ಮೈಸೂರು: ನಗರದ ಜಲಮೂಲಗಳನ್ನು ಉಳಿಸುವ ಇಚ್ಛಾಶಕ್ತಿಯನ್ನು ಪಾಲಿಕೆ ಪ್ರದರ್ಶಿಸುತ್ತಿಲ್ಲ. ಪ್ರತಿ ಬಾರಿಯ ಬಜೆಟ್‌ನಲ್ಲೂ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಣ ನಿಗದಿ ಮಾಡುವ ಪಾಲಿಕೆಯು ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ನಗರ ಸುತ್ತಮುತ್ತಲ ‘ಜಲನಿಧಿ’ ನಾಶವಾಗುತ್ತಿದೆ.
ಮೂರು ವರ್ಷದ ಹಿಂದೆಯೇ ಸಾತಗಳ್ಳಿಯಲ್ಲಿ 9 ಎಕರೆ 20 ಗುಂಟೆ ಜಾಗವನ್ನು ಗುರುತಿಸಲಾಗಿತ್ತು. ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆದಿತ್ತು. ವಿಸ್ತೃತ ಯೋಜನಾ ವರದಿಯೂ ತಯಾರಾಗಿದ್ದರೂ ಅನುಷ್ಠಾನಗೊಳ್ಳಲಿಲ್ಲ. ಈ ವರ್ಷದ ಫೆ.17ರಂದು ಮಂಡಿಸಿದ ಪಾಲಿಕೆ ಬಜೆಟ್‌ನಲ್ಲಿ ₹11.66 ಕೋಟಿ ಮೀಸಲಿಡಲಾಗಿದೆ. ಆದರೆ, ಯೋಜನೆ ಕಾರ್ಯಾರಂಭವಾಗಿಲ್ಲ.
ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ₹1.94 ಕೋಟಿ, ರಾಜ್ಯ ಸರ್ಕಾರದಿಂದ ₹1.29 ಕೋಟಿ, ಪಾಲಿಕೆ ನಿಧಿಯಿಂದ ₹8.34 ಕೋಟಿ ಅನುದಾನ ಹರಿದು ಬರಲಿದೆಯೆಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ಘಟಕವು ಕಾರ್ಯಾಚರಿಸುವ ವೇಳೆಗೆ ನಗರ ಹಾಗೂ ಮೈಸೂರು ತಾಲ್ಲೂಕಿನ ಜಲಮೂಲಗಳಾದ ಕೆರೆ– ಕಟ್ಟೆ– ಕುಂಟೆಗಳು ಮುಚ್ಚಿ ಹೋಗುವ ಆತಂಕ ಪರಿಸರ ತಜ್ಞರದ್ದು.
‘ರಿಂಗ್ ರಸ್ತೆಯ ಇಕ್ಕೆಲಗಳುದ್ದಕ್ಕೂ ಇರುವ ಹಳ್ಳದ ಭಾಗಗಳಲ್ಲಿ ಕಟ್ಟಡ ತ್ಯಾಜ್ಯ ಶೇಖರಣೆಗೊಂಡಿದೆ. ನಗರದ ಮಧ್ಯ ಭಾಗದಲ್ಲಿಯೇ ಇರುವ ಕುಕ್ಕರಹಳ್ಳಿ ಕೆರೆಯ ವಿಶ್ವಮಾನವ ಜೋಡಿ ರಸ್ತೆಗೆ ಹೊಂದಿಕೊಂಡಂತಿದ್ದ ಕೆರೆ ಕೋಡಿ ಜಾಗದಿಂದ ದೇವಯ್ಯನ ಕೊಳದವರೆಗೂ ಇದ್ದ ಹಳ್ಳದ ಭಾಗಕ್ಕೆ ತ್ಯಾಜ್ಯ ತುಂಬಿರುವುದು ಕಣ್ಣ ಮುಂದಿದೆ. ಅಲ್ಲಿ ಕಟ್ಟಡ, ಕಾಂಪೌಂಡ್‌ಗಳೂ ಎದ್ದಿವೆ’ ಎನ್ನುತ್ತಾರೆ ಪರಿಸರ ತಜ್ಞ ಶೈಲಜೇಶ.
‘ಜಯನಗರದ 25 ಎಕರೆ ವಿಸ್ತೀರ್ಣದ ಮಡಿವಾಳ ಕೆರೆಯಲ್ಲಿ ಕಾಂಕ್ರೀಟ್ ರಾಶಿ ಸಂಗ್ರಹಗೊಂಡಿದೆ. ಮೈಸೂರು– ನಂಜನಗೂಡು ವ್ಯಾಪ್ತಿಯಲ್ಲಿ 106 ಕೆರೆ–ಕಟ್ಟೆ–ಕುಂಟೆಗಳಿದ್ದು, ಅವುಗಳಲ್ಲಿ 37 ಮಾಯವಾಗಿವೆ. ಉಳಿದವೂ ಇದೀಗ ನಾಶವಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಪಾಲಿಕೆ ಜೊತೆಗೆ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳೂ ತ್ಯಾಜ್ಯ ವಿಲೇವಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿವೆ. ಬೋಗಾದಿ ರಸ್ತೆಯ ಹೆಮ್ಮನಹಳ್ಳಿ ಕೆರೆ, ಗೆಜ್ಜಗಳ್ಳಿಯ ದಳವಾಯಿ ಕೆರೆ, ಕೇರ್ಗಳ್ಳಿ ಬಳಿಯ ಕಟ್ಟೆ, ದೇವನೂರು ಕೆರೆ, ತಿಪ್ಪಯ್ಯನ ಕೆರೆ, ಸಾತಿ ಕೆರೆ ನಾಮಾವಶೇಷವಾಗುತ್ತಿವೆ’ ಎನ್ನುತ್ತಾರೆ ಅವರು.
‘ತ್ಯಾಜ್ಯ ಸಂಸ್ಕರಣ ಘಟಕ ಸಂಬಂಧ ಹಲವು ಬಾರಿ ಪಾಲಿಕೆಯಲ್ಲಿ ಸಭೆ ನಡೆಸಲಾಗಿದೆ. ನಮ್ಮ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಅದನ್ನೂ ಪಾಲಿಸುತ್ತಲೂ ಇಲ್ಲ. ಘಟಕ ತೆರೆಯಲು ಖಾಸಗಿಯವರು ಬಂದರೂ ಅವಕಾಶ ಕೊಡುತ್ತಿಲ್ಲ. ಸಭೆಗಳಿಗೆ ಹೋಗುವುದೇ ವ್ಯರ್ಥ ಎನ್ನುತ್ತಾರೆ ಪರಿಸರವಾದಿ ಭಾಮಿ ವಿ.ಶೆಣೈ.
ಈ ಕುರಿತು ಪಾಲಿಕೆ ಆಯುಕ್ತೆ ಎನ್.ಎನ್.ಮಧು ಅವರ ಪ್ರತಿಕ್ರಿಯೆಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಸಲಹೆ ಸ್ವೀಕರಿಸದ ಪಾಲಿಕೆ ಪರಿಸರ ತಜ್ಞರ ದೂರು ರಿಂಗ್ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.