ADVERTISEMENT

ಮೈಸೂರು: 105 ಹಳ್ಳಿಯಲ್ಲಿ ನೀರಿಗೆ ತತ್ವಾರ ಸಾಧ್ಯತೆ

ಜನ–ಜಾನುವಾರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 6:23 IST
Last Updated 5 ಏಪ್ರಿಲ್ 2024, 6:23 IST
ಮೈಸೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಮಾತನಾಡಿದರು
ಮೈಸೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಮಾತನಾಡಿದರು   

ಮೈಸೂರು: ‘ಜಿಲ್ಲೆಯಲ್ಲಿ ಜನ– ಜಾನುವಾರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಸೂಚಿಸಿದರು.

ಜಿಲ್ಲೆಯ ಕುಡಿಯುವ ನೀರಿನ ಪರಿಸ್ಧಿತಿಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಒಟ್ಟು 105 ಹಳ್ಳಿಗಳಲ್ಲಿ ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ 7 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಿಡಿಒ ಮತ್ತು ನೀರುಗಂಟಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಲಿ ಇರುವ ಜಲಮೂಲಗಳಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಿ ವರದಿಗಳ ಅನ್ವಯ ಸೂಕ್ತ ಕ್ರಮ ವಹಿಸಬೇಕು. ಮಾದರಿಗಳಲ್ಲಿ ಆರ್ಸೆನಿಕ್, ಫ್ಲೋರೈಡ್‌ ಮತ್ತು ನೈಟ್ರೇಟ್ ಅಂಶವು ಕಂಡುಬಂದಲ್ಲಿ ಅಂತಹ ಕೊಳವೆಬಾವಿಗಳನ್ನು ಮುಚ್ಚಬೇಕು. ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

‘ಗ್ರಾಮ ಪಂಚಾಯಿತಿಗಳ ಮಟ್ಟದಲ್ಲೂ ಕೊಳವೆ ಬಾವಿಗಳ ಸಮೀಕ್ಷೆ ಕೈಗೊಂಡು ಕಲುಷಿತಗೊಂಡಿರುವ ಬಾವಿಗಳನ್ನು ಮುಚ್ಚಬೇಕು. ಕಡಿಮೆ ಇಳುವರಿ ಕೊಡುತ್ತಿರುವ ಅಥವಾ ಬತ್ತಿ ಹೋದ ಕೊಳವೆಬಾವಿಗಳನ್ನು ಗುರುತಿಸಿ ಕುಡಿಯುವ ನೀರು ಒದಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಧಿಕಾರಿ ಕಚೇರಿಯಿಂದ ನಿಗದಿಪಡಿಸಲಾಗಿರುವ ದರಗಳನ್ನು ಆಧರಿಸಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು’ ಎಂದು ನಿರ್ದೇಶನ ನೀಡಿದರು.

‘ಯಾವುದೇ ಗ್ರಾಮ ‍ಪಂಚಾಯಿತಿ ವ್ಯಾಪ್ತಿಯಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ 15 ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ವಿವರ ಪಡೆದು, ಸಮಸ್ಯೆ ಎದುರಿಸಲು ಸಜ್ಜಾಗಬೇಕು’ ಎಂದು ಸೂಚಿಸಿದರು.

‘ಗ್ರಾಮಾಂತರ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ಸ್ವೀಕರಿಸಲು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ದಿನದ 24 ಗಂಟೆ ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 0821-2526355 ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳಬಹುದು’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಕುರಿತು ‘ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನದ ಜಾಗೃತಿ ಮೂಡಿಸಬೇಕು. ಉದ್ಯೋಗ ಸೃಜನೆ ಮಾಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಬೇಕು’ ಎಂದು ಸೂಚನೆ ನೀಡಿದರು.

‘ಎಲ್ಲ ತಾಲ್ಲೂಕುಗಳಲ್ಲೂ ‘ಸ್ವೀಪ್’ ಕಾರ್ಯಕ್ರಮದಡಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು. ಮತಗಟ್ಟೆಗಳಲ್ಲಿ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ‍ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಗನ್ನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ರಂಜಿತ್ ಕುಮಾರ್, ಇಒಗಳು, ಎಇಇಗಳು ಹಾಗೂ ಪಿಡಿಒಗಳು ಪಾಲ್ಗೊಂಡಿದ್ದರು.

ನೀರನ್ನು ಮಿತವಾಗಿ ಬಳಸುವ ಕುರಿತು ಎನ್‌ಜಿಒಗಳ ಸಹಕಾರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು

-ಕೆ.ಎಂ. ಗಾಯಿತ್ರಿ ಜಿ.ಪಂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.