ADVERTISEMENT

ಮೈಮುಲ್‌ | ನಿತ್ಯ 10 ಲಕ್ಷ ಲೀ. ಹಾಲು: ನಿರ್ವಹಣೆಯೇ ಸವಾಲು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 6:09 IST
Last Updated 27 ಜೂನ್ 2024, 6:09 IST
ಮೈಮುಲ್‌ನಲ್ಲಿ ಹಾಲಿನ ಪ್ಯಾಕಿಂಗ್‌ (ಸಂಗ್ರಹ ಚಿತ್ರ)
ಮೈಮುಲ್‌ನಲ್ಲಿ ಹಾಲಿನ ಪ್ಯಾಕಿಂಗ್‌ (ಸಂಗ್ರಹ ಚಿತ್ರ)   

ಮೈಸೂರು: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ಹಾಲು ಸಂಗ್ರಹ ಪ್ರಮಾಣವು ದಿನಕ್ಕೆ 10 ಲಕ್ಷ ಲೀಟರ್‌ಗೆ ಏರಿದ್ದು, ನಿತ್ಯ ಬರೋಬ್ಬರಿ 6 ಲಕ್ಷದಿಂದ 7 ಲಕ್ಷ ಲೀಟರ್‌ನಷ್ಟು ಹಾಲು ಉಳಿಕೆ ಆಗುತ್ತಿದೆ. ಇದರ ನಿರ್ವಹಣೆಯೇ ಮೈಮುಲ್‌ಗೆ ಸವಾಲಾಗಿದೆ.

ಜಿಲ್ಲೆಯಲ್ಲಿ 1,102 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ವರ್ಷದಿಂದ ವರ್ಷಕ್ಕೆ ಹಾಲಿನ ಸಂಗ್ರಹ ಪ್ರಮಾಣ ಏರಿಕೆ ಆಗುತ್ತಲೇ ಇದೆ. 2017ಕ್ಕೆ ಮುನ್ನ ಪ್ರತಿ ದಿನ 5.5 ಲಕ್ಷ ಲೀಟರ್ ಹಾಲು ಬರುತ್ತಿತ್ತು. 2021–22ರ ವೇಳೆಗೆ ಈ ಪ್ರಮಾಣವು 7.5 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು. ಇದೀಗ ಪ್ರತಿ ದಿನ 9.5 ಲಕ್ಷದಿಂದ 10 ಲಕ್ಷ ಲೀಟರ್‌ವರೆಗೆ ಹಾಲನ್ನು ಸಹಕಾರ ಸಂಘಗಳು ಸಂಗ್ರಹಿಸಿ ಮೈಮುಲ್‌ಗೆ ತಲುಪಿಸುತ್ತಿವೆ.

ಮೈಮುಲ್‌ನಲ್ಲಿ ಸಂಗ್ರಹವಾಗುವ ಹಾಲನ್ನು ಪಾಶ್ಚರೀಕರಿಸಿ ಪ್ಯಾಕೆಟ್ ರೂಪದಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹೀಗೆ 3 ಲಕ್ಷ ಲೀಟರ್ ಹಾಲು ನಿತ್ಯ ಗ್ರಾಹಕರಿಗೆ ತಲುಪುತ್ತಿದೆ. ಬೇಸಿಗೆಯಲ್ಲಿ ಪ್ರತಿ ದಿನ 1 ಲಕ್ಷ ಲೀಟರ್‌ನಷ್ಟು ಮಜ್ಜಿಗೆ–ಮೊಸರಿಗೆ ಬೇಡಿಕೆ ಇತ್ತು. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಈ ಎರಡೂ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಜೊತೆಗೆ ಐಸ್‌ಕ್ರೀಂ ಸಹ ಬೇಡಿಕೆ ತಗ್ಗಿಸಿಕೊಂಡಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉಳಿಯುತ್ತಿದೆ.

ADVERTISEMENT

ಉಪ ಉತ್ಪನ್ನಕ್ಕೆ ಒತ್ತು: ‘ಹಾಲು ಉತ್ಪಾದಕರಿಂದ ಎಷ್ಟೇ ಪ್ರಮಾಣದಲ್ಲಿ ಹಾಲು ಪೂರೈಕೆಯಾದರೂ ಅದನ್ನು ನಿರಾಕರಿಸದೇ ಖರೀದಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ರೈತರಿಗೆ ಪ್ರತಿ ಲೀಟರ್‌ಗೆ ₹34.10 ನೀಡಲಾಗುತ್ತಿದೆ. 2023ರ ಡಿಸೆಂಬರ್‌ನಲ್ಲಿ ಮೈಮುಲ್‌ ರೈತರಿಂದ ಖರೀದಿಸುವ ಹಾಲಿನ ದರವನ್ನು ₹1.75ರಷ್ಟು ಇಳಿಸಿತ್ತು. ಸದ್ಯ ಪೂರೈಕೆ ಹೆಚ್ಚಾಗುತ್ತಿದ್ದರೂ ಖರೀದಿ ದರದಲ್ಲಿ ವ್ಯತ್ಯಾಸ ಮಾಡಿಲ್ಲ’ ಎಂದು ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಳಿಕೆ ಆಗುತ್ತಿರುವ 6 ಲಕ್ಷದಿಂದ 7 ಲಕ್ಷ ಲೀಟರ್‌ ಪೈಕಿ 2 ಲಕ್ಷ ಲೀಟರ್‌ನಷ್ಟು ಹಾಲನ್ನು ಕೆಎಂಎಫ್ ಮದರ್ ಡೇರಿ ಮೂಲಕ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇದನ್ನು ಶಾಲಾ ಮಕ್ಕಳ ಕ್ಷೀರಭಾಗ್ಯ ಮೊದಲಾದ ಯೋಜನೆಗಳಿಗೆ ಉಳಿಸಲಾಗುತ್ತಿದೆ. ಉಳಿದ ಹಾಲಿನ ಪುಡಿಯನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆತ ಸಂದರ್ಭ ಅದನ್ನು ಮಾರಾಟ ಮಾಡಲಾಗುತ್ತದೆ. ಜೊತೆಗೆ ತುಪ್ಪ, ಟೆಟ್ರಾ ಪ್ಯಾಕ್‌ ಮೊದಲಾದ ಉಪ ಉತ್ಪನ್ನಗಳ ತಯಾರಿಕೆಗೂ ಒತ್ತು ನೀಡುತ್ತಿದ್ದೇವೆ’ ಎಂದು ಹೇಳಿದರು.

ಮೈಮುಲ್‌ಗೆ ನಿತ್ಯ 10 ಲಕ್ಷ ಲೀಟರ್‌ ಹಾಲು ಬರುತ್ತಿದ್ದು ಅದರಲ್ಲಿ 3 ಲಕ್ಷ ಲೀ. ಪ್ಯಾಕೆಟ್‌ ರೂಪದಲ್ಲಿ ಗ್ರಾಹಕರ ಕೈ ಸೇರುತ್ತಿದೆ. ಉಳಿದದ್ದನ್ನು ಉಪ ಉತ್ಪನ್ನವಾಗಿ ಪರಿವರ್ತಿಸಲಾಗುತ್ತಿದೆ
ಪಿ.ಎಂ ಪ್ರಸನ್ನ ಮೈಮುಲ್‌ ಅಧ್ಯಕ್ಷ

ಹೊರ ರಾಜ್ಯಗಳಲ್ಲೂ ಮಾರುಕಟ್ಟೆ

‘ನಂದಿನಿ’ ಬ್ರ್ಯಾಂಡ್‌ ದಿನ ಕಳೆದಂತೆ ಹೊರ ರಾಜ್ಯಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದರ ಅಂಗವಾಗಿ ಮೈಮುಲ್‌ ಉತ್ಪನ್ನಗಳು ‘ನಂದಿನಿ’ ಬ್ರ್ಯಾಂಡ್‌ನಡಿ ಚೆನ್ನೈ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಹಾಲಿನ ಮಾರಾಟವು 4 ಸಾವಿರ ಲೀಟರ್‌ನಿಂದ 40 ಸಾವಿರ ಲೀಟರ್‌ಗೆ ಏರಿಕೆಯಾಗಿದೆ. ಗುಣಮಟ್ಟದ ಕಾರಣಕ್ಕೆ ನಂದಿನಿಯು ಅಲ್ಲಿನವರಿಗೂ ಇಷ್ಟವಾಗಿದ್ದು ವ್ಯಾಪಾರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಪಿ.ಎಂ. ಪ್ರಸನ್ನ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.