ADVERTISEMENT

ಮುನಿರತ್ನ ಆಡಿಯೊ; ಕಾಂಗ್ರೆಸ್‌ ಟೂಲ್‌ಕಿಟ್‌ ಕೆಲಸ: ಸಿ.ಟಿ.ರವಿ ಆರೋಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:43 IST
Last Updated 16 ಸೆಪ್ಟೆಂಬರ್ 2024, 15:43 IST
<div class="paragraphs"><p>ಸಿ.ಟಿ.ರವಿ</p></div>

ಸಿ.ಟಿ.ರವಿ

   

ಮೈಸೂರು: ‘ಶಾಸಕ ಮುನಿರತ್ನ ಆಡಿಯೊ ಪ್ರಕರಣದಲ್ಲಿ ಕಾಂಗ್ರೆಸ್‌ ಟೂಲ್‌ಕಿಟ್‌ ಕೆಲಸ ಮಾಡಿದೆ. ಎಫ್‌ಎಸ್‌ಎಲ್‌ ವರದಿ ಬರುವ ಮುನ್ನವೇ ಅವರನ್ನು ಬಂಧಿಸಲಾಗಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲವೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನೇ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಮ್ಮ ಪಕ್ಷದವರಿಗೇ ಒಂದು, ಬಿಜೆಪಿಗೇ ಇನ್ನೊಂದು ನ್ಯಾಯ ಎಂಬ ನೀತಿಯನ್ನು ಕಾಂಗ್ರೆಸ್‌ ಅನುಸರಿಸಿದೆ. ಶಾಸಕ ಚೆನ್ನಾರೆಡ್ಡಿ ಮೇಲೆ ಅಟ್ರಾಸಿಟಿ ಪ್ರಕರಣವಿದ್ದರೂ ಅವರನ್ನು ಬಂಧಿಸಲು ಸೂಚಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ. ಆರೋಪಗಳಿದ್ದರೂ ಸಚಿವ ಎನ್‌.ಚಲುವರಾಯಸ್ವಾಮಿಯವರನ್ನು ಬಂಧಿಸಿಲ್ಲ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಬಂದ ತಕ್ಷಣವೇ ಬಿ. ನಾಗೇಂದ್ರ ಅವರನ್ನೂ ಬಂಧಿಸಿರಲಿಲ್ಲ’ ಎಂದರು.

ADVERTISEMENT

‘ನಾಗಮಂಗಲ ಗಲಭೆ ಪ್ರಕರಣದಲ್ಲಿ ಹೊರಗಿನ ಶಕ್ತಿ ಕೆಲಸ ಮಾಡಿದ್ದು, ಕೇರಳದವರ ಹೆಸರು ಬಹಿರಂಗವಾಗಿದೆ. ಶೇ 90ರಷ್ಟು ಹಿಂದೂಗಳಿರುವ ಮಂಡ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಲು ಕೃತ್ಯ ಎಸಗಲಾಗಿದೆ. ಪೊಲೀಸರು ಅಸಹಾಯಕರಂತೆ ನಿಂತಿರುವ ವಿಡಿಯೊ ನೋಡಿದರೆ ಮುಸ್ಲಿಮರ ವಿರುದ್ಧ ಕ್ರಮ ವಹಿಸದಂತೆ ಮೊದಲೇ ಸೂಚಿಸಲಾಗಿತ್ತೆಂದು ಗೊತ್ತಾಗುತ್ತದೆ. ಹಾಗೆ ಸೂಚಿಸಿದವರು ಯಾರೆಂಬುದು ಬಹಿರಂಗಗೊಳ್ಳಬೇಕು. ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು’ ಎಂದು ಒತ್ತಾಯಿಸಿದರು. 

‘ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೀನ್ ಧ್ವಜ ಹಾರಾಟ ಘಟನೆಯು, ಮಲೆನಾಡು ಭಯೋತ್ಪಾದಕರ ಸ್ಲೀಪರ್‌ಸೆಲ್‌ ಆಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೊಪ್ಪದಲ್ಲಿ ಈ ಹಿಂದೆ ಯಾಸಿನ್ ಭಟ್ಕಳ್‌ ಭಯೋತ್ಪಾದನಾ ತರಬೇತಿ ಶಿಬಿರ ನಡೆಸಿದ್ದ. ಅದನ್ನು ಬಜರಂಗದಳ ಬಹಿರಂಗಪಡಿಸಿತ್ತು’ ಎಂದರು. 

‘ಮಂಗಳೂರಿನ ಬಿ.ಸಿ ರೋಡ್‌ನಲ್ಲಿ ಹಿಂದೂಗಳಿಗೆ ಸವಾಲು ಹಾಕಿರುವುದು, ದೇಶಕ್ಕೆ ಹಾಕಿದ ಸವಾಲು. ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ. ಹಿಂದೆ ನಮ್ಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು. ಇಲ್ಲವಾದರೆ ದೇಶವು ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ. ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.