ಮೈಸೂರು: ಒಂದೆಡೆ ಬಣ್ಣದ ರೇಖೆಗಳಲ್ಲಿ ಅರಳುತ್ತಿದ್ದ ಚಿತ್ರಪಟಗಳು, ಮತ್ತೊಂದೆಡೆ ಉಳಿ ಪೆಟ್ಟುಗಳಲ್ಲಿ ಮೂಡುತ್ತಿದ್ದ ಶಿಲ್ಪಗಳು, ಮೊಗದೊಂದು ಕಡೆ ಕಲಾವಿದರ ಕೈಚಳಕವನ್ನು ಅಚ್ಚರಿಯಿಂದ ನೋಡುತ್ತಿದ್ದ ಸಹೃದಯರು..
ಕಲಾಮಂದಿರದ ಅಂಗಳದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯು ಆಯೋಜಿಸಿದ್ದ ರಾಜ್ಯ ಮಟ್ಟದ ಶಿಲ್ಪಕಲೆ ಹಗೂ ಚಿತ್ರಕಲಾ ಶಿಬಿರದಲ್ಲಿ ಶುಕ್ರವಾರ ಮೂಡಿದ ಚಿತ್ರಣವಿದು.
ರಾಜ್ಯದ ವಿವಿಧ ಭಾಗಗಳಿಂದ 15 ಮಂದಿ ಚಿತ್ರ ಕಲಾವಿದರು ಭಾಗವಹಿಸಿರುವ ಶಿಬಿರಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ‘ಪಾರಂಪರಿಕ ಕಲೆಗಳನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಶಿಬಿರ ಏರ್ಪಡಿಸಲಾಗಿದೆ. ಸೆ.16ರಿಂದ ಆರಂಭವಾದ ಶಿಲ್ಪಕಲಾ ಶಿಬಿರದಲ್ಲಿ ಹತ್ತಾರು ಕಲಾಕೃತಿಗಳು ಅರಳಿವೆ. ಇದೀಗ ಚಿತ್ರಕಲಾ ಶಿಬಿರದಿಂದ ಉತ್ತಮ ಚಿತ್ರಗಳು ಮೂಡಿಬರಲಿವೆ’ ಎಂದು ಆಶಿಸಿದರು.
‘ದಸರಾ ದೀಪಾಲಂಕಾರ, ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತೆಯೇ ಶಿಬಿರದಲ್ಲಿ ಭಾಗವಹಿಸಿ ಕಲಾವಿದರ ಪ್ರತಿಭೆಯನ್ನು ನೋಡಬೇಕು. 26ರಿಂದ ಅ.3ರವರೆಗೆ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಶಿಬಿರದಲ್ಲಿ ರೂಪುಗೊಂಡ ಕಲೆಗಳ ವಸ್ತುಪ್ರದರ್ಶನವಿರಲಿದೆ’ ಎಂದರು.
‘ನಶಿಸಿ ಹೋಗುತ್ತಿರುವ ಕಲೆಗಳನ್ನು ಸಂರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಹಸ್ತ್‌ಶಿಲ್ಪ ವಿಕಾಸ್ ಯೋಜನಾ, ಮೆಗಾ ಕ್ಲಸ್ಟರ್ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರವೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ದಸರಾ ಉತ್ಸವ ಕಲೆಗಳಿಗೆ ಉತ್ತೇಜನ ನೀಡುವ ವೇದಿಕೆಯಾಗಿದೆ’ ಎಂದು ನುಡಿದರು.
ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ‘ಚಿತ್ರಕಲಾ ಶಿಬಿರದಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳು, ಪ್ರವಾಸಿ ತಾಣಗಳು ರಚನೆಯಾಗಲಿವೆ.ಸೆ.3ರ ನಂತರ ಇಲ್ಲಿ ರಚನೆಯಾದ ಕಲಾಕೃತಿಗಳ ಮಾರಾಟವೂ ನಡೆಯಲಿದ್ದು, ಕಲಾವಿದರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ’ ಎಂದರು.
ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್ ಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪಸಮಿತಿಯ ಉಪವಿಶೇಷಾಧಿಕಾರಿ ವಿಜಯಕುಮಾರ್, ಕಾರ್ಯಾಧ್ಯಕ್ಷ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.