ಮೈಸೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ರಾಜ್ಯ ಮಟ್ಟದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳನ್ನು ಇಲ್ಲಿನ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದೆ.
ಜುಲೈ 27 ಹಾಗೂ 28ರಂದು ರಾಜ್ಯದ 18 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು. ಅಲ್ಲಿಯೇ ಜೂನಿಯರ್ ಹಾಗೂ ಸೀನಿಯರ್ ಪ್ರಾಯೋಗಿಕ ಪರೀಕ್ಷೆ ಇರಲಿದೆ. ಪ್ರಾಯೋಗಿಕ ಪರೀಕ್ಷೆಗಳನ್ನು ಆ.16ರಿಂದ ಪ್ರಾರಂಭಿಸಲಾಗುವುದು.
ವಿದ್ವತ್ ಪೂರ್ವ ಹಾಗೂ ಅಂತಿಮ ಪ್ರಾಯೋಗಿಕ ಪರೀಕ್ಷೆಗಳನ್ನು ಮೈಸೂರು, ಬೆಂಗಳೂರು, ಧಾರವಾಡ, ದಾವಣಗೆರೆ ಹಾಗೂ ಮಂಗಳೂರು ವಲಯಗಳಲ್ಲಿ ಆಯೋಜಿಸಲಾಗುವುದು. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಪಠ್ಯಕ್ರಮವನ್ನೇ ಅಳವಡಿಸಿಕೊಳ್ಳಲಾಗಿದೆ. ವಿಶ್ವವಿದ್ಯಾಲಯ, ಯುಜಿಸಿ ನಿಯಮಗಳನ್ನು ಅನುಸರಿಸಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.
27ರಂದು ಮಧ್ಯಾಹ್ನ 1ರಿಂದ 3.30ರವರೆಗೆ ಜೂನಿಯರ್ ವಿಭಾಗದಲ್ಲಿ ಶಾಸ್ತ್ರಪತ್ರಿಕೆ, ಸಂಜೆ 4ರಿಂದ 4.30ರವರೆಗೆ ಶ್ರವಣ ಜ್ಞಾನ/ದೃಶ್ಯ ಜ್ಞಾನ ಪರೀಕ್ಷೆ ನಡೆಯಲಿದೆ.
28ರಂದು ಸೀನಿಯರ್ ವಿಭಾಗದಲ್ಲಿ ಶಾಸ್ತ್ರಪತ್ರಿಕೆ–1 ಪರೀಕ್ಷೆಯನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಶಾಸ್ತ್ರಪತ್ರಿಕೆ–2 ಪರೀಕ್ಷೆಯನ್ನು ಮಧ್ಯಾಹ್ನ 1.30ರಿಂದ ಸಂಜೆ 4ರವರೆಗೆ ನಡೆಸಲಾಗುವುದು.
ಪರೀಕ್ಷಾ ಕೇಂದ್ರಗಳು:
ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಸಂಗೀತ ವಿಶ್ವವಿದ್ಯಾಲಯ, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು, ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಪಬ್ಲಿಕ್ ಶಾಲೆ, ಮಂಗಳೂರಿನ ಮಹಿಳಾ ಪಿಯು ಸರ್ಕಾರಿ ಕಾಲೇಜು, ಹಾಸನದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ), ದೇವನಹಳ್ಳಿಯ ವಿಜಯಪುರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಬ್ಬಳ್ಳಿಯ ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪಿಯು ಕಾಲೇಜು.
ಬಾಗಲಕೋಟೆಯ ಬಸವೇಶ್ವರ ಕಾಲೇಜು, ಹೊನ್ನಾವರದ ಧರ್ಮಸ್ಥಳ ಮಂಜುನಾಥೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು, ಶಿರಸಿಯ ಮಾಡರ್ನ್ ಎಜುಕೇಷನ್ ಸೊಸೈಟಿ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ತುಮಕೂರಿನ ತುಮಕೂರು ವಿಶ್ವವಿದ್ಯಾಲಯ, ಕಲಬುರಗಿಯ ನೂತನ ಮಹಾವಿದ್ಯಾಲಯ, ಬಳ್ಳಾರಿಯ ಮೇಧಾ ಕಾಲೇಜು, ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಶಾಲೆ, ಉಡುಪಿಯ ಅಜ್ಜರಕಾಡು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.