ADVERTISEMENT

Dasara–2024: ‘ಅದ್ದೂರಿ ದಸರಾ ಲೆಕ್ಕಪತ್ರ’ ಇನ್ನೂ ಸಿದ್ಧವಾಗಿಲ್ಲ!

ಮಹೋತ್ಸವ ಮುಗಿದು ತಿಂಗಳೇ ಕಳೆದರೂ ಕ್ರಮ ಕೈಗೊಳ್ಳದ ಜಿಲ್ಲಾಡಳಿತ

ಎಂ.ಮಹೇಶ
Published 21 ನವೆಂಬರ್ 2024, 6:34 IST
Last Updated 21 ನವೆಂಬರ್ 2024, 6:34 IST
ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ನೋಟ
ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ನೋಟ   

ಮೈಸೂರು: ಅದ್ದೂರಿಯಾಗಿ ನಡೆದು ಅಪಾರ ಜನರನ್ನು ಆಕರ್ಷಿಸಿದ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮಾಡಲಾದ ಖರ್ಚು–ವೆಚ್ಚದ ವಿವರವನ್ನು ಜಿಲ್ಲಾಡಳಿತ ಈವರೆಗೂ ಬಿಡುಗಡೆ ಮಾಡಿಲ್ಲ.

ಈ ಬಾರಿಯ ಮಹೋತ್ಸವ ಅ.3ರಿಂದ 12ರವರೆಗೆ ನಡೆದು ಅಭೂತಪೂರ್ವ ಯಶಸ್ಸು ಗಳಿಸಿತ್ತು. ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಿದ್ದವು. ಸಾಹಿತಿ ಹಂಪ ನಾಗರಾಜ್‌ ಅವರಿಂದ ಚಾಲನೆ ಪಡೆದು ವೈಭವದಿಂದ ನಡೆದ ದಸರಾ ದೇಶ–ವಿದೇಶದ ಜನರನ್ನು ಆಕರ್ಷಿಸಿತ್ತು.

₹40 ಕೋಟಿ ಅನುದಾನ ನೀಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಇದರಲ್ಲಿ ಬಿಡುಗಡೆಯಾಗಿದ್ದೆಷ್ಟು, ಖರ್ಚಾಗಿದ್ದೆಷ್ಟು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

‘ಮುಡಾದಿಂದ ₹ 10 ಕೋಟಿ, ಅರಮನೆ ಮಂಡಳಿ ₹ 5 ಕೋಟಿ ನೀಡಲಿವೆ. ಶ್ರೀರಂಗಪಟ್ಟಣ ದಸರೆಗೆ ₹ 1.5 ಕೋಟಿ, ಚಾಮರಾಜನಗರ ದಸರೆಗೆ ₹ 2 ಕೋಟಿ ಕೊಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದ್ದರು.

ಬದಲಾದ ವ್ಯವಸ್ಥೆಗೆ ಖರ್ಚಾಗಿದ್ದೆಷ್ಟು?: ಈ ಹಿಂದೆ, ಅಂಬಾರಿ ಆನೆ, ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು ಅರಮನೆ ಮುಂದಿನಿಂದಲೇ ಹೊರಡುತ್ತಿದ್ದವು. ಈ ವರ್ಷ ಅದನ್ನು ಬದಲಿಸಲಾಗಿತ್ತು. ಅಂಬಾರಿ ಕಟ್ಟುವ ಸ್ಥಳದಿಂದ ಅಭಿಮನ್ಯು ಸೇರಿದಂತೆ ಎಲ್ಲ ಆನೆಗಳು ನೇರವಾಗಿ ಅರಮನೆ ಆವರಣದ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಬಲಕ್ಕೆ ತಿರುಗಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಗಾಯತ್ರಿ ದೇವಾಲಯದಲ್ಲಿ ಮತ್ತೆ ಬಲಕ್ಕೆ ತಿರುಗಿ ಅರಮನೆ ಎದುರಿಗೆ ಬಂದವು. ಅಲ್ಲಿ ಮುಖ್ಯಮಂತ್ರಿ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿದರು. ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಿದ್ದರಿಂದಾಗಿ ಹೆಚ್ಚುವರಿಯಾಗಿ ಸಾವಿರಾರು ಮಂದಿಗೆ ಆಸನಗಳ ವ್ಯವಸ್ಥೆ ಮಾಡಲು ಸಾಧ್ಯವಾಯಿತು. ಇದಕ್ಕೆ ಆಗಿರುವ ವೆಚ್ಚವೆಷ್ಟು ಎನ್ನುವುದು ಬಹಿರಂಗಗೊಂಡಿಲ್ಲ.

ಟಿಕೆಟ್‌ಗಳ ಮಾರಾಟದಲ್ಲೂ ಈ ಬಾರಿ ದಾಖಲೆ ನಿರ್ಮಾಣವಾಗಿತ್ತು. ಎಲ್ಲ ಗೋಲ್ಡ್‌ಕಾರ್ಡ್‌ (3,500)ಗಳ ಮಾರಾಟದಿಂದ ದಾಖಲೆಯ ₹ 2.27 ಕೋಟಿ ಸಂಗ್ರಹವಾಗಿತ್ತು. ‘ಗೋಲ್ಡ್‌ ಟಿಕೆಟ್‌’ಗೆ ₹ 6,500 ನಿಗದಿಪಡಿಸಲಾಗಿತ್ತು. ಹೋದ ವರ್ಷಕ್ಕಿಂತ ₹ 500 ಜಾಸ್ತಿ ಇತ್ತು. ಪಂಜಿನ ಕವಾಯತಿನ ಸಾಮಾನ್ಯ ಟಿಕೆಟ್‌ಗೆ ₹ 1,000 ನಿಗದಿಪಡಿಸಲಾಗಿತ್ತು. ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸಲು ಬಯಸುವವರಿಗೆ ₹ 3,500ರ ಟಿಕೆಟ್‌ ಕೂಡ ಮಾರಾಟ ಮಾಡಲಾಗಿತ್ತು.

ಉತ್ಸವದಲ್ಲಿ ಅಂಬಾವಿಲಾಸ ಅರಮನೆ ಸೇರಿದಂತೆ ವಿವಿಧ 11 ವೇದಿಕೆಗಳಲ್ಲಿ ಒಟ್ಟು 508 ಕಲಾತಂಡಗಳ 6,500 ಕಲಾವಿದರಿಗೆ ಅವಕಾಶ ಒದಗಿಸಲಾಗಿತ್ತು.

ಹೋದ ವರ್ಷ ‘ತೀವ್ರ ಬರಗಾಲ’ದ ನಡುವೆಯೂ ನಡೆದ ಉತ್ಸವಕ್ಕೆ ₹ 29.25 ಕೋಟಿ ವೆಚ್ಚವಾಗಿತ್ತು. 2022ರಲ್ಲಿ ₹ 28.74 ಕೋಟಿ ವೆಚ್ಚವಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿತ್ತು.

ಜಿ. ಲಕ್ಷ್ಮೀಕಾಂತ ರೆಡ್ಡಿ

Highlights - ಅ.3ರಿಂದ 12ರವರೆಗೆ ನಡೆದಿದ್ದ ನಾಡಹಬ್ಬ ಪ್ರಾಯೋಜಕತ್ವವನ್ನೂ ಪಡೆದಿದ್ದ ಜಿಲ್ಲಾಡಳಿತ ಹಲವು ವೈವಿಧ್ಯಮಯ ಕಾರ್ಯಕ್ರಮ

Quote - ದಸರಾ ಖರ್ಚು–ವೆಚ್ಚದ ಆಡಿಟಿಂಗ್‌ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರ ವಿವರ ಬಿಡುಗಡೆ ಮಾಡಲಾಗುವುದು ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ

Cut-off box - ಯುವದಸರೆಗೆ ಎಷ್ಟಾಯಿತು? ಜಂಬೂಸವಾರಿ ಬಿಟ್ಟರೆ ಹೆಚ್ಚು ಜನರು ಸೇರುವ ಮತ್ತೊಂದು ಆಕರ್ಷಣೆಯ ಹಾಗೂ ‘ದುಬಾರಿ’ ಕಾರ್ಯಕ್ರಮವೆಂದರೆ ಅದು ಯುವ ದಸರಾ. ಯುವ ಜನರೊಂದಿಗೆ ಎಲ್ಲ ವಯೋಮಾನದವರೂ ಪಾಲ್ಗೊಳ್ಳುವುದು ವಿಶೇಷ. ಹಿಂದಿನ ವರ್ಷಗಳಲ್ಲಿ ಅದನ್ನು ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಆ ಸಂಪ್ರದಾಯವನ್ನು ಈ ಬಾರಿ ಮುರಿದ ಜಿಲ್ಲಾಡಳಿತ ಹೊರವಲಯದಲ್ಲಿ ಉತ್ತನಹಳ್ಳಿ ಸಮೀಪದ ವಿಶಾಲವಾದ ಜಾಗಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸಿತು. ಶ್ರೇಯಾ ಘೋಷಾಲ್‌ ಬಾದ್‌ಷಾ ಎ.ಆರ್.ರೆಹಮಾನ್‌ ಇಳಯರಾಜ ಮೊದಲಾದ ಖ್ಯಾತನಾಮರನ್ನು ಆಹ್ವಾನಿಸಿತು. ಸಹಸ್ರಾರು ಮಂದಿ ಪಾಲ್ಗೊಂಡು ಖುಷಿಪಟ್ಟರು. ಈ ಕಲಾವಿದರಿಗೆ ದೊರೆತಿರುವ ‘ಸಂಭಾವನೆ’ ಎಷ್ಟು ಎನ್ನುವುದು ಕುತೂಹಲ ಮೂಡಿಸಿದೆ. ಯುವ ದಸರೆಯಲ್ಲಿ ಇದೇ ಮೊದಲ ಬಾರಿಗೆ ‘ಟಿಕೆಟ್‌’ ಪರಿಚಯಿಸುವ ಕೆಲಸವನ್ನೂ ಜಿಲ್ಲಾಡಳಿತ ಮಾಡಿತ್ತು. ‘ಉಳ್ಳವರು’ ಹಣ ಕೊಟ್ಟು ಟಿಕೆಟ್‌ ಖರೀದಿಸಿ ಕಾರ್ಯಕ್ರಮ ವೀಕ್ಷಿಸಿದರು. ಇದರಿಂದ ಬಂದ ಆದಾಯವೆಷ್ಟು ಎನ್ನುವುದು ಇನ್ನಷ್ಟೆ ತಿಳಿದುಬರಬೇಕಿದೆ.

Cut-off box - ಪ್ರಾಯೋಜಕತ್ವದ ಪಾಲೆಷ್ಟು? ಈ ಬಾರಿಯೂ ಪ್ರಾಯೋಜಕತ್ವದ ಮೊರೆ ಹೋಗಿದ್ದ ಜಿಲ್ಲಾಡಳಿತ ಒಟ್ಟು 7 ವಿಭಾಗಗಳಲ್ಲಿ (ಟೈಟಲ್‌ ಸ್ಪಾನ್ಸರ್‌ಶಿಪ್‌) ಪರಿಚಯಿಸಿತ್ತು. ‘ಜಂಬೂಸವಾರಿ ಪ್ರಾಯೋಜಕತ್ವ’ಕ್ಕೆ ₹2 ಕೋಟಿ ‘ಅಂಬಾರಿ ಪ್ರಾಯೋಜಕತ್ವ’ಕ್ಕೆ ₹1 ಕೋಟಿ ‘ಪ್ಲಾಟಿನಂ’– ಇಬ್ಬರಿಗೆ ತಲಾ ₹75 ಲಕ್ಷ ‘ಗೋಲ್ಡನ್‌’–ತಲಾ ಇಬ್ಬರಿಗೆ ₹50 ಲಕ್ಷ ‘ಸಿಲ್ವರ್’– ನಾಲ್ವರಿಗೆ ತಲಾ ₹25 ಇತರ ವಿಭಾಗಗಳಲ್ಲಿ ₹5 ಲಕ್ಷದಿಂದ ₹15ಲಕ್ಷದವರೆಗೆ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು ಎಂದು ತಿಳಿಸಿತ್ತು. ಇದರಿಂದ ಬಂದ ಆದಾಯವೆಷ್ಟು ಎನ್ನುವ ಲೆಕ್ಕ ಸಿಗಬೇಕಾಗಿದೆ. ಒಟ್ಟು 19 ಉಪಸಮಿತಿಗಳನ್ನು ರಚಿಸಲಾಗಿತ್ತು. ಅವುಗಳಲ್ಲಿ ಇನ್ನೂ ಹಲವು ಉಪಸಮಿತಿಗಳಿಂದ ಲೆಕ್ಕಪತ್ರ ವಿವರ ಸಲ್ಲಿಕೆ ಆಗಬೇಕಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ‘ಪ್ರಜಾವಾಣಿ’ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.