ADVERTISEMENT

ಮುಡಾ ಹಗರಣ: ಅಧಿವೇಶನದಲ್ಲೇ ‘ಕೈ’ ಸೇರುತ್ತಾ ತನಿಖಾ ವರದಿ?

ತನಿಖೆಗೆ ನೀಡಿದ ಅವಧಿ ಎರಡು ವಾರವೋ? ನಾಲ್ಕು ವಾರವೋ?

ಆರ್.ಜಿತೇಂದ್ರ
Published 11 ಜುಲೈ 2024, 23:30 IST
Last Updated 11 ಜುಲೈ 2024, 23:30 IST
ಮುಡಾ ಕಚೇರಿ. ಪ್ರಜಾವಾಣಿ ಚಿತ್ರ.
ಮುಡಾ ಕಚೇರಿ. ಪ್ರಜಾವಾಣಿ ಚಿತ್ರ.   

ಮೈಸೂರು: ಮುಡಾದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆಯ ತನಿಖೆಗಾಗಿ ಸರ್ಕಾರವು ರಚಿಸಿರುವ ನಾಲ್ವರು ತಜ್ಞರ ಸಮಿತಿಯ ವರದಿಯು ವಿಧಾನಮಂಡಲ ಅಧಿವೇಶನದ ಸಂದರ್ಭವೇ ಸರ್ಕಾರದ ಕೈ ಸೇರುತ್ತದೆಯೇ ಅಥವಾ ಸಮಿತಿಗೆ ನೀಡಿರುವ ಗಡುವು ಇನ್ನೆರಡು ವಾರ ವಿಸ್ತರಣೆಯಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ನಗರಾಭಿವೃದ್ಧಿ ಇಲಾಖೆಯು ಜುಲೈ 1ರಂದು ಸಮಿತಿ ರಚಿಸಿ, 15 ದಿನದೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಜುಲೈ 15ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಂದೇ ಸರ್ಕಾರವು ಸಮಿತಿಗೆ ನೀಡಿರುವ ಕಾಲಾವಧಿಯು ಪೂರ್ಣಗೊಳ್ಳಲಿದೆ.

‘ತನಿಖೆಗಾಗಿ ಸಮಿತಿಗೆ ನಾಲ್ಕು ವಾರ ಕಾಲಾವಕಾಶ ನೀಡಿದ್ದೇವೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹೇಳಿದ್ದರು. ಆದರೆ ಸರ್ಕಾರಿ ಆದೇಶದಲ್ಲಿ, ‘15 ದಿನಗಳ ಒಳಗೆ ವರದಿ ನೀಡಬೇಕು’ ಎಂದು ಸೂಚಿಸಲಾಗಿದೆ.

ADVERTISEMENT

ತನಿಖೆ ಪ್ರಗತಿಯಲ್ಲಿ:
ಇಲಾಖೆಯ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಹಾಗೂ ಗ್ರಾಮಾಂತರ ಯೋಜನಾ ವಿಭಾಗದ ಆಯುಕ್ತ ಆರ್. ವೆಂಕಟಾಚಲಪತಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ.ಸಿ. ಶಶಿಕುಮಾರ್‌, ಜಂಟಿ ನಿರ್ದೇಶಕಿ ಶಾಂತಲಾ ಹಾಗೂ ಉಪ ನಿರ್ದೇಶಕ ಪ್ರಕಾಶ್‌ ಅವರನ್ನು ಒಳಗೊಂಡ ಸಮಿತಿಯು ತನಿಖೆ ನಡೆಸುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರವು ಮುಡಾ ಅಕ್ರಮಗಳ ತನಿಖೆಗಾಗಿ ಟಿ.ವಿ. ಮುರಳಿ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯಲ್ಲಿಯೂ ಶಾಂತಲಾ ಸದಸ್ಯರಾಗಿದ್ದರು.

ಜುಲೈ 3ರಿಂದ ನಗರದಲ್ಲೇ ಬೀಡುಬಿಟ್ಟಿರುವ ಸಮಿತಿ ಸದಸ್ಯರು, ಮುಡಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆವರಿಳಿಸತೊಡಗಿದ್ದಾರೆ. ದಾಖಲೆಗಳ ಪರಿಶೀಲನೆ ತೀವ್ರಗೊಂಡಿದೆ. ಮುಡಾದ ಕಾಯಂ ಸಿಬ್ಬಂದಿ ಜೊತೆಗೆ ಗುತ್ತಿಗೆ ಸಿಬ್ಬಂದಿಯನ್ನೂ ವಿಚಾರಣೆಗೆ ಗುರಿಪಡಿಸಿದೆ.

ನಿಯಮ ಉಲ್ಲಂಘಿಸಿ ₹250 ಕೋಟಿ ಠೇವಣಿ

ಮುಡಾ ಖಾತೆಯಲ್ಲಿದ್ದ ₹250 ಕೋಟಿ ಠೇವಣಿಯನ್ನು ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬ್ಯಾಂಕ್‌ವೊಂದರಲ್ಲಿ ನಿಶ್ಚಿತ ಠೇವಣಿ ಇಡಲು ಮುಂದಾಗಿ, ನಂತರ ವಾಪಸ್ ಪಡೆದಿದ್ದನ್ನು ಟಿ.ವಿ. ಮುರಳಿ ನೇತೃತ್ವದ ತಾಂತ್ರಿಕ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

2022ರ ಮಾರ್ಚ್‌ 2ರಂದು ಅಂದಿನ ಆಯುಕ್ತರು ಹಣವನ್ನು ಎಸ್‌ಬಿಐನ ಲಕ್ಷ್ಮಿಪುರಂ ಶಾಖೆಯಲ್ಲಿ ಖಾತೆ ತೆರೆದು ಒಂದು ವರ್ಷದ ಅವಧಿಗೆ ಶೇ 3.75 ಬಡ್ಡಿದರದಂತೆ ಠೇವಣಿ ಇಡಲು ಕೋರಿ ಚೆಕ್ ಕಳುಹಿಸಿದ್ದರು. ಅದಕ್ಕೆ ಅಂದಿನ ಅಧ್ಯಕ್ಷ ಎಚ್‌.ವಿ. ರಾಜೀವ್ ಆಕ್ಷೇಪಿಸಿದ್ದರು. ನಂತರ ಆಯುಕ್ತರು ಚೆಕ್‌ ಹಿಂಪಡೆದಿದ್ದರು. ಈ ಕುರಿತು ತಾಂತ್ರಿಕ ಸಮಿತಿ ಎದುರು ದೂರು ದಾಖಲಾಗಿತ್ತು.

‘ಪ್ರಾಧಿಕಾರದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮಾರ್ಗಸೂಚಿ ಇದೆ. ಮೊದಲಿಗೆ ಆಂತರಿಕ ಹೂಡಿಕೆ ಉಪ ಸಮಿತಿಯನ್ನು ರಚಿಸಿ, ಅಲ್ಲಿ ವಿಷಯ ಮಂಡಿಸಿ ಅನುಮತಿ ಪಡೆಯಬೇಕು. ಸರ್ಕಾರದ ಇ–ಪೋರ್ಟಲ್‌ ಮೂಲಕ ಬಿಡ್‌ ಆಹ್ವಾನಿಸಿ ಗರಿಷ್ಠ ಬಿಡ್ ಪಡೆದ ಬ್ಯಾಂಕಿನಲ್ಲಿ ಠೇವಣಿ ಇಡಬೇಕಿತ್ತು. ಆದರೆ ಆಯುಕ್ತರು ಸರ್ಕಾರದ ಸುತ್ತೋಲೆಗಳಿಗೆ ವ್ಯತಿರಿಕ್ತವಾಗಿ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿ ಠೇವಣಿ ಇರಿಸಿದ್ದಾರೆ’ ಎಂದು ಸಮಿತಿಯು ಸರ್ಕಾರಕ್ಕೆ ವರದಿ ನೀಡಿತ್ತು.

‘ಪ್ರಕರಣ ಬೆಳಕಿಗೆ ಬರುತ್ತಲೇ ಠೇವಣಿ ಆದೇಶ ಹಿಂಪಡೆಯುವಂತೆ ಆಯುಕ್ತರಿಗೆ ಸೂಚಿಸಿದ್ದೆ. ನಂತರ ಅಧಿಕಾರಿಗಳು ಬ್ಯಾಂಕ್‌ಗೆ ನೀಡಿದ್ದ ₹250 ಕೋಟಿ ಮೊತ್ತದ ಚೆಕ್‌ ಹಿಂಪಡೆದಿದ್ದರು’ ಎಂದು ಎಚ್‌.ವಿ. ರಾಜೀವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿಯೇ ಇಲ್ಲ: ಮುಡಾ ಅಕ್ರಮ ಕುರಿತು ಟಿ.ವಿ. ಮುರಳಿ ನೇತೃತ್ವದ ಸಮಿತಿಯು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ ಕುರಿತು ಮುಡಾ ಸಮಿತಿಯ ಕೆಲವು ಸದಸ್ಯರಿಗೇ ಮಾಹಿತಿಯೇ ಇಲ್ಲ. ‘ಅಂತಹದ್ದೊಂದು ಸಮಿತಿ ರಚನೆ ಆಗಿದ್ದೇ ಗೊತ್ತಿಲ್ಲ. ಆ ವರದಿಗಳ ಬಗ್ಗೆ ಮಾಹಿತಿ ಇಲ್ಲ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಮರಿಗೌಡ ವಿರುದ್ಧ ಸಿ.ಎಂ. ಗರಂ

ಮುಡಾದ ಈಚಿನ ಬೆಳವಣಿಗೆಗಳ ಕುರಿತು ಅಧ್ಯಕ್ಷ ಕೆ. ಮರಿಗೌಡ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದು, ಮೈಸೂರು ಪ್ರವಾಸದ ವೇಳೆ ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿ ಅಧ್ಯಕ್ಷರ ಪತ್ರ ವ್ಯವಹಾರಗಳು ಹಾಗೂ ನಂತರದ ಬೆಳವಣಿಗೆಗಳು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿವೆ. ಈ ಹಿನ್ನೆಲೆಯಲ್ಲಿ ಮರಿಗೌಡರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಕಾಂಗ್ರೆಸ್ ಒಳಗಿನ ಗುಂಪುಗಾರಿಕೆ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ವರ್ಷದಲ್ಲಿ ಐವರಿಗೆ 3.37 ಲಕ್ಷ ಚ.ಅಡಿ ಜಾಗ– ಶಾಸಕ ಶ್ರೀವತ್ಸ

‘2023ರ ಮಾರ್ಚ್‌ನಿಂದ ಈವರೆಗೆ ಒಟ್ಟು 3.37 ಲಕ್ಷ ಚದರ ಅಡಿ ಜಾಗವನ್ನು ಕೇವಲ ಐವರಿಗೆ ಮುಡಾ ನೀಡಿದೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಕ್ರಮವಾಗಿ ಶಾಂತಮ್ಮ 81 ಸಾವಿರ, ನಾಗರಾಜು 98 ಸಾವಿರ, ಪಾಪಣ್ಣ 33 ಸಾವಿರ, ಅಬ್ದುಲ್ ವಾಹಿದ್ 55ಸಾವಿರ ಹಾಗೂ ಮತ್ತೊಬ್ಬರಿಗೆ 70 ಸಾವಿರ ಚದರ ಅಡಿ ಜಾಗವನ್ನು ಕೊಡಲಾಗಿದೆ. ಅವುಗಳನ್ನೇ (20X30 ಅಡಿ) ನಿವೇಶನ ಮಾಡಿದ್ದರೆ 545 ಬಡವರಿಗೆ ನೀಡಬಹುದಾಗಿತ್ತು’ ಎಂದು ಪ್ರತಿಪಾದಿಸಿದರು.

‘1969ರಲ್ಲಿ ಭೂಸ್ವಾಧೀನ ಪಡಿಸಿಕೊಂಡ ಪ್ರಕರಣದಲ್ಲಿ ಈಗ ಭೂಪರಿಹಾರ ನೀಡಲಾಗುತ್ತಿದೆ ಎಂದು ತೋರಿಸಿದ ಉದಾಹರ ಣೆಯೂ ಇದೆ. 1978ರಲ್ಲಿ ಗೋಕುಲಂ ಬಡಾವಣೆಯಲ್ಲಿ ಪಡೆದಿದ್ದಕ್ಕೆ ಈಗ ಜಾಗ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಆ ಹಗರಣವೀಗ ಮುಖ್ಯಮಂತ್ರಿ ಮನೆಯ ಬಾಗಿಲಿನವರೆಗೂ ಬಂದಿದೆ. ಮುಖ್ಯಮಂತ್ರಿಯು ₹ 62 ಕೋಟಿ ಹಣ ಕೇಳುತ್ತಿದ್ದಾರೆ. ಮೈಸೂರಿನಲ್ಲಿ ಒಂದು ಎಕರೆಗೆ ₹20 ಕೋಟಿ ಮೌಲ್ಯ ಎಲ್ಲಿದೆ’ ಎಂದು ಕೇಳಿದರು. ‘ಮುಡಾ ಅಕ್ರಮಕ್ಕೆ ಸಂಬಂಧಿಸಿ 2023ರ ನವೆಂಬರ್‌ನಲ್ಲೇ ತಾಂತ್ರಿಕ ಸಮಿತಿಯು ವರದಿ ಸಲ್ಲಿಸಿದ್ದರೂ, ಸರ್ಕಾರ ಕ್ರಮವನ್ನೇ ಜರುಗಿಸಿಲ್ಲ’ ಎಂದು ದೂರಿದರು.

‘ಮುಡಾದಲ್ಲಿ ನಡೆದಿರುವ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜುಲೈ 12ರಂದು ಬೆಳಿಗ್ಗೆ 10.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಿಂದ 10ಸಾವಿರ ಕಾರ್ಯಕರ್ತರು ಬರಲಿದ್ದಾರೆ’ ಎಂದರು.‘ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ ತಿಳಿಸಿದರು.

ಅಧಿಕಾರಿಗಳೇ ಹೊಣೆ: ಜಿಟಿಡಿ

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನಗಳ ಹಂಚಿಕೆ ಅಕ್ರಮಗಳಿಗೆ ಅಧಿಕಾರಿಗಳೇ ಹೊಣೆ. ಶಾಸಕರ ಪಾತ್ರವಿಲ್ಲ’ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಪ್ರತಿಪಾದಿಸಿದರು.

‘ಅಕ್ರಮ ಎನ್ನಲಾಗಿರುವ ಪ್ರಕರಣಗಳು ಪ್ರಾಧಿಕಾರದ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಅರ್ಜಿಗಳನ್ನು ಪರಿಶೀಲಿಸಿ ನಿವೇಶನ ನೀಡುವುದು ಅಧಿಕಾರಿಗಳ ಕರ್ತವ್ಯ. ಶಾಸಕರೇ ಶಿಫಾರಸು ಮಾಡಿದರೂ ಅಧಿಕಾರಿಗಳು ಪರಿಶೀಲಿಸಿ ತೀರ್ಮಾನಿಸಬೇಕು. ಅವರ ಲೋಪದಿಂದಲೇ ಇಷ್ಟೆಲ್ಲ ಸುದ್ದಿಯಾಗುತ್ತಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘50:50 ಅನುಪಾತದಲ್ಲಿ ಈ ಹಿಂದೆಯೂ ಅರ್ಹರಿಗೆ ಬದಲಿ ನಿವೇಶನ ನೀಡಲಾಗಿದೆ. ಆದರೆ, ಲೋಕಸಭೆ ಚುನಾವಣೆ ನೀತಿಸಂಹಿತೆ ಅವಧಿಯ ಮೂರು ತಿಂಗಳಲ್ಲಿ ಅತಿಹೆಚ್ಚು ಬದಲಿ ನಿವೇಶನ ಮಂಜೂರಾಗಿದೆ. ಕಾಂಗ್ರೆಸ್ ಅವಧಿಯಲ್ಲಿಯೇ ಹೆಚ್ಚು ಬದಲಿ ನಿವೇಶನ ನೀಡಿದ್ದು, ಆಯುಕ್ತರೇ ಹೊಣೆ’ ಎಂದರು.

‘ನನ್ನ ಬಳಿಯೂ ಮುಡಾದ ನೂರಕ್ಕೂ ಹೆಚ್ಚು ನಿವೇಶನಗಳಿವೆ ಎಂದು ಕೆಲವರು ಆರೋಪಿಸಿದ್ದಾರೆ. ಅಂತಹ ಒಂದು ನಿವೇಶನ ತೋರಿಸಿದರೂ ಅವರ ಹೆಸರಿಗೇ ಬರೆದುಕೊಡುತ್ತೇನೆ’ ಎಂದು ಸವಾಲು ಹಾಕಿದರು.

‘ಶಾಸಕರೇ ಫೈಲ್ ಹಿಡಿದು ಬರುತ್ತಾರೆ’ ಎಂಬ ಮಾಜಿ ಸಚಿವ ಎಸ್.ಟಿ. ಸೋಮಶೇಖರ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ಯಾವ ಶಾಸಕರೂ ಸೈಟು ಕೇಳಲು ಹೋಗಿಲ್ಲ. ಆಗ ಅವರದ್ದೇ ಸರ್ಕಾರ ಇತ್ತು. ಯಾಕೆ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಶ್ನಿಸಿದರು.

‘ಮುಡಾ ಸಮಿತಿಯಿಂದ ಶಾಸಕರನ್ನು ಕೈ ಬಿಡುವ ಕುರಿತು ಪ್ರತಿಕ್ರಿಯಿಸಿ ‘ ಈಗ ಅಕ್ರಮ ಎಸಗಿರುವುದು ಅಧಿಕಾರಿಗಳಾ ಅಥವಾ ಶಾಸಕರಾ’ ಎಂದು ಮರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.