ಮೈಸೂರು: ಸ್ವಚ್ಛ ಸರ್ವೇಕ್ಷಣೆಯ ಜತೆಗೆ ಇಲ್ಲಿನ ಮಹಾನಗರ ಪಾಲಿಕೆ ಮತ್ತೊಂದು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ಕೇಂದ್ರ ಸರ್ಕಾರದ ‘ಸಫಾಯಿಮಿತ್ರ ಸುರಕ್ಷಾ ಚಾಲೆಂಜ್’ ಸ್ಪರ್ಧೆಯಲ್ಲಿ ದೇಶದ 242 ನಗರಗಳ ಜತೆ ಸಾಂಸ್ಕೃತಿಕ ನಗರಿಯೂ ಸ್ಪರ್ಧೆಗಿಳಿದಿದೆ.
‘ಮ್ಯಾನುವೆಲ್ ಸ್ಕ್ಯಾವೆಜಿಂಗ್’ನ್ನು ನಿಷೇಧಿಸಿದ ನಂತರ ನಗರಗಳಲ್ಲಿ ಪರಿಸ್ಥಿತಿ ಹೇಗಿದೆ, ಇನ್ನೂ ಕೈಯಿಂದಲೇ ಒಳಚರಂಡಿ ಸ್ವಚ್ಛತೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಹಾಕಿಕೊಂಡಿದೆ. ಇದರಲ್ಲಿ ಮೊದಲ ಸ್ಥಾನ ಪಡೆದ ಪಾಲಿಕೆಗೆ ₹ 10 ಕೋಟಿ, ದ್ವಿತೀಯ ಸ್ಥಾನಕ್ಕೆ ₹ 5 ಹಾಗೂ ತೃತೀಯ ಸ್ಥಾನಕ್ಕೆ ₹ 2.5 ಕೋಟಿ ಮೊತ್ತದ ಬಹುಮಾನವನ್ನೂ ಘೋಷಿಸಲಾಗಿದೆ.
ಕಳೆದ ವರ್ಷ ನವೆಂಬರ್ 19ರಿಂದ ಆರಂಭವಾದ ಈ ಸ್ಪರ್ಧೆ 2021ರ ಏಪ್ರಿಲ್ 20ರವರೆಗೂ ನಡೆಯಲಿದೆ. ಇದರಲ್ಲಿ ಒಳಚರಂಡಿ ಸ್ವಚ್ಛತೆಗೆ ಬಳಸುವ ಯಂತ್ರೋಪಕರಣಗಳು, ಒಳಚರಂಡಿ ಕಾರ್ಮಿಕರ ಸುರಕ್ಷತೆ, ಕೈಯಲ್ಲಿ ಒಳಚರಂಡಿಯನ್ನು ಸ್ವಚ್ಛಗೊಳಿಸಬಾರದು ಎಂಬ ಕುರಿತು ಜನರಲ್ಲಿನ ಜಾಗೃತಿ, ದಾಖಲಾದ ದೂರುಗಳಿಗೆ ಅಧಿಕಾರಿಗಳ ಸ್ಪಂದನೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ.
ಪಾಲಿಕೆಯಲ್ಲಿ ಸಮರೋಪಾದಿಯಲ್ಲಿ ಸಿದ್ಧತಾ ಕಾರ್ಯ
ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯಲೆಂದೇ ಪಾಲಿಕೆ ಸಮರೋಪಾದಿಯಲ್ಲಿ ಸಿದ್ಧತಾ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ‘ಮ್ಯಾನುವೆಲ್ ಸ್ಕ್ಯಾವೆಜಿಂಗ್’ನ್ನು ಸಂಪೂರ್ಣ ನಿಷೇಧಿಸುವ ಮೂಲಕ ಮೊದಲ ಹೆಜ್ಜೆ ಇಟ್ಟಾಗಿದೆ. 23 ರಾಡಿಂಗ್ ಮಿಷನ್‌ಗಳು, 12 ಜಟ್ಟಿಂಗ್ ಮಿಷನ್‌ಗಳು ಹಾಗೂ 15 ಡಿ–ಸಿಲ್ಟಿಂಗ್ ಮಿಷನ್‌ಗಳನ್ನು ಹೊಂದುವ ಮೂಲಕ ಸ್ವಚ್ಛತೆಯಲ್ಲಿ ಯಂತ್ರೋಪಕರಣ ಬಳಕೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.
ಇವುಗಳ ಜತೆಗೆ, ಸಮಸ್ಯೆಗಳ ಪರಿಹಾರದ ಕ್ಷಮತೆಯನ್ನು ತಿಳಿಯಲು ಪ್ರತ್ಯೇಕವಾದ ಆ್ಯಪ್‌ನ್ನು ರೂಪಿಸಲಾಗುತ್ತಿದ್ದು, ಇದು ಬಹುತೇಕ ಅಂತಿಮ ಹಂತ ತಲುಪಿದೆ. ‘ಮೈಸೂರು ಯುಜಿಡಿ’ ಎಂಬ ಈ ಆ್ಯಪ್‌ನಲ್ಲಿ ದೂರುಗಳ ದಾಖಲೀಕರಣ, ಅವುಗಳ ಪರಿಹಾರ ಸೇರಿದಂತೆ ಸಮಗ್ರ ವಿವರಗಳು ಲಭ್ಯವಾಗಲಿದೆ. ಒಂದು ವೇಳೆ ದೂರುಗಳು ಕಾಲಮಿತಿಯಲ್ಲಿ ಬಗೆಹರಿಯದೇ ಹೋದರೆ ಮೇಲಿನ ಅಧಿಕಾರಿಗಳಿಗೆ ಈ ದೂರು ತಾನೇ ತಾನಾಗಿ ರವಾನೆಯೂ ಆಗಲಿದೆ.
ಇದರ ಜತೆಗೆ, ಸಹಾಯವಾಣಿಯನ್ನೂ ರೂಪಿಸುವ ಕಾರ್ಯ ಅಂತಿಮ ಹಂತ ತಲುಪಿದೆ. ರಾಷ್ಟ್ರೀಯ ಸಹಾಯವಾಣಿಯನ್ನು ಮೈಸೂರು ನಗರಕ್ಕೆ ಹೊಂದಿಕೆ ಮಾಡಿಕೊಳ್ಳಲಾಗಿದೆ. ಇನ್ನು ಮುಂದೆ ಯುಜಿಡಿಗೆ ಸಂಬಂಧಿಸಿದ ದೂರುಗಳನ್ನು ಪಾಲಿಕೆಯ ಸಹಾಯವಾಣಿಯ ಬದಲು ಈ ಸಹಾಯವಾಣಿಗೆ ನೀಡಿದರೆ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಯಲಿದೆ.
ಸ್ವಚ್ಛತೆಗೆಂದೇ ರೊಬೊಟ್ ಯಂತ್ರ
ಒಳಚರಂಡಿಯ ಸ್ವಚ್ಛತೆಗೆಂದೇ ರೊಬೊಟೊ ಯಂತ್ರವೊಂದನ್ನು ಪಾಲಿಕೆ ಖರೀದಿಸಿದೆ. ಇದು ಸ್ವಚ್ಛತಾ ವಾಹನಗಳು ಹೋಗದಂತಹ ಕಡೆ ಹಾಗೂ ಮ್ಯಾನ್‌ಹೋಲ್‌ಗಳಲ್ಲಿ ಇಳಿದು ಮನುಷ್ಯರಂತೆ ಸ್ಚಚ್ಛತಾ ಕಾರ್ಯ ನಡೆಸಲಿದೆ. ಈ ರೊಬೊಟ್‌ನ್ನು ಸದ್ಯದಲ್ಲೇ ಸೇವೆಗೆ ಇಳಿಸುವ ಆಲೋಚನೆ ಪಾಲಿಕೆಗಿದೆ.
ದೂರುದಾರರೇ ಸಮಸ್ಯೆ ಬಗೆಹರಿಯಿತೆಂದು ಹೇಳಬೇಕು!
ಹೊಸದಾದ ಸಹಾಯವಾಣಿ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆಗೊಂಡ ನಂತರ ಒಳಚರಂಡಿ ಕುರಿತು ದೂರು ನೀಡಿದವರು ಸಮಸ್ಯೆ ಬಗೆಹರಿದಿದೆ ಎಂದು ಹೇಳಬೇಕಿದೆ. ಆಗ ಮಾತ್ರ ದೂರು ಬಗೆಹರಿದಿದೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕ ಓಟಿಪಿ ಸಂಖ್ಯೆಯು ದೂರುದಾರರ ಮೊಬೈಲ್‌ಗೆ ಬರಲಿದೆ.
ಒಳಚರಂಡಿ ಕಾರ್ಮಿಕರ ಸುರಕ್ಷತೆಯನ್ನು ಪ್ರಧಾನವಾಗಿ ಪರಿಗಣಿಸಲಾಗಿದ್ದು, ಅವರಿಗೆ ಆರೋಗ್ಯ ಸಮಸ್ಯೆಯಾದರೆ ಇವರನ್ನು ಆಸ್ಪತ್ರೆಗೆ ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಜತೆಗೆ ಉಚಿತ ಚಿಕಿತ್ಸೆಯನ್ನೂ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.