ಮೈಸೂರು: ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೋಮವಾರ ಸಂಜೆ ಭಾರತೀಯ ವಾಯುಪಡೆಯ ‘ಲೋಹದ ಹಕ್ಕಿಗಳು' ತಮ್ಮ 'ಧೂಮ'ದ ಗೆರೆಗಳಲ್ಲಿ ಮಾಯಾಲೋಕವನ್ನು ಸೃಷ್ಟಿಸಿದವು.
ಕಿವಿಗಡಚಿಕ್ಕುವಂತೆ 'ರೊಯ್ಯನೆ' ವೇಗವಾಗಿ ಬಂದ 9 'ಸೂರ್ಯಕಿರಣ್' ವಿಮಾನಗಳು ನೀಲಿ ಆಗಸದಲ್ಲಿ ಕಸರತ್ತುಗಳ ಮೂಲಕ ಶ್ವೇತ ಬಣ್ಣದಲ್ಲಿ ಚಿತ್ತಾರ ಮೂಡಿಸಿದ್ದಲ್ಲದೇ, ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿದವು. ಸೇನೆಯ ವಿಂಗ್ ಕಮಾಂಡರ್‌ಗಳ ಸಾಹಸವು ಮೈನವಿರೇಳಿಸಿತು.
ದಸರಾ ಮಹೋತ್ಸವ ಪ್ರಯುಕ್ತ ನಾಲ್ಕು ವರ್ಷಗಳ ನಂತರ ನಡೆದ 15 ನಿಮಿಷಗಳ ವೈಮಾನಿಕ ಸಾಹಸ ಪ್ರದರ್ಶನ ಮನಸೂರೆಗೊಂಡಿತು. 35 ಸಾವಿರಕ್ಕೂ ಹೆಚ್ಚು ಮಂದಿಯ ಹರ್ಷೋದ್ಘಾರವು ಮುಗಿಲುಮುಟ್ಟಿತ್ತು.
ಸಂಜೆ 4 ಆಗುತ್ತಿದ್ದಂತೆ, ದಕ್ಷಿಣ ದಿಕ್ಕಿನ ಮೇಲೆ ಪ್ರೇಕ್ಷಕರ ನೋಟವು ನೆಟ್ಟಿತ್ತು. ಕೊಯಮತ್ತೂರಿನ ಸೂಲೂರು ವಾಯುನೆಲೆಯಿಂದ 4.17ಕ್ಕೆ ಬಂದ 9 ‘ಸೂರ್ಯಕಿರಣ’ಗಳು 30 ಮೀಟರ್ಸ್‌ನಷ್ಟು ಎತ್ತರದಲ್ಲಿ ಹಾರಿ ಸಂಚಲನ ಮೂಡಿಸಿದವು. ಬಾನೆತ್ತರಕ್ಕೆ ಜಿಗಿದು ಲಂಬವಾಗಿ ಧುಮುಕುತ್ತಾ ನೋಡುಗರ ಎದೆಯನ್ನು ನಡುಗಿಸಿ ಎಲ್ಲರನ್ನು ವಿಸ್ಮಿತಗೊಳಿಸಿದವು.
ಕರಾರುವಾಕ್ಕಾದ ಪ್ರದರ್ಶನಕ್ಕೆ ಹೆಸರಾದ 9 ಸೂರ್ಯಕಿರಣ್‌ಗಳು 5 ಮೀಟರ್‌ಗಳ ಅಂತರದಲ್ಲಿ ಶಿಸ್ತಿನಿಂದ ಸಾಗಿದವು. ಆಕಾಶದಲ್ಲಿಯೇ ಧೂಮದಲ್ಲಿ ವಿವಿಧ ಆಕಾರಗಳ ಚಿತ್ತಾರ ಮೂಡಿಸಿದವು. ‘ವಜ್ರ’ ವಿನ್ಯಾಸದಲ್ಲಿ ಬಂದ ವಿಮಾನಗಳು ಆಕಾಶಕ್ಕೆ ಚಿಮ್ಮಿ, ಭೂಮಿಯತ್ತ ಧಾವಿಸಿ ಉತ್ತರಕ್ಕೆ ಚಲಿಸಿದವು.
ನಂತರ ‘ವಿ’ ಆಕಾರದಲ್ಲಿ ಬಂದ ವಿಮಾನಗಳೊಂದಿಗೆ ಎದುರು ಬದುರಾಗಿ ಎರಡು ವಿಮಾನಗಳು (ಇನ್‌ವರ್ಟಡ್ ರನ್) ಚಲಿಸಿ ಅಚ್ಚರಿ ಮೂಡಿಸಿದವು. ಎರಡೂ ಡಿಕ್ಕಿ ಹೊಡೆಯುತ್ತವೇನೋ ಎಂಬಂತೆ ನೋಡುಗರಿಗೆ ಭಾಸವಾಯಿತು. ನಂತರ 9 ವಿಮಾನಗಳೂ ಸುರುಳಿ ಆಕಾರದಲ್ಲಿ (ಬ್ಯಾರಲ್ ರೋಲ್) ಸುತ್ತುತ್ತಾ ಹೊಗೆಯನ್ನು ಉಗುಳುತ್ತಾ ಸಾಗಿದವು.
360 ಡಿಗ್ರಿಯಲ್ಲಿ ಮೇಲಕ್ಕೆ ಸಾಗಿದ ವಿಮಾನಗಳು ‘ಲೂಪ್ ಮ್ಯಾನ್ಯುವರ್’ ರಚನೆಯನ್ನು ಮಾಡಿದವು. ಪೈಲಟ್‌ಗಳು ಉಲ್ಟಾ ಮಾಡಿಯೇ ಚಲಾಯಿಸಿದ್ದನ್ನು ನೋಡಿದವರು ಪುಳಕಿತರಾದವು. ಮೂರು ವಿಮಾನಗಳು ‘ರಾಕ್ ಅಂಡ್ ರೋಲ್’ ರಚನೆಯಲ್ಲಿ ಒಂದರ ಸುತ್ತ ಒಂದು ಸುತ್ತುತ್ತ ಸಾಗುತ್ತಿದ್ದಂತೆ ‘ಹೋ’ ಎಂದು ಉದ್ಘಾರ ತೆಗೆದರು.
ವಂಶವಾಹಿ (ಡಿಎನ್‌ಎ) ರಚನೆಯಲ್ಲಿ ನೇರವಾಗಿ ಸಾಗುತ್ತಿದ್ದ ಮೂರು ವಿಮಾನಗಳ ಸುತ್ತ ಎರಡು ವಿಮಾನಗಳು ಸುತ್ತುತ್ತ ಸಾಗಿ ಅಚ್ಚರಿಗೊಳಿಸಿತು. ‘ಆಲ್ಫಾ ಕ್ರಾಸ್’ನಲ್ಲಿ ವಿಮಾನಗಳು ಎದುರು ಬದುರಾಗಿ ಸಾಗಿ ಎದೆ ಬಡಿತವನ್ನು ಜೋರು ಮಾಡಿದವು. ಪ್ರೀತಿಯ ಸಂಕೇತವಾದ ಹೃದಯವನ್ನು ಮೂಡಿಸಿದ ಮೂರು ವಿಮಾನಗಳು ‘ಲವ್ ಯೂ ಮೈಸೂರು’ ಎಂದವು.
ನಿರೂಪಣೆಯ ಸೊಗಸು: ಸೂರ್ಯಕಿರಣ ತಂಡದ ವಿಂಗ್ ಕಮಾಂಡರ್ ಕನ್ವಲ್ ಸಂಧೂ ನಿರೂಪಣೆಯು ಎಲ್ಲರ ಗಮನ ಸೆಳೆಯಿತು. ಇಂಗ್ಲಿಷ್ ವಿವರಣೆ ಜೊಎತೆಗೆ ಕನ್ನಡದಲ್ಲೂ ವಿವರಿಸಿ ಅರ್ಥೈಸಲು ಯತ್ನಿಸಿದರು. ದೇಶಪ್ರೇಮದ ಹಾಡುಗಳು ಕಿಚ್ಚು ಎಬ್ಬಿಸಿದವು. ಇಂಗ್ಲೆಂಡ್‌ನ 9 ಹಾಕ್ ವಿಮಾನಗಳು 2008ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು, ಬೆಂಗಳೂರಿನ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಅವುಗಳನ್ನು ಉನ್ನತೀಕರಿಸಿದೆ. 2011ರಿಂದ ಸಾಹಸ ಪ್ರದರ್ಶನ ನೀಡುತ್ತಿವೆ. ಎಲ್ಲ ಪೈಲಟ್‌ಗಳು 1000 ಗಂಟೆಗಳ ಹಾರಾಟ ನಡೆಸಿದ್ದಾರೆ ಎಂಬ ಮಾಹಿತಿಯನ್ನೂ ಸಂಧೂ ನೀಡಿದರು.
ವಿಂಗ್ ಕಮಾಂಡರ್‌ಗಳಾದ ಅರ್ಜುನ್, ರಾಜೇಶ್ ಕಜ್ಲಾ ಅವರು ಮೈದಾನದಿಂದ ಸೂರ್ಯಕಿರಣ ತಂಡಕ್ಕೆ ಮಾಹಿತಿಯನ್ನು ನೀಡುತ್ತಿದ್ದರು.
ಸೂರ್ಯಕಿರಣ ತಂಡದಲ್ಲಿ ಕ್ಯಾಪ್ಟನ್ ಜಿ.ಎಸ್.ದಿಲ್ಲಾನ್, ವಿಂಗ್ ಕಮಾಂಡರ್‌ಗಳಾದ ಅಲೋರ್, ಹೂಡಾ, ಭಾರದ್ವಾಜ್, ಅಲೆನ್, ವಶಿಷ್ಠ್, ಎಸ್.ಕಾರ್ತಿಕ್, ಚಂದೇಲ್, ಹಿಮಾಂಶು ಇದ್ದರು.
ಸಿ.ಎಂ ವೀಕ್ಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಪ್ರದರ್ಶನವನ್ನು ಸಂಪುಟದ ಸಹದ್ಯೋಗಿಗಳೊಂದಿಗೆ ವೀಕ್ಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಡಿ.ರವಿಶಂಕರ, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಡಿಸಿಪಿ ಎಂ.ಮುತ್ತುರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.