೆ 20 ಬದಲಿ ನಿವೇಶನ ಹಂಚಿಕೆ ಆಗಿತ್ತು. ಅದರಲ್ಲಿ ಕೆಲವು ಗೊಂದಲಗಳು ಕಂಡುಬಂದ ಕಾರಣ ನಿವೇಶನ ಹಂಚಿಕೆಗೆ ತಡೆ ಬಿದ್ದಿದೆ
ಕೆ. ಮರಿಗೌಡ, ಮುಡಾ ಅಧ್ಯಕ್ಷ

ವಿಶ್ವನಾಥ್‌ ಪತ್ನಿಗೆ ಬದಲಿ ನಿವೇಶನ: ಮುಡಾ ಅಧ್ಯಕ್ಷರ ಆರೋಪ

‘ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಪತ್ನಿ ಶಾಂತಮ್ಮ ದೇವನೂರು ಅವರು ಮೂರನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಪಡೆದಿದ್ದು, ಅದಕ್ಕೆ ಹೆಚ್ಚುವರಿ ಶುಲ್ಕವನ್ನೇ ಪಾವತಿಸಿಲ್ಲ’ ಎಂದು ಮುಡಾ ಅಧ್ಯಕ್ಷ ಕೆ. ಮರಿಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಶಾಂತಮ್ಮ ಅವರು 2017ರಲ್ಲಿ ದೇವನೂರು
ಮೂರನೇ ಹಂತದಲ್ಲಿ 40X60 ಚ.ಅಡಿ ಅಳತೆಯ 2525 ಸಂಖ್ಯೆಯ ನಿವೇಶನ ಪಡೆದಿದ್ದರು. ನಂತರ ಅದನ್ನು ರಿಂಗ್‌ ರಸ್ತೆಗೆ ಸಮೀಪ ಇರುವ 307 ಸಂಖ್ಯೆಯ ನಿವೇಶನಕ್ಕೆ ಬದಲಿಸಿಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ವಿಧಾನಪರಿಷತ್‌ ಸದಸ್ಯರಾಗಿರುವವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ಆಕ್ಷೇಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನಿಯಮಗಳ ಅನುಸಾರವೇ ನಿವೇಶನ ಹಂಚಿಕೆ ಆಗಿದೆ. ಅದೇ ರೀತಿಯ ಪ್ರಕರಣವೊಂದರಲ್ಲಿ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲೇಖಿಸಿ ಮುಡಾ ನಿರ್ಣಯ ಕೈಗೊಂಡಿತ್ತು’ ಎಂದು ಮರಿಗೌಡ ಹಾಗೂ ಶಾಸಕರಾದ ಕೆ. ಹರೀಶ್‌ ಗೌಡ, ರಮೇಶ್ ಬಂಡಿಸಿದ್ದೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಡಿ. ತಿಮ್ಮಯ್ಯ ಸುದ್ದಿಗೋಷ್ಠಿಯಲ್ಲಿ
ಸಮರ್ಥಿಸಿಕೊಂಡರು. ‘50:50 ಅನುಪಾತದಲ್ಲಿ ಎಷ್ಟು ನಿವೇಶನ ಗಳನ್ನು ಹಂಚಲಾಗಿದೆ ಎಂಬ ಮಾಹಿತಿಯನ್ನು ಮುಂದಿನ ಮುಡಾ ಸಭೆಗೆ ಇಡಲಾಗುವುದು. ಯಾರೇ ಅಕ್ರಮ ಎಸಗಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು.

‘ಎಸ್‌.ಟಿ. ಸೋಮಶೇಖರ್ಆರೋಪಿಸಿ ರುವಂತೆ ಯಾವ ಶಾಸಕರೂ ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬೀರಿಲ್ಲ, ಒಂದೇ ಒಂದು ಇಂಚು ಭೂಮಿ ಪಡೆದಿಲ್ಲ. ಈ ವರ್ಷ ಜನವರಿಯಲ್ಲೇ ಮುಡಾ ಅಕ್ರಮಗಳ ಕುರಿತು ಎಲ್ಲ ಶಾಸಕರು ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಮುಡಾದ ಈಗಿನ ಸಮಿತಿಯನ್ನು ರದ್ದುಪಡಿಸಿ ಕೇವಲ 3–4 ಸದಸ್ಯರ ಸಮಿತಿ ರಚಿಸಲು ಮುಂದಾದರೆ ನಮ್ಮ ಸಹಮತವಿದೆ’ ಎಂದು
ಸುದ್ದಿಗೋಷ್ಠಿಯಲ್ಲಿದ್ದ ಶಾಸಕರು ಹೇಳಿದರು.

ಮುಡಾ ಹಗರಣದಲ್ಲಿ ಬೇರೆ ಪಕ್ಷದವರು ಭಾಗಿಯಾಗಿದ್ದಾರೆ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಆರೋಪಿಸಿದ್ದು, ಇದು ಮುಖ್ಯಮಂತ್ರಿಯನ್ನು ರಕ್ಷಿಸುವ ತಂತ್ರ
ಜಗದೀಶ ಶೆಟ್ಟರ್, ಸಂಸದ

ಸಿದ್ದರಾಮಯ್ಯ ವಿರುದ್ಧ ಆಸ್ತಿ ವಿವರ ಮರೆ ಮಾಚಿದ ಆರೋಪ

‘2010ರಲ್ಲೇ ಆಸ್ತಿ ನೋಂದಣಿಯಾಗಿದ್ದರೂ ‌‌‌2013ರ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ತಮ್ಮ ಪತ್ನಿ ಪಾರ್ವತಿಯವರ ಹೆಸರಿನಲ್ಲಿದ್ದ ಜಮೀನಿನ ವಿವರಗಳನ್ನು ಉಲ್ಲೇಖಿಸಿಲ್ಲ’ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಆರೋಪ ಮಾಡಿದ್ದಾರೆ. ‘ಪಾರ್ವತಿ ಅವರು ತಮ್ಮ ಸಹೋದರನಿಂದ 2010ರಲ್ಲಿ ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿನ 3 ಎಕರೆ 16 ಗುಂಟೆ ಜಮೀನನ್ನು ದಾನವಾಗಿ ಪಡೆದಿದ್ದರು. ಆದರೂ ಅದನ್ನು ಸಿದ್ದರಾಮಯ್ಯ 2013ರ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ. ಪತ್ನಿ ಹೆಸರಿನಲ್ಲಿ ₹2.5 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದು, ಆ ಜಮೀನಿನ ವಿವರಗಳು ಇಲ್ಲ’ ಎಂದು ಹೇಳಲಾಗಿದೆ.

₹25 ಲಕ್ಷ ಮೌಲ್ಯ: 2018ರ ಚುನಾವಣೆ ಸಂದರ್ಭ ಸಿದ್ದರಾಮಯ್ಯ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಾರ್ವತಿ ಅವರ ಹೆಸರಿನಲ್ಲಿ ಇದೇ ಜಮೀನನ್ನು ಉಲ್ಲೇಖಿಸಿದ್ದು, ಅದರ ಮೌಲ್ಯ ₹25 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ.

2023ರ ಚುನಾವಣಾ ಅಫಿಡವಿಟ್‌ನಲ್ಲಿ ಈ ಜಮೀನಿನ ಬದಲಾಗಿ ಮುಡಾ ನೀಡಿರುವ ನಿವೇಶನಗಳ ಉಲ್ಲೇಖವಿದೆ. ‘ಭೂ ಪರಿಹಾರ ರೂಪದಲ್ಲಿ ಒಟ್ಟು 37,190 ಚದರ ಅಡಿಯ ನಿವೇಶನಗಳನ್ನು ಮುಡಾ ವಿಜಯನಗರದಲ್ಲಿ ನೀಡಿದ್ದು, ಅದರ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹8.33 ಕೋಟಿ’ ಎಂದು ಅವರು
ಘೋಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.