ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮು ಅವರಿಗೆ ಸೇರಿದ ಕಚೇರಿ ಹಾಗೂ ಮನೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರದಿಂದ ಬುಧವಾರದವರೆಗೆ ಶೋಧ ನಡೆಸಿದ್ದು, ವ್ಯವಹಾರಗಳಿಗೆ ಸಂಬಂಧಿಸಿದ ನೂರಾರು ಪುಟಗಳ ದಾಖಲೆಗಳನ್ನು ತಮ್ಮೊಂದಿಗೆ ಒಯ್ದಿದ್ದಾರೆ.
ಇಲ್ಲಿನ ಕುವೆಂಪು ನಗರದಲ್ಲಿರುವ ಎಂಎಂಜಿ ಕನ್‌ಸ್ಟ್ರಕ್ಷನ್ಸ್ ಕಚೇರಿ ಹಾಗೂ ಶ್ರೀರಾಂಪುರದಲ್ಲಿರುವ ಜಯರಾಮು ಅವರ ನಿವಾಸಕ್ಕೆ ಸೋಮವಾರ ಬೆಳಿಗ್ಗೆಯಿಂದ ಇ.ಡಿ. ಅಧಿಕಾರಿಗಳ ತಂಡ ದಾಳಿ ಕಾರ್ಯಾಚರಣೆ ನಡೆಸಿತ್ತು. ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ಮುಕ್ತಾಯಗೊಂಡಿತು.
ಅವರ ರಿಯಲ್ ಎಸ್ಟೇಟ್ ವ್ಯವಹಾರಗಳು, 50:50 ಅನುಪಾತದಲ್ಲಿ ಪಡೆದ ನಿವೇಶನಗಳು, ಮುಡಾದ ಹಿಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಸೇರಿದಂತೆ ಅಧಿಕಾರಿಗಳೊಂದಿಗೆ ಹೊಂದಿರುವ ನಂಟಿನ ಕುರಿತು ಇ.ಡಿ. ಪ್ರಶ್ನಿಸಿದೆ. ಕಂಪನಿಯ ಎಲ್ಲ ವ್ಯವಹಾರಗಳ ದಾಖಲೆಗಳ ನಕಲು ಪ್ರತಿಗಳು, ಎಂಎಂಜಿ ಕನ್ಸ್‌ಸ್ಟ್ರಕ್ಷನ್ಸ್ ಹಾಗೂ ವಕ್ರತುಂಡ ಸೊಸೈಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನವರಾದ ಜಯರಾಮು ಮೊದಲು ಕಟ್ಟಡ ಕಾರ್ಮಿಕರಾಗಿದ್ದು, ಅಲ್ಪ ಅವಧಿಯಲ್ಲಿ ದೊಡ್ಡ ಪ್ರಮಾಣದ ವ್ಯವಹಾರಗಳನ್ನು ನಡೆಸುತ್ತಿರುವ ಹಾಗೂ ಆಸ್ತಿ ಹೊಂದಿರುವ ಕುರಿತೂ ಇ.ಡಿ. ಪ್ರಶ್ನಿಸಿತು. ಮುಡಾ ಅಧಿಕಾರಿಗಳು ಹಾಗೂ ಅವರ ಕುಟುಂಬದೊಂದಿಗಿನ ನಂಟಿನ ಕುರಿತೂ ವಿಚಾರಣೆ ನಡೆಸಿತು ಎನ್ನಲಾಗಿದೆ.
ಮಾಹಿತಿ ನೀಡಿದ್ದೇನೆ:
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಯರಾಮು, ‘13 ವರ್ಷದಿಂದ ಈ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದು, ಸಾವಿರಾರು ಮನೆ ಹಾಗೂ ನಿವೇಶನಗಳನ್ನು ನಿರ್ಮಿಸಿದ್ದೇನೆ. ಅದಕ್ಕೆ ಸಂಬಂಧಿಸಿ ಅಧಿಕಾರಿಗಳು ಕೇಳಿದ ಎಲ್ಲ ಮಾಹಿತಿಗಳನ್ನೂ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದ್ದಾರೆ’ ಎಂದರು.
‘ಕ್ಯಾಥೊಲಿಕ್ ಸೊಸೈಟಿಗೆ ಮುಡಾದಿಂದ 50:50 ಅನುಪಾತದ ಅಡಿ ನೀಡಲಾಗಿದ್ದ ನಿವೇಶನಗಳ ಪೈಕಿ 5 ನಿವೇಶನಗಳನ್ನು ಖರೀದಿಸಿದ್ದು, ಅದರ ಮಾಹಿತಿ ನೀಡಿದ್ದೇನೆ. ವಕ್ರತುಂಡ ಸಹಕಾರ ಸಂಘವು ಸಾರ್ವಜನಿಕರ ಸೊಸೈಟಿಯಾಗಿದ್ದು, ನಾನು ನಿರ್ದೇಶಕನಷ್ಟೇ. ಮುಡಾ ಆಯುಕ್ತ ದಿನೇಶ್ ಅವರನ್ನು ಬಡಾವಣೆಗಳ ಕೆಲಸಕ್ಕೆ ಸಂಬಂಧಿಸಿ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಅವರು ಹಾಗೂ ಅವರ ಬಾಮೈದ ತೇಜಸ್ ಗೌಡ ಜೊತೆಗೂ ವ್ಯಾವಹಾರಿಕ ಸಂಬಂಧವಿಲ್ಲ. ಯಾರ ಹೆಸರಿನಲ್ಲೂ ಬೇನಾಮಿ ಆಸ್ತಿ ಹೊಂದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.