ADVERTISEMENT

ದಸರೆ: ರೈಲಿನಲ್ಲಿ ಬಂದರು 10 ಲಕ್ಷ ಮಂದಿ; ಒಟ್ಟು ₹7.37 ಕೋಟಿ ಆದಾಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:02 IST
Last Updated 17 ಅಕ್ಟೋಬರ್ 2024, 16:02 IST
   

ಮೈಸೂರು: ಈ ಬಾರಿಯ ದಸರಾ ಉತ್ಸವ ಅಂಗವಾಗಿ ಅ. 3ರಿಂದ 14ರವರೆಗೆ ಮೈಸೂರಿಗೆ ರೈಲಿನ ಮೂಲಕ ಬರೋಬ್ಬರಿ 10 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.

ಮೈಸೂರು ನಗರ ರೈಲು ನಿಲ್ದಾಣ ಒಂದರಲ್ಲಿಯೇ ಈ ಅವಧಿಯಲ್ಲಿ 9.2 ಲಕ್ಷ ಪ್ರಯಾಣಿಕರು ಬಂದಿದ್ದಾರೆ. ವಿಜಯದಶಮಿಯ ದಿನವಾದ ಅ. 12ರಂದು 1.2 ಲಕ್ಷ ಮಂದಿ ಮೈಸೂರಿಗೆ ಪ್ರಯಾಣಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 8.2 ಲಕ್ಷ ಪ್ರಯಾಣಿಕರು ಬಂದಿದ್ದು, ಒಟ್ಟು ₹6.64 ಕೋಟಿ ಆದಾಯ ಸಂಗ್ರಹ ಆಗಿತ್ತು. ಈ ವರ್ಷ ಆದಾಯವು ₹7.37 ಕೋಟಿಗೆ ಏರಿಕೆ ಆಗಿದೆ.

ADVERTISEMENT

ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ರೈಲು ನಿಲ್ದಾಣಗಳಲ್ಲಿ ಮಾಹಿತಿ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು. ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲಾಯಿತು. ಮೈಸೂರು ನಗರ ಜೊತೆಗೆ ಅಶೋಕಪುರಂ, ಚಾಮರಾಜಪುರಂ, ಶ್ರೀರಂಗಪಟ್ಟಣ, ಪಾಂಡವಪುರ, ಚಾಮರಾಜನಗರ ನಿಲ್ದಾಣಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 23 ಟಿಕೆಟ್‌ ಪರಿವೀಕ್ಷಕರು, 13 ವಾಣಿಜ್ಯ ಸಿಬ್ಬಂದಿ, 100 ಆರ್‌ಪಿಎಫ್‌ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಸೇವೆಗೆ ನಿಯೋಜಿಸಲಾಗಿತ್ತು.

ಈ ಅವಧಿಯಲ್ಲಿ ಮೈಸೂರು ವಿಭಾಗದಲ್ಲಿ ಮೊಬೈಲ್‌ ಆಧಾರಿತ ಕಾಯ್ದಿರಿಸದ ಟಿಕೆಟ್‌ ಪಡೆಯುವ ವ್ಯವಸ್ಥೆ ( ಎಂಯುಟಿಎಸ್‌) ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಇದರಿಂದ ಪ್ರಯಾಣಿಕರು ಕೌಂಟರ್‌ಗಳಿಗೆ ತೆರಳದೆಯೇ ಟಿಕೆಟ್ ಪಡೆಯುವುದು ಸಾಧ್ಯವಾಯಿತು. ಹೆಚ್ಚುವರಿ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಮೈಸೂರಿಗೆ ಬೆಂಗಳೂರು, ಹುಬ್ಬಳ್ಳಿ, ಅರಸೀಕೆರೆ ಸೇರಿದಂತೆ ವಿವಿಧೆಡೆಯಿಂದ ವಿಶೇಷ ರೈಲುಗಳು ಸಂಚರಿಸಿದವು. ಬೇಡಿಕೆಗೆ ಅನುಗುಣವಾಗಿ 77 ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿತ್ತು. ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಮೈಸೂರು ನಿಲ್ದಾಣದಲ್ಲಿ 73 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.