ADVERTISEMENT

ಕಾರ್‌ ರೇಸ್‌ ಎಂಬ ಥ್ರಿಲ್‌...

ಕೆ.ಓಂಕಾರ ಮೂರ್ತಿ
Published 14 ಅಕ್ಟೋಬರ್ 2019, 21:10 IST
Last Updated 14 ಅಕ್ಟೋಬರ್ 2019, 21:10 IST
ಕಾರ್‌ ರೇಸ್‌ನ ಝಲಕ್‌...
ಕಾರ್‌ ರೇಸ್‌ನ ಝಲಕ್‌...   

ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ನಗರಿಯಲ್ಲಿ ಆಯೋಜಿಸಿದ್ದ ‘ಗ್ರಾವೆಲ್‌ ಫೆಸ್ಟ್‌ ಆಟೊಕ್ರಾಸ್‌ ರೇಸ್‌’ ಮನಸೂರೆಗೊಂಡಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ದೂಳೆಬ್ಬಿಸುತ್ತಾ ಸಾಗಿದ ಪರಿ ಎದೆ ಝಲ್ಲೆನಿಸಿತು. ಅದರಲ್ಲೂ ರೇಸ್‌ ಪ್ರಿಯರಿಗೆ ಥ್ರಿಲ್ ನೀಡಿದೆ. ಕಾರು ಚಾಲಕರಿಗೆ ಎಂದಿನಂತೆ ರೋಚಕ ಅನುಭವಕ್ಕೆ ಕಾರಣವಾಗಿದೆ.

ವೇಗವೆಂದರೆ ಯಾರಿಗೆ ಇಷ್ಟ ಇಲ್ಲ? ಕಾರು, ಜಿಪ್ಸಿ, ಬೈಕ್‌ಗಳನ್ನು ವೇಗವಾಗಿ ಚಲಾಯಿಸಬೇಕು ಎನ್ನುವ ತುಡಿತ ಯಾರಿಗಿಲ್ಲ? ಶರವೇಗದ ಮೋಜು, ಮಸ್ತಿಯಲ್ಲಿರುವ ಖುಷಿಯೇ ಬೇರೆ. ವೇಗವಾಗಿ ಕಾರು ಚಲಾಯಿಸುವ ಶೈಲಿಯನ್ನು ಕಣ್ತುಂಬಿಕೊಳ್ಳುವುದರಲ್ಲಿಯೂ ಮಜಾ ಇದೆ.

ರೇಸ್‌ ಚಾಲಕರು ಕೂಡ ಶರವೇಗವನ್ನೇ ಬದುಕಿನ ಗುರಿ ಆಗಿಸಿಕೊಂಡಿದ್ದಾರೆ. ಅವರ ಸಾಹಸ ಕೇಳಿದರೆ ಯಾರ ಮೈಯಾದರೂ ಜುಂ ಎನ್ನಬೇಕು.

ADVERTISEMENT

ಇಂಥದ್ದೊಂದು ರೋಮಾಂಚನಕ್ಕೆ ಕಾರಣವಾಗಿದ್ದು ಸಾಂಸ್ಕೃತಿಕ ನಗರಿಯಲ್ಲಿ ನಡೆದ ರೇಸ್‌. ಆಟೊಮೋಟಿವ್ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಮೈಸೂರು ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತ್‌ಮಹಲ್ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆದ ರೇಸ್‌ನಲ್ಲಿ ಚಾಲಕರು ಅದ್ಭುತ ಚಾಲನಾ ಕೌಶಲ ಮೆರೆದರು. ಕಾರುಗಳು ರೊಂಯ್‌... ರೊಂಯ್‌... ಎಂದು ಸದ್ದು ಮಾಡುತ್ತಾ ದೂಳೆಬ್ಬಿಸುತ್ತಾ ಸಾಗುತ್ತಿದ್ದರೆ, ರೇಸ್‌ಪ್ರಿಯರು ಆ ದೂಳನ್ನು ಲೆಕ್ಕಿಸದೆ ಚಪ್ಪಾಳೆ, ಕೇಕೆಯ ಮೂಲಕ ಸಂಭ್ರಮಿಸುತ್ತಿದ್ದರು. ಭಾನುವಾರವಾಗಿದ್ದರಿಂದ ಮಕ್ಕಳು, ಯುವಕ ಯುವತಿಯರು, ಹಿರಿಯರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ಎಂಟು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ ಮಾತ್ರವಲ್ಲದೆ, ದೆಹಲಿ, ಹರಿಯಾಣ, ಗೋವಾ, ಮುಂಬೈ, ಕೇರಳ, ತೆಲಂಗಾಣದಿಂದ ಬಂದಿದ್ದ 100ಕ್ಕೂ ಅಧಿಕ ಚಾಲಕರು ಪಾಲ್ಗೊಂಡರು. ಪ್ರಮುಖವಾಗಿ ಕೊಡಗು, ಚಿಕ್ಕಮಗಳೂರು ಹಾಗೂ ಮಂಗಳೂರು ಚಾಲಕರು ಪಾರಮ್ಯ ಮೆರೆದರು. ಮೈಸೂರು ಲೋಕಲ್ ನೊವಿಸ್‌ ಓಪನ್‌ ವಿಭಾಗದಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಡಿ.ಸಿ.ವಿಶ್ವಾಸ್‌.

ಅವರಲ್ಲಿ ಗ್ರಾವೆಲ್‌ ಕಿಂಗ್‌ ಆಗಿ ಮೆರೆದಿದ್ದು ಕೇರಳದ ಕೊಲ್ಲಂನ ಯೂನುಸ್‌ ಇಲ್ಯಾಸ್‌. ಅಪೆಕ್ಸ್‌ ಕ್ಲಾಸ್‌ ವಿಭಾಗದಲ್ಲಿ ಅವರು ವೇಗವಾಗಿ ಕಾರು ಚಲಾಯಿಸಿ ಮಿಂಚು ಹರಿಸಿದರು. ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಮೂರು ಸ್ಥಾನಗಳು ನಿರ್ಧಾರವಾದವು. ಅಷ್ಟೊಂದು ರೋಚಕವಾಗಿತ್ತು ಈ ರೇಸ್‌.

ಅದರಲ್ಲೂ ಅನುಭವಿ ಚಾಲಕ ಮಂಗಳೂರಿನ ಡೀನ್‌ ಮಸ್ಕರೇನಸ್‌ ‘ಇಂಡಿಯನ್‌ ಓಪನ್‌ ಕ್ಲಾಸ್‌, 1,400ರಿಂದ 1,650 ಸಿಸಿ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದರು. ತಿರುವುಗಳಲ್ಲಿ ದೂಳೆಬ್ಬಿಸುತ್ತಾ ಕಾರು ಚಲಾಯಿಸಿದ ಪರಿ ಅದ್ಭುತವಾಗಿತ್ತು.

ಮಹಿಳೆಯರಿಗೆ ಆಯೋಜಿಸಿದ್ದ ‘ಲೇಡಿಸ್‌ ಕ್ಲಾಸ್‌’ನಲ್ಲಿ 12 ಸ್ಪರ್ಧಿಗಳು ಇದ್ದರು. ಲೇಡಿಸ್‌ ಕ್ಲಾಸ್‌ನಲ್ಲಿ ದಾವಣಗೆರೆಯ ಶಿವಾನಿ ಪೃಥ್ವಿ ಮೊದಲ ಸ್ಥಾನ ಪಡೆದು ವೇಗದ ತಾಕತ್ತು ತೋರಿಸಿದರು.

‘ವೇಗವೆಂದರೆ ನನಗೆ ರೋಮಾಂಚನ, ಥ್ರಿಲ್‌. ನನ್ನ ತಂದೆ ಕೂಡ ರೇಸ್‌ಗಳಲ್ಲಿ ಭಾಗವಹಿಸಿದ್ದರು. ಅವರ ಜೊತೆ ನಾನು ಹೋಗುತ್ತಿದ್ದೆ. ಹೀಗಾಗಿ, ರೇಸಿಂಗ್‌ನಲ್ಲಿ ನನಗೆ ಆಸಕ್ತಿ ಬಂತು. ದೇಶ ವಿದೇಶಗಳಲ್ಲಿ ನಡೆದ ರೇಸ್‌ಗಳಲ್ಲಿ ಪಾಲ್ಗೊಂಡು ‍ಪ್ರಶಸ್ತಿ ಗೆದ್ದಿದ್ದೇನೆ’ ಎನ್ನುತ್ತಾರೆ ಶಿವಾನಿ.

ಈ ರೇಸ್‌ಗೆ ಚಾಲನೆ ನೀಡಿದ್ದು ನಟ ದರ್ಶನ್‌. ಹೀಗಾಗಿ, ಆರಂಭದಲ್ಲೇ ರೇಸ್‌ಗೆ ಕಿಕ್‌ ಲಭಿಸಿತು. ಕಳೆದ ಬಾರಿ ದರ್ಶನ್‌ ಕೂಡ ರೇಸಿಂಗ್‌ನಲ್ಲಿ ಸುದ್ದಿ ಹರಡಿತ್ತು. ಕಾರನ್ನು ಸಿದ್ಧಪಡಿಸಿದ್ದ ಅವರು ಬೋಗಾದಿಯಲ್ಲಿರುವ ರೇಸ್‌ ಟ್ರ್ಯಾಕ್‌ನಲ್ಲಿ ಅಭ್ಯಾಸವನ್ನೂ ನಡೆಸಿದ್ದರು. ಆದರೆ, ರಸ್ತೆ ಅಪಘಾತದಲ್ಲಿ ಗಾಯಗೊಂಡ ಅವರು ಹಿಂದೆ ಸರಿದಿದ್ದರು.

ಈ ಬಾರಿಯೂ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ದರ್ಶನ್‌ ಕಾರು ಚಲಾಯಿಸಲಿಲ್ಲ. ಆದರೆ, ನುರಿತ ಚಾಲಕರ ಚಾಲನಾ ಕೌಶಲ ಕಣ್ತುಂಬಿಕೊಂಡರು.

ಮೋಟಾರ್‌ ಸ್ಪೋರ್ಟ್ಸ್‌ ಶ್ರೀಮಂತರ ಕ್ರೀಡೆ. ಏಕೆಂದರೆ ಈ ರೇಸ್‌ನಲ್ಲಿ ಪಾಲ್ಗೊಳ್ಳವ ಕಾರುಗಳ ಬೆಲೆ ಲಕ್ಷಾಂತರ ರೂಪಾಯಿ. ಜೊತೆಗೆ ಧೈರ್ಯವೂ ಬೇಕು. ಇಂಥ ಕ್ರೀಡೆಯಲ್ಲಿ ಈ ಸ್ಪರ್ಧಿಗಳು ಹಲವಾರು ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಜಮ್ಮು ಕಾಶ್ಮೀರದ ಕಡಿದಾದ ರಸ್ತೆಗಳಲ್ಲಿ ಕಾರು ಚಲಾಯಿಸಿ ತಮ್ಮ ತಾಕತ್ತು ಮೆರೆಯುತ್ತಿದ್ದಾರೆ. ವಿದೇಶದಲ್ಲಿ ನಡೆಯುವ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಭಾರತದ ಹಿರಿಮೆ ಎತ್ತಿ ಹಿಡಿದಿದ್ದಾರೆ. ಇವರ ಸಾಹಸಕ್ಕೆ, ರೇಸ್‌ ಪ್ರೀತಿಗೆ ಒಂದು ಸಲಾಂ ಹೇಳಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.