ADVERTISEMENT

ದಸರೆ ‘ದೀಪಾಲಂಕಾರ’ ನಿಯಮ: ಒಂದೇ ವಾರದಲ್ಲಿ ಹಲವು ಅಪಘಾತ, 6 ಮಂದಿ ಸಾವು

ಏಕಮುಖ ಸಂಚಾರದ ಕಿರಿಕಿರಿ

ಶಿವಪ್ರಸಾದ್ ರೈ
Published 19 ಅಕ್ಟೋಬರ್ 2024, 7:25 IST
Last Updated 19 ಅಕ್ಟೋಬರ್ 2024, 7:25 IST
ನಗರದಲ್ಲಿ ರಾತ್ರಿ ಹೊತ್ತು ಕಂಡು ಬರುತ್ತಿರುವ ವಾಹನ ದಟ್ಟಣೆ
ನಗರದಲ್ಲಿ ರಾತ್ರಿ ಹೊತ್ತು ಕಂಡು ಬರುತ್ತಿರುವ ವಾಹನ ದಟ್ಟಣೆ   

ಮೈಸೂರು: ನಗರದಲ್ಲಿ ದಸರೆ ದೀಪಾಲಂಕಾರದ ಕಾರಣಕ್ಕೆ ಪೊಲೀಸರು ವಿಧಿಸಿರುವ ಸಂಚಾರ ನಿರ್ಬಂಧದಿಂದ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ 7 ದಿನಗಳಲ್ಲಿ ಸಂಭವಿಸಿದ ಐದು ಅಪಘಾತಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮೂರು ಅಪಘಾತಗಳು ವರ್ತುಲ ರಸ್ತೆಯಲ್ಲಿ ನಡೆದಿರುವುದು ಆತಂಕ ಮೂಡಿಸಿದೆ.

ಉತ್ಸವದ ಸಂಭ್ರಮ ಮುಗಿಯುತ್ತಿದ್ದಂತೆ, ನಗರದ ರಸ್ತೆಗಳಲ್ಲಿ ಸಾಲು–ಸಾಲು ಅಪಘಾತಗಳು ಸಂಭವಿಸುತ್ತಿದ್ದು, ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನಗರದ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿರುವುದು ಅಪಘಾತಗಳಿಗೆ ಕಾರಣ ಎಂದೇ ಜನ ದೂರುತ್ತಿದ್ದಾರೆ.

ಉತ್ಸವಕ್ಕಾಗಿ ನಗರದಲ್ಲಿ ಏರ್ಪಡಿಸಿದ್ದ ವಿದ್ಯುತ್‌ ದೀಪಾಲಂಕಾರವನ್ನು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಅ.23ರವರೆಗೂ ವಿಸ್ತರಿಸಲಾಗಿದೆ. ಪರಿಣಾಮ, ಉತ್ಸವ ಮುಗಿದರೂ ಪ್ರವಾಸಿಗರ ಸಂಖ್ಯೆ ಇಳಿದಿಲ್ಲ. ಇದು ಸ್ಥಳೀಯರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ.

ADVERTISEMENT

ನಗರದ ಸಂಚಾರ ದಟ್ಟಣೆ ಹಾಗೂ ಏಕಮುಖ ಸಂಚಾರದ ಕಿರಿಕಿರಿ ತಪ್ಪಿಸಲು ಅನೇಕರು ವರ್ತುಲ ರಸ್ತೆ ಬಳಸುತ್ತಿದ್ದಾರೆ. ಇದರಿಂದಾಗಿ ರಾತ್ರಿ ವೇಳೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಈ ಭಾಗಗಳಲ್ಲಿ ದಸರಾ ಸಮಯದಲ್ಲಿದ್ದ ಹೆಚ್ಚಿನ ಪೊಲೀಸರ ನಿಯೋಜನೆಯನ್ನೂ ಹಿಂಪಡೆಯಲಾಗಿದೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಅಪಾಯ ಲೆಕ್ಕಿಸದೆ ಫೋಟೊ!: ನಗರದ ಮುಖ್ಯ ರಸ್ತೆಗಳೀಗ ಸದ್ಯ ಫೋಟೊ ಪ್ರಿಯರ ತಾಣಗಳಾಗಿ ಬದಲಾಗಿವೆ. ರಸ್ತೆಗಳಲ್ಲಿ ಬರುವ ಸಾಲು–ಸಾಲು ವಾಹನಗಳನ್ನೂ ಲೆಕ್ಕಿಸದೆ ರಸ್ತೆಯಲ್ಲೇ ವಿವಿಧ ಭಂಗಿಗಳಲ್ಲಿ ನಿಲ್ಲುವ ಯುವಜನ ಸೇರಿದಂತೆ ಸಾರ್ವಜನಿಕರು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಛಾಯಾಗ್ರಾಹಕರು ಅಪಾಯವನ್ನೂ ಲೆಕ್ಕಿಸದೆ ರಸ್ತೆಯ ಮಧ್ಯ ಭಾಗದಲ್ಲೇ ಓಡಾಡುತ್ತಾ ಫೋಟೊ ತೆಗೆಯುವುದು ಕಂಡುಬರುತ್ತಿದೆ. ಇದನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ವ್ಯಾಪಾರಿಗಳಿಗೂ ತೊಂದರೆ

‘ದೀಪಾಲಂಕಾರವನ್ನು ಮುಂದುವರಿಸುವುದರಿಂದ ವ್ಯಾಪಾರ ಹೆಚ್ಚಾಗುತ್ತದೆ’ ಎಂದು ಅಂದಾಜಿಸಲಾಗಿತ್ತು. ಆದರೆ ಅದರ ಬದಲು ವ್ಯಾಪಾರಿಗಳಿಗೇ ತೊಂದರೆಯಾಗಿದೆ. ‘ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ರಸ್ತೆಗಳಲ್ಲಿ ಸಂಚರಿಸಲು ಒದ್ದಾಡುವ ಪರಿಸ್ಥಿತಿ ಇದೆ. ನಿತ್ಯ ಬರುವ ಜನರೂ ಬರುತ್ತಿಲ್ಲ. ವ್ಯಾಪಾರವೂ ಕಡಿಮೆಯಾಗಿದೆ’ ಎಂದು ದೇವರಾಜ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ವಿಷಾದಿಸಿದರು.

ಸುತ್ತಿ ಬಳಸಿ ಸಂಚರಿಸುವ ಸಂಕಷ್ಟ; ಹಿಡಿಶಾಪ

ಅರಮನೆ ಸುತ್ತಮುತ್ತಲಿನ ರಸ್ತೆ ಸೇರಿದಂತೆ ವಿವಿಧೆಡೆ ಏಕಮುಖ ಸಂಚಾರ ಕ್ಲಾಕ್‌ವೈಸ್‌ ಆ್ಯಂಟಿ ಕ್ಲಾಕ್‌ವೈಸ್‌ ಸಂಚಾರ ವ್ಯವಸ್ಥೆಯಿಂದಾಗಿ ಬಹಳಷ್ಟು ಮಂದಿ ಮನೆ ಸೇರಲು ಪರದಾಡುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆಯೇ ಸಾರ್ವಜನಿಕರೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ವೃತ್ತಗಳನ್ನು ಸುತ್ತಿ ಬಳಸಿಯೇ ಸಂಚರಿಸಬೇಕಾಗಿದೆ. ಸಂಜೆ 4ರಿಂದ ರಾತ್ರಿ 12ರವರೆಗೆ ಈ ನಿಯಮ ಜಾರಿಯಲ್ಲಿರುವುದರಿಂದ ಉದ್ಯೋಗಸ್ಥರಿಗೂ ತೊಂದರೆಯಾಗಿದೆ. ನಜರ್‌ಬಾದ್‌ ಸಿದ್ಧಾರ್ಥನಗರ ಜ್ಯೋತಿ ನಗರ ಗಾಯಿತ್ರಿಪುರಂ ರಾಘವೇಂದ್ರನಗರ ರಾಜ್‌ಕುಮಾರ್‌ ರಸ್ತೆಗಳಿಗೆ ಹೊಂದಿಕೊಂಡಂತಿರುವ ಬಡಾವಣೆಗಳಿಂದ ನಗರಕ್ಕೆ ಬರುವವರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಆಸ್ಪತ್ರೆಗೆ ತುರ್ತು ಕೆಲಸಗಳಿಗೆ ತೆರಳಲು ‘ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಾದ ಸ್ಥಿತಿ’ ಇದೆ. ಇದರಿಂದಾಗಿ ಆ ಭಾಗದ ಜನ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ‍ಪಡಿಸುತ್ತಿದ್ದಾರೆ.

ಅಪಘಾತ ಸ್ಥಳ ಮತ್ತು ಮೃತಪಟ್ಟವರು

ಹುಣಸೂರು ರಸ್ತೆಯ ಜಲದರ್ಶಿನಿ ಅತಿಥಿ ಗೃಹದ ಬಳಿ ಫುಟ್‌ಪಾತ್‌ಗೆ ಬೈಕ್ ಡಿಕ್ಕಿಯಾಗಿ ಸಿ.ಕೆ. ರೇಣುಕುಮಾರ್ (40) ದಟ್ಟಗಳ್ಳಿಯ ವರ್ತುಲ ರಸ್ತೆಯಲ್ಲಿ ಶನಿವಾರ ಸಂಜೆ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮಂಜುನಾಥ್ (27) ಆರ್‌ಬಿಐ ಜಂಕ್ಷನ್‌ ಬಳಿ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಉತ್ತರಪ್ರದೇಶದ ಸುನೀಲ್‌ಕುಮಾರ್‌ (32) ಲಲಿತಾದ್ರಿಪುರದ ವರ್ತುಲ ರಸ್ತೆಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ನಿವಾಸಿ ಶಿವಪ್ರಸಾದ್‌ (51)– ಕುಮಾರಿ (40) ದಂಪತಿ ಆರ್‌.ಟಿ.ನಗರ ವೃತ್ತದ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿ ಸೀತಾರಾಮ ಭಟ್‌ (70) ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.