ಮೈಸೂರು: ‘ಒಂದೇ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಿಲ್ಲ. ಹತ್ತಾರು ಕ್ಷೇತ್ರಗಳಲ್ಲಿ ವ್ಯಕ್ತಿತ್ವ ಹರಡಿದ್ದರೆ ಅದು ಸ್ಥಿರವಾಗಿರುತ್ತದೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಪ್ರತಿಪಾದಿಸಿದರು.
ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಡಿವಿಜಿ ಬಳಗವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಸತ್ಯೇಶ್ ಎನ್.ಬೆಳ್ಳೂರು ಅವರಿಗೆ ‘ಡಿವಿಜಿ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಅರ್ಥಪೂರ್ಣ ಚೌಪದಿ, ಕಾವ್ಯ, ಗದ್ಯ ಬರೆದಿರುವ ಸತ್ಯೇಶ್ ಅವರು ಜೇನುಹುಳದಂತೆ ಕೆಲಸ ಮಾಡಿದ್ದಾರೆ. ವಿಜ್ಞಾನ ವಿದ್ಯಾರ್ಥಿ, ತಂತ್ರಜ್ಞ, ಪ್ರವಾಸಿಯಾಗಿ ಗಳಿಸಿದ ಅನುಭವವನ್ನು ಕಾವ್ಯದ ಮೂಲಕ ಅನಾವರಣಗೊಳಿಸಿದ್ದಾರೆ. ಚೌಪದಿಗಳನ್ನು ದ್ವಿತೀಯಾಕ್ಷರವನ್ನು ಪ್ರಾಸ ಬಿಡದೇ ಸುಂದರವಾಗಿ ಬರೆದಿದ್ದಾರೆ. ಜೇನುತುಪ್ಪ ಸವಿದಷ್ಟೇ ರಸಸ್ವಾದ ಸಿಗುತ್ತದೆ’ ಎಂದು ಶ್ಲಾಘಿಸಿದರು.
‘ಒಂದೇ ವಿಷಯದಲ್ಲಿ ಸಾಧನೆ ಮಾಡಿದರೂ ಅದು ಅಸ್ಥಿರವಾಗುತ್ತದೆ. ಬಹುಮುಖಿಯಾದರೆ ಅನುಭವ ಗಾಢವಾಗಿರುತ್ತದೆ. ಹೀಗಾಗಿಯೇ ಕೆ.ಶಿವರಾಮ ಕಾರಂತರು ತಮ್ಮ ಆತ್ಮಕಥನಕ್ಕೆ ಹುಚ್ಚು ಮನಸ್ಸಿನ ಹತ್ತುಮುಖಗಳು ಎಂದು ಕರೆದಿದ್ದರು’ ಎಂದು ಸ್ಮರಿಸಿದರು.
‘20ನೇ ಶತಮಾನ ಕನ್ನಡ ಸಾಹಿತ್ಯದ ಸುವರ್ಣಯುಗವಾಗಿದೆ. ಈ ಘಟ್ಟದಲ್ಲಿ ಸಿಕ್ಕ ಹರವು ಹಾಗೂ ಆಳ ಎಂದೂ ಕನ್ನಡ ಸಾಹಿತ್ಯಕ್ಕೆಂದೂ ಸಿಕ್ಕಿರಲಿಲ್ಲ. ವೈವಿಧ್ಯದ ಕಾವ್ಯ, ಗದ್ಯ, ಛಂದಸ್ಸು, ತ್ರಿಪದಿ, ಚೌಪದಿಗಳು, ಗೀತ ನಾಟಕಗಳು ರಚನೆಯಾದವು. ಎಲ್ಲ ಪ್ರಕಾರಗಳಲ್ಲೂ ಶ್ರೀಮಂತ ಕೃತಿಗಳು ಬಂದವು. ಕಾವ್ಯ ವೈಭವ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಯಾವುದೋ ಒಂದು ಚಿಂತನೆಯು ಒಂದು ಪರಂಪರೆ ಹುಟ್ಟುಹಾಕುವುದಲ್ಲದೇ ಜೀವನವನ್ನೇ ಬದಲಿಸಿ ಬಿಡುತ್ತದೆ. ಪ್ರಪಂಚ ನಡೆಯುವ ದಾರಿ, ನೋಡುವ ದೃಷ್ಟಿ ಬೇರೆಯಾಗಿಬಿಡುತ್ತದೆ. ನವಿರಾದ ಭಾಷೆಯಲ್ಲಿ ಬಂದ ಡಿವಿಜಿ ಅವರ ಮಂಕುತಿಮ್ಮನ ಕಗ್ಗವು ಓದುಗರಿಗೆ ಮಾರ್ಗವನ್ನು ತೋರಿತು’ ಎಂದು ವಿವರಿಸಿದರು.
ಗುರುರಾಜ ಕರಜಗಿ ಅವರ ‘ಸಾಕ್ಷಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು
ಕವಿ ಕೆ.ಸಿ.ಶಿವಪ್ಪ, ಬಳಗದ ಸಂಚಾಲಕ ಸಿ.ಕನಕರಾಜು, ‘ಮೈ ಕರಿಯರ್ ಲ್ಯಾಬ್’ನ ಪ್ರೊ.ಶಂಕರ್ ಬೆಳ್ಳೂರು, ಬಳಗದ ಸದಸ್ಯರಾದ ಸಮನ್ವಿತಾ, ಪ್ರೊ.ಶಂಕರ್ ಬೆಳ್ಳೂರು, ಡಾ.ವಿರೂಪಾಕ್ಷ ದೇವರಮನೆ, ಎಚ್.ಎ.ನಂದಿನಿ, ಗುರುರಾಜ ಕುಲಕರ್ಣಿ, ಸಮುದ್ಯತಾ, ಅರುಣ್ ಪಾಲ್ಗೊಂಡಿದ್ದರು.
ಪುಸ್ತಕ ಪರಿಚಯ ಕೃತಿ: ಸಾಕ್ಷಿ ಲೇಖಕ: ಗುರುರಾಜ ಕರಜಗಿ ಪ್ರಕಾಶನ: ಲೋಕ ಶಿಕ್ಷಣ ಟ್ರಸ್ಟ್ ಗ್ರಂಥಮಾಲೆ ಪುಟಗಳು: 816 ಬೆಲೆ: ₹ 499
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.