ಮೈಸೂರು: ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗೆ ನೇಮಕಗೊಳ್ಳುವವರನ್ನು, ಇತ್ತೀಚಿನ ವರ್ಷಗಳಲ್ಲಿ ‘ಅಕಾಲಿಕವಾಗಿ ವರ್ಗಾವಣೆ’ ಮಾಡುತ್ತಿರುವುದು ಕಂಡುಬಂದಿದೆ. ಇದು, ಪ್ರಕರಣಗಳ ವಿಲೇವಾರಿಯ ‘ವೇಗ’ಕ್ಕೆ ‘ಬ್ರೇಕ್’ ಹಾಕಿದಂತೆ ಆಗುತ್ತಿದೆ ಎಂದು ನ್ಯಾಯಾಂಗ ಇಲಾಖೆಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಈ ಹುದ್ದೆಯಲ್ಲಿದ್ದ ರವೀಂದ್ರ ಹೆಗಡೆ ಅವರು ಹೈಕೋರ್ಟ್ ರಿಜಿಸ್ಟ್ರಾರ್ (ವಿಜಿಲೆನ್ಸ್) ಆಗಿ ವರ್ಗಾವಣೆಗೊಂಡಿದ್ದಾರೆ. ಅವರು, ಇದೇ ವರ್ಷ ಮೇ 27ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರು ಆರು ತಿಂಗಳು ತುಂಬುವಷ್ಟರಲ್ಲೇ ಮೇಲೆ ಹೈಕೋರ್ಟ್‌ಗೆ ತೆರಳಿದ್ದಾರೆ. ಇಲ್ಲಿಗೆ ಈವರೆಗೂ ಹೊಸಬರನ್ನು ನಿಯೋಜಿಸಿಲ್ಲ.
ಈ ನ್ಯಾಯಾಲಯವು ಕಳೆದ 30 ವರ್ಷಗಳಲ್ಲಿ ಅಂದರೆ 1994ರಿಂದ ಈವರೆಗೆ 19 ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರನ್ನು ಕಂಡಿದೆ. ಈ ಅವಧಿಯಲ್ಲಿ ಕೆಲವರು ಮಾತ್ರವೇ ದೀರ್ಘಾವಧಿಗೆ ಅಂದರೆ ಸರಾಸರಿ ಮೂರು ವರ್ಷ ಇಲ್ಲಿ ಕೆಲಸ ಮಾಡಿದ್ದಾರೆ. ಕೆಲವರಿಗೆ ಅಕಾಲಿಕ ವರ್ಗಾವಣೆ ಆಗಿದ್ದರೆ, ಕೆಲವರು ಬಡ್ತಿ ಮೇಲೆ ತೆರಳಿದ್ದಾರೆ. ಪದೇ ಪದೇ ಅಕಾಲಿಕ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವುದು ವ್ಯಾಜ್ಯಗಳ ವಿಲೇವಾರಿ ಹಾಗೂ ಜಿಲ್ಲೆಯಲ್ಲಿನ ನ್ಯಾಯಾಂಗ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ ಎನ್ನುತ್ತಾರೆ ವಕೀಲರು.
ಕೆಲವರಷ್ಟೆ ದೀರ್ಘಾವಧಿಗೆ: ಭಾರತೀಯ ನ್ಯಾಯಾಂಗ ಕ್ಷೇತ್ರದಲ್ಲಿ ಹಲವು ಪ್ರಥಮಗಳ ದಾಖಲೆ ಬರೆದ ಹೆಗ್ಗಳಿಕೆಯ, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕನ್ನಡತಿ ಮಂಜುಳಾ ಚೆಲ್ಲೂರ್ ಅವರು ಇಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ 1997ರ ಜ.30ರಿಂದ 18.02.2000ದವರೆಗೂ ಕಾರ್ಯನಿರ್ವಹಿಸಿದ್ದರು.
ನಂತರ ಬಂದ ಎಂ.ಎಸ್. ರಾಜೇಂದ್ರ ಪ್ರಸಾದ್ ಅವರು ಎರಡು ವರ್ಷದ ಮೇಲೆ ಕೆಲವು ದಿನಗಳಷ್ಟೆ ಇದ್ದರು. ಬಳಿಕ ಕೆ.ಜಿ. ಹೊಸೂರ್ ವರ್ಷದೊಳಗೇ ವರ್ಗಾವಣೆಯಾದರು. ಜಿ.ವಿ. ಹೆಗಡೆ ವರ್ಷದ ಮೇಲೆ ನಾಲ್ಕು ತಿಂಗಳಿದ್ದರು. ನಂತರವೂ ಹೆಚ್ಚಿನವರು ಹೆಚ್ಚಿನ ಅವಧಿಯವರೆಗೆ ಇಲ್ಲಿ ಕಾರ್ಯನಿರ್ವಹಿಸಲಾಗಿಲ್ಲ.
‘ಇಲ್ಲಿ ಜಿಲ್ಲಾ ನ್ಯಾಯಾಲಯ 1879ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸದ್ಯಕ್ಕೆ ಸುಮಾರು 1,660 ಪ್ರಕರಣಗಳಿವೆ. ಪ್ರಧಾನ ಜಿಲ್ಲಾ ನ್ಯಾಯಾಧೀಶರು ಕನಿಷ್ಠ ಪಕ್ಷ ಮೂರು ವರ್ಷಗಳವರೆಗಾದರೂ ಈ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವಂತಾದರೆ ನ್ಯಾಯಾಂಗ ವ್ಯವಸ್ಥೆ ಸುಧಾರಿಸುತ್ತದೆ. ಅವರು ಎಲ್ಲ ಪ್ರಕರಣಗಳಲ್ಲೂ ತೀರ್ಪು ನೀಡಲು ಸಾಧ್ಯವಿಲ್ಲ. ಆದರೆ, ಕನಿಷ್ಠ ಪಕ್ಷ 3 ವರ್ಷಗಳವರೆಗೆ ನ್ಯಾಯಾಧೀಶರು ಇಲ್ಲಿಯೇ ಕಾರ್ಯನಿರ್ವಹಿಸುವಂತಾದರೆ ನ್ಯಾಯದಾನ ವ್ಯವಸ್ಥೆ ಸುಧಾರಿಸುವ ಜೊತೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯೂ ಇಳಿಮುಖ ಆಗುತ್ತದೆ’ ಎನ್ನುತ್ತಾರೆ ವಕೀಲ ಪಿ.ಜೆ. ರಾಘವೇಂದ್ರ.
‘ಪ್ರಧಾನ ಜಿಲ್ಲಾ ನ್ಯಾಯಾಲಯ ದಲ್ಲಿರುವ ಪ್ರಕರಣಗಳನ್ನು ಅರ್ಥ ಮಾಡಿಕೊಂಡು, ವಾದ-ಪ್ರತಿವಾದಗಳನ್ನು ಆಲಿಸಿ ಆದೇಶ ಅಥವಾ ತೀರ್ಪು ನೀಡುವಷ್ಟರಲ್ಲಿ ನ್ಯಾಯಾಧೀಶರು ವರ್ಗಾವಣೆಗೊಂಡರೆ ನ್ಯಾಯಾಲಯದ ಸಮಯ ವ್ಯರ್ಥ ವಾಗುತ್ತದೆ. ಪ್ರಧಾನ ಜಿಲ್ಲಾ ನ್ಯಾಯಾಧೀಶ ರಾಗಿದ್ದ ರವೀಂದ್ರ ಹೆಗಡೆ ಅವರು ಅಧಿಕಾರ ಸ್ವೀಕರಿಸಿ ಆರು ತಿಂಗಳೊಳಗೆ ವರ್ಗಾವಣೆ ಆಗಿರುವುದರಿಂದ ಮೈಸೂರಿನ ನ್ಯಾಯಾಂಗ ಇಲಾಖೆ, ನ್ಯಾಯಾಧೀಶರು, ಸಿಬ್ಬಂದಿ, ವಕೀಲರು ಹಾಗೂ ಪಕ್ಷಗಾರರಿಗೆ ಬೇಸರವಾಗಿದೆ. ಈ ನ್ಯಾಯಾಧೀಶರು 3 ವರ್ಷ ಕಾರ್ಯನಿರ್ವಹಿಸಿದ್ದರೆ ಜಿಲ್ಲೆಯ ನ್ಯಾಯಾಲಯಗಳ ಮೂಲ ಸೌಕರ್ಯ ವೃದ್ಧಿಯಾಗುತ್ತಿತ್ತು. ಎಲ್ಲಾ ನ್ಯಾಯಾಲಯಗಳ ಕಾರ್ಯ ನಿರ್ವಹಣೆಯೂ ಸುಧಾರಣೆ ಆಗುತ್ತಿತ್ತು’ ಎಂದು ಹೇಳಿದರು.
ಸಮಯ ಬೇಕಾಗುತ್ತದೆ: ‘ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಹೊಸ ಪ್ರಕರಣಗಳು ನೋಂದಣಿಯಾಗುತ್ತಲೇ ಇರುತ್ತದೆ. ಹೊಸದಾಗಿ ಬರುವ ನ್ಯಾಯಾಧೀಶರು, ಯಾವುದೇ ಪ್ರಕರಣದಲ್ಲಿ ನೇರವಾಗಿ ತೀರ್ಪು ನೀಡಲಾಗುವುದಿಲ್ಲ. ವಾದ–ಪ್ರತಿವಾದ ಆಲಿಸಬೇಕಾಗುತ್ತದೆ. ಪ್ರಕರಣವನ್ನು ಅಧ್ಯಯನ ನಡೆಸಬೇಕಾಗುತ್ತದೆ. ಇದಕ್ಕೆ ಸಮಯ ಬೇಕಾಗುತ್ತದೆ’ ಎನ್ನುತ್ತಾರೆ ಅವರು.
‘ಯಾವುದೇ ನ್ಯಾಯಾಧೀಶರು ಕನಿಷ್ಠ ಮೂರು ವರ್ಷಗಳವರೆಗೆ ಒಂದೇ ಕಡೆ ಕೆಲಸ ನಿರ್ವಹಿಸಿದರೆ ಪರಿಣಾಮಕಾರಿ ಆಗಿರುತ್ತದೆ. ವ್ಯಾಜ್ಯಗಳ ವಿಲೇವಾರಿ, ನ್ಯಾಯಾಂಗ ಆಡಳಿತ ಸುಧಾರಣೆಗೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಗಮನಹರಿಸಬೇಕು’ ಎಂದು ನಿವೃತ್ತ ನ್ಯಾಯಾಧೀಶರೊಬ್ಬರು ಸಲಹೆ ನೀಡಿದರು.
***
ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ನ್ಯಾಯಾಧೀಶರ ಅಕಾಲಿಕ ವರ್ಗಾವಣೆಯೂ ಕಾರಣ. ಇದಕ್ಕೆ ಒಂದರ್ಥದಲ್ಲಿ ಹೈಕೋರ್ಟ್ ಕೂಡ ಕಾರಣವಾದಂತಾಗಿದೆ.
-ಪಿ.ಜೆ. ರಾಘವೇಂದ್ರ, ವಕೀಲ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.