ADVERTISEMENT

ಕೆಎಸ್‌ಒಯು ಕೇಂದ್ರಗಳಲ್ಲಿ ಸಂಗೀತ ವಿ.ವಿ ಪರೀಕ್ಷೆ

ಒಪ್ಪಂದಕ್ಕೆ ಎರಡೂ ವಿಶ್ವವಿದ್ಯಾಲಯಗಳ ಸಹಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 14:37 IST
Last Updated 19 ಮೇ 2024, 14:37 IST
ಮೈಸೂರಿನಲ್ಲಿ ಶುಕ್ರವಾರ ಪರಸ್ಪರ ಸಹಕಾರ ಒಪ್ಪಂದಕ್ಕೆ ಕೆಎಸ್‌ಒಯು ಹಾಗೂ ಸಂಗೀತ ವಿಶ್ವವಿದ್ಯಾಲಯದ ಕುಲ‍ಪತಿಗಳಾದ ಪ್ರೊ.ಶರಣಪ್ಪ ವಿ.ಹಲಸೆ ಮತ್ತು ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಸಹಿ ಹಾಕಿ, ಒಡಂಬಡಿಕೆ ಪ್ರದರ್ಶಿಸಿದರು. ಪ್ರೊ.ವಿಶ್ವನಾಥ್, ಪ್ರೊ.ಕೆ.ಬಿ.ಪ್ರವೀಣ, ರೇಖಾ, ಲಕ್ಷ್ಮಿ ಹಾಜರಿದ್ದರು
ಮೈಸೂರಿನಲ್ಲಿ ಶುಕ್ರವಾರ ಪರಸ್ಪರ ಸಹಕಾರ ಒಪ್ಪಂದಕ್ಕೆ ಕೆಎಸ್‌ಒಯು ಹಾಗೂ ಸಂಗೀತ ವಿಶ್ವವಿದ್ಯಾಲಯದ ಕುಲ‍ಪತಿಗಳಾದ ಪ್ರೊ.ಶರಣಪ್ಪ ವಿ.ಹಲಸೆ ಮತ್ತು ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಸಹಿ ಹಾಕಿ, ಒಡಂಬಡಿಕೆ ಪ್ರದರ್ಶಿಸಿದರು. ಪ್ರೊ.ವಿಶ್ವನಾಥ್, ಪ್ರೊ.ಕೆ.ಬಿ.ಪ್ರವೀಣ, ರೇಖಾ, ಲಕ್ಷ್ಮಿ ಹಾಜರಿದ್ದರು   

ಮೈಸೂರು: ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪರೀಕ್ಷೆಗಳು ಇನ್ನು ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳಲ್ಲಿಯೂ ನಡೆಯಲಿದೆ.

ಎರಡೂ ವಿಶ್ವವಿದ್ಯಾಲಯಗಳು, ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಪರಸ್ಪರ ಸಹಕಾರದ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದವು. 

‘ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ 3,560 ಸಂಗೀತ– ನೃತ್ಯ ಶಿಕ್ಷಕರು, 17,560 ವಿದ್ಯಾರ್ಥಿಗಳಿಗೆ ಸಂಗೀತ ಹಾಗೂ ಪ್ರದರ್ಶಕ ಕಲೆಗಳನ್ನು ಬೋಧಿಸುತ್ತಿದ್ದಾರೆ. ಸಂಗೀತ ವಿಶ್ವವಿದ್ಯಾಲಯದ 16 ಕೋರ್ಸ್‌ಗಳು ಹಾಗೂ ಸಂಗೀತದ ಜ್ಯೂನಿಯರ್‌, ಸೀನಿಯರ್‌ ಪರೀಕ್ಷೆಗಳನ್ನು ಮುಕ್ತ ವಿವಿ ಪ್ರಾದೇಶಿಕ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಹೇಳಿದರು.

ADVERTISEMENT

‘ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯದ ಕೊರತೆಯಿರುವುದರಿಂದ, ಸರ್ಕಾರದ ನಿರ್ದೇಶನದಂತೆ ಅಗತ್ಯ ಸಂಪನ್ಮೂಲ ಬಳಸಿಕೊಳ್ಳುವ ಒಪ್ಪಂದಕ್ಕೆ ಕೆಎಸ್‌ಒಯು ಜೊತೆ ಸಹಿ ಹಾಕಲಾಗಿದೆ. ತಿಂಗಳ ಒಳಗೆ ಪರೀಕ್ಷೆಗಳು ನಡೆಯಲಿವೆ’ ಎಂದರು.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ‘ಹೊಸ ಒಪ್ಪಂದದಿಂದ ಎರಡೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕಾರ್ಯಕ್ರಮಗಳು ಬಲಗೊಳ್ಳಲಿವೆ. ಜಂಟಿ ಸಹಯೋಗದಲ್ಲೇ ಕಾರ್ಯಾಗಾರ, ವಿಚಾರಗೋಷ್ಠಿ ಹಾಗೂ ಸಂಗೀತ ಸಮ್ಮೇಳನಗಳು ನಡೆಯಲಿವೆ’ ಎಂದರು.  

‘ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಪರಿಷತ್ತು (ಎನ್‌ಸಿವಿಇಟಿ) ಜೊತೆ ಒಪ್ಪಂದ ಪ್ರಕ್ರಿಯೆ ನಡೆದಿದ್ದು, ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಒಪ್ಪಂದದ ನಂತರ 5 ಸಾವಿರ ಕೌಶಲ ಅಭಿವೃದ್ಧಿ ಕೋರ್ಸ್‌ ನೀಡಲು ವಿಶ್ವವಿದ್ಯಾಲಯಕ್ಕೆ ಅವಕಾಶವಿದೆ’ ಎಂದು ತಿಳಿಸಿದರು. 

ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ವಿಶ್ವನಾಥ್, ಶೈಕ್ಷಣಿಕ ಡೀನ್ ಲಕ್ಷ್ಮೀ, ಸಂಗೀತ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವೆ ರೇಖಾ ಹಾಜರಿದ್ದರು.

‘ಜೆಎನ್‌ಒ ಜೊತೆ ಒಪ್ಪಂದ’

‘ಕೆಎಸ್‌ಒಯು ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದು ಸ್ಪ್ಯಾನಿಷ್‌ ಫ್ರೆಂಚ್‌ ಜರ್ಮನ್‌ ಸೇರಿದಂತೆ 9 ವಿದೇಶಿ ಭಾಷಾ ಕಲಿಕೆಯ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ’ ಎಂದು ಕುಲಪತಿ ‍ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು. ‘ದೂರ ಶಿಕ್ಷಣ ಹಾಗೂ ಆನ್‌ಲೈನ್‌ ಮೂಲಕ ಭಾಷಾ ಕಲಿಕಾ ತರಗತಿಗಳು ನಡೆಯಲಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.