ADVERTISEMENT

ಸಮಾಜದ ಹಿತವೇ ಕವಿಯ ಧ್ಯೇಯ: ಮುಕುಂದರಾಜ್

ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:58 IST
Last Updated 26 ಮೇ 2024, 15:58 IST
<div class="paragraphs"><p>ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಎಂ. ಜವರಾಜ್‌ ಅವರಿಗೆ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ಯನ್ನು&nbsp;ಪ್ರೊ.ಮಹದೇವ ಪ್ರದಾನ ಮಾಡಿದರು. ರಶ್ಮಿ ಕೋಟಿ, ಸುಬ್ಬು ಹೊಲೆಯಾರ್‌, ಡಿ. ಚಂದ್ರಶೇಖರಯ್ಯ, ಆರ್‌. ರಾಜು, ಎಲ್‌.ಎನ್‌. ಮುಕುಂದರಾಜು, ಸ್ಟ್ಯಾನ್ಲಿ, ಸಿ.ಎಂ. ನರಸಿಂಹಮೂರ್ತಿ ಹಾಗೂ ಕೆ.ಆರ್. ಗೋಪಾಲಕೃಷ್ಣ ಪಾಲ್ಗೊಂಡರು </p></div>

ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಎಂ. ಜವರಾಜ್‌ ಅವರಿಗೆ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ಯನ್ನು ಪ್ರೊ.ಮಹದೇವ ಪ್ರದಾನ ಮಾಡಿದರು. ರಶ್ಮಿ ಕೋಟಿ, ಸುಬ್ಬು ಹೊಲೆಯಾರ್‌, ಡಿ. ಚಂದ್ರಶೇಖರಯ್ಯ, ಆರ್‌. ರಾಜು, ಎಲ್‌.ಎನ್‌. ಮುಕುಂದರಾಜು, ಸ್ಟ್ಯಾನ್ಲಿ, ಸಿ.ಎಂ. ನರಸಿಂಹಮೂರ್ತಿ ಹಾಗೂ ಕೆ.ಆರ್. ಗೋಪಾಲಕೃಷ್ಣ ಪಾಲ್ಗೊಂಡರು

   

–ಪ್ರಜಾವಾಣಿ ಚಿತ್ರ

ಮೈಸೂರು: ‘ಕವಿ ಕಾವ್ಯ ರಚಿಸುವುದು ತನ್ನ ಕಾರಣಕ್ಕಾಗಿ ಅಲ್ಲ. ಸಮಾಜದ ಹಿತಕ್ಕಾಗಿ ಎಲ್ಲ ಸೂಕ್ಷ್ಮಗಳನ್ನು ಸಮಾಜದ ಮುಂದಿಡುತ್ತಾನೆ’ ಎಂದು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು.

ADVERTISEMENT

ಚಾಮರಾಜನಗರದ ರಂಗವಾಹಿನಿ, ನೆಲೆ ಹಿನ್ನೆಲೆ ಹಾಗೂ ರಾಮ ಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 12ನೇ ವರ್ಷದ ರಾಜ್ಯ ಮಟ್ಟದ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ ಪ್ರದಾನ, ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನವ್ಯ ಕಾಲದಲ್ಲಿ ಕವಿ ತನ್ನ ಕಾವ್ಯದ ಬಗ್ಗೆ ಹೇಳದೇ ಹೊಸದಾದ ಬರಹವನ್ನು ಪ್ರಚಾರ ಮಾಡುತ್ತಿದ್ದರು. ಲಂಕೇಶ್,‍ ಅಡಿಗರು, ಅನಂತಮೂರ್ತಿ, ಕಿ.ರಂ.ನಾಗರಾಜ್‌, ಡಿ.ಆರ್.ನಾಗರಾಜು ಹೊಸ ಲೇಖಕರಿಗೆ ಪ್ರಚಾರ ಕೊಡುತ್ತಿದ್ದರು. ಅದರಿಂದಲೇ ಆ ಕಾಲದಲ್ಲಿ ಸಿನಿಮಾ ನಟರಿಗಿಂತ ಸಾಹಿತಿಗಳು ಸ್ಟಾರ್ ಗಿರಿ ಪಡೆದುಕೊಂಡಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ. ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗುವ ಮುನ್ನ ಜವರಾಜ್ ಹೆಸರು ಕೇಳಿರಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ ಮತ್ತೊಬ್ಬ ಲೇಖಕನ ಬರಹ ಓದುವ ಉತ್ಸಾಹ ನಮ್ಮಲ್ಲಿ ಇಲ್ಲವಾಗಿದೆ. ಇದು ಕನ್ನಡದ ಮಟ್ಟಿಗೆ ದೊಡ್ಡ‍ ಕೊರತೆ ಅನಿಸುತ್ತದೆ’ ಎಂದು ವಿಷಾದಿಸಿದರು.

ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ ‘ಮುಳ್ಳೂರು ನಾಗರಾಜ ಅವರ ಕಾವ್ಯ ಪ್ರೀತಿ ಅಪರಿಮಿತವಾದದ್ದು, ತಗಡೂರು ಭೂ ಹೋರಾಟದ ವೇಳೆ ಗುಡಿಸಿಲಲ್ಲೇ ಕವಿತೆಗಳನ್ನು ಬರೆದಿದ್ದನ್ನು ಕಂಡಿದ್ದೇನೆ. ಬದನವಾಳು ದುರಂತದ ಪುಸ್ತಕ ಬರೆದರು. ಪುರೋಹಿತಶಾಹಿ ವಿರೋಧಿಸಿದ್ದರಿಂದ ಪ್ರಶಸ್ತಿಗಳು ಬರಲಿಲ್ಲ. ಆದರೆ, ಅಪ್ಪಟ ಹೋರಾಟಗಾರ’ ಎಂದು ಬಣ್ಣಿಸಿದರು.

ತಿ. ನರಸೀಪುರದ ಕವಿ ಎಂ.ಜವರಾಜ್ ಅವರಿಗೆ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ ಪ್ರೊ. ಮಹದೇವ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರ ಕುರಿತು ಕವಿ ಸುಬ್ಬು ಹೊಲೆಯಾರ್ ಮಾತನಾಡಿದರು. ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಆರ್. ರಾಜು ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಕೋಟಿ ಕುರಿತು ಒಡನಾಡಿ ಸಂಘಟನೆಯ ಸ್ಟ್ಯಾನ್ಲಿ ಮಾತನಾಡಿದರು. ಪತ್ರಕರ್ತೆ ರಶ್ಮಿ ಕೋಟಿ, ನೆಲೆ ಹಿನ್ನೆಲೆ ಸಂಸ್ಥೆಯ ಕೆ.ಆರ್. ಗೋಪಾಲಕೃಷ್ಣ, ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಮುಳ್ಳೂರು ರಾಜು ಪಾಲ್ಗೊಂಡರು.

ನಂತರದಲ್ಲಿ ಬೆಂಗಳೂರಿನ ಸಂಸ ಥಿಯೇಟರ್ ರಂಗಧರ್ಮ ಕಲಾವಿದರು ತಿಪಟೂರು ಪ್ರದೀಪ್ ನಿರ್ದೇಶನದಲ್ಲಿ ‘ಮಿಸೆಸ್ ಅಂಬೇಡ್ಕರ್’ ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.