ಮೈಸೂರು: ‘ರಂಗಾಯಣದಲ್ಲಿ ನಡೆದಿರುವ ಶೇ 40ರ ಭ್ರಷ್ಟಾಚಾರ ಹೇಗಿದೆ ಎಂಬುದನ್ನು ಕಲಾವಿದರು ಹೊಸ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು‘ ಎಂದು ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.
ನಗರದ ಕಿರು ರಂಗಮಂದಿರದಲ್ಲಿ ಭಾರತೀಯ ರಂಗ ಶಿಕ್ಷಣ ಸಂಸ್ಥೆಯು ಆಯೋಜಿಸಿದ್ದ ‘ರಂಗಾಯಣ ಏಕೆ, ಏನು, ಏತ್ತ?’ ಚರ್ಚಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಬಂದ ಮಾತ್ರಕ್ಕೆ ರಂಗಾಯಣ ಸರಿ ಹೋಗುತ್ತದೆಯೇ? ಅಧಿಕಾರ ರಾಜಕಾರಣ ನಿಲ್ಲುತ್ತದೆಯೇ? ರಂಗಾಯಣಕ್ಕೆ ಅಧಿಕಾರ ರಾಜಕಾರಣವನ್ನು ತಂದ ಬಿಜೆಪಿ ಮತ್ತು ಅಡ್ಡಂಡ ಕಾರ್ಯಪ್ಪ ಅವರನ್ನು ಜನ ತಿರಸ್ಕರಿಸಿದ್ದಾರೆ. ರಂಗದೊಳಗೆ ರಾಜಕೀಯ ತರುವುದೇ ಭ್ರಷ್ಟಾಚಾರ, ಅದನ್ನು ಪ್ರತಿಯೊಂದು ಸಂಸ್ಥೆ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದರು.
‘ಶೈಕ್ಷಣಿಕ ರಂಗಭೂಮಿಗೆ ಆದ್ಯತೆ ಕೊಡಬೇಕು. ವಿದೇಶದಲ್ಲಿ ಸ್ಥಳೀಯ ಸಂಸ್ಥೆಗಳು ರಂಗಸಂಸ್ಥೆಗೆ ಸಹಕಾರ ನೀಡುತ್ತವೆ. ಅಧಿಕಾರ ರಾಜಕಾರಣವನ್ನು ಒಳಗಡೆ ತರುವುದಿಲ್ಲ. ನಮಲ್ಲಿಯೂ ಅಂಥ ವ್ಯವಸ್ಥೆ ಬರಬೇಕು’ ಎಂದರು.
‘ರಂಗಾಯಣ ಸರಿಯಾಗಬೇಕೆಂದರೆ ಸ್ವಾಯತ್ತತೆ ದೊರೆಯಬೇಕು. ಸಾಮಾಜಿಕ ನ್ಯಾಯದ ಮೂಲಕ ಯುವಜನರಿಗೆ ಉತ್ತಮ ಅವಕಾಶ ನೀಡುವಂತಾಗಬೇಕು. ಸರ್ಕಾರಿ ಜವಾನರಿಗೆ ₹60 ರಿಂದ 70 ಸಾವಿರ ಸಂಬಳ ಕೊಡಲಾಗುತ್ತದೆ. ಆದರೆ, ನಟರಿಗೆ ₹12 ಸಾವಿರವಷ್ಟೇ ಕೊಡುವುದು ದಾರಿದ್ರ್ಯವಲ್ಲವೇ? ಕಲಾವಿದರನ್ನು ಉತ್ತಮ ವೇತನ ನೀಡಿ ಪ್ರೋತ್ಸಾಹಿಸಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರಗಳು ಬದಲಾಗುತ್ತವೆ. ಆದರೆ, ರಂಗಾಯಣ ಶಾಶ್ವತ ಸಂಸ್ಥೆ. ಇಲ್ಲಿ ರಾಜಕೀಯ ತಪ್ಪಗಳಿಗೆ ಧ್ವನಿಯೆತ್ತಬೇಕು. ಸ್ವತಃ ರಾಜಕೀಯಗೊಳ್ಳಬಾರದು’ ಎಂದು ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯ ಪಟ್ಟರು.
ಚಾಮರಾಜನಗರದ ರಂಗಕರ್ಮಿ ಕೆ.ವೆಂಕಟರಾಜು, ‘ರಂಗಾಯಣಕ್ಕೆ ನೇಮಕಾತಿ ಮಾಡುವಾಗ ವಿಶೇಷ ನಿಯಮಾವಳಿಗಳನ್ನು ರೂಪಿಸಬೇಕು. ನಿರ್ದೇಶಕರ ಆಯ್ಕೆ ಉದ್ದೇಶ ಪ್ರಾಮಾಣಿಕವಾಗಿರಬೇಕು‘ ಎಂದರು.
ರಂಗಕರ್ಮಿ ಕೃಷ್ಣ ಜನಮನ ಮಾತನಾಡಿ, ‘ರಂಗಾಯಣದಲ್ಲಿ ನಾಟಕ ಪ್ರದರ್ಶನಕ್ಕೆ ಪೊಲೀಸರು ರಕ್ಷಣೆಗೆ ನಿಲ್ಲುವುದು ಇತಿಹಾಸದಲ್ಲಿಯೇ ಇರಲಿಲ್ಲ. ಮುಂದಿನ ದಿನಗಳಲ್ಲಿ ಸುಧಾರಣೆಯಾಗುತ್ತದೆಂಬ ಭರವಸೆ ಇದೆ’ ಎಂದರು.
ರಂಗಕರ್ಮಿ ನಿರಂತರ ಶ್ರೀನಿವಾಸ್ ಮಾತನಾಡಿ, ‘ರಂಗಾಯಣದಲ್ಲಿ ಟಿಪ್ಪು ಸುಲ್ತಾನ್ ವಿಷಯ ಅಗತ್ಯವಿರಲಿಲ್ಲ. ವೈಯಕ್ತಿಕ ಆಲೋಚನೆಗಳನ್ನು ಸಮಾಜಕ್ಕೆ ಹರಡಿದರು. ಕಲಾವಿದರ ಮನೆಯಾಗಿದ್ದ ರಂಗಾಯಣದ ವಾತಾವರಣ ಹಾಳು ಮಾಡಿದರು. ಈಗ ವಾತಾವರಣ ತಿಳಿಯಾಗುತ್ತಿದೆ’ ಎಂದರು.
ಸಂಚಾಲಕ ಬಿ.ರಾಜೇಶ್, ಯುವ ಕಲಾವಿದ ರಾಜೇಶ್ ಮಾಧವನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.