ADVERTISEMENT

ದಸರೆಯ ನೆನಪು: ಕ್ರೀಡಾಕೂಟಕ್ಕೆ ಸಾವಿರಾರು ಪ್ರೇಕ್ಷಕರು!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 3:33 IST
Last Updated 15 ಸೆಪ್ಟೆಂಬರ್ 2021, 3:33 IST
ಪ್ರೊ.ಶೇಷಣ್ಣ
ಪ್ರೊ.ಶೇಷಣ್ಣ   

ಮೈಸೂರು: ಶಿಸ್ತಿನಿಂದ ನಡೆಯುತ್ತಿದ್ದ ದಸರಾ ಕ್ರೀಡಾಕೂಟ ನೋಡಲೆಂದೇ ಸಾವಿರಾರು ಮಂದಿ ಸೇರುತ್ತಿದ್ದರು. ಅದೇ ಕ್ರೀಡಾಳು ಗಳಿಗೆ ದೊಡ್ಡ ಸ್ಫೂರ್ತಿ. ಪ್ರೇಕ್ಷಕರ ಮುಂದೆ ಸಾಧನೆ ಮಾಡ ಬೇಕೆಂಬ ಛಲ ಎಲ್ಲರಲ್ಲೂ ಎದ್ದು ಕಾಣುತಿತ್ತು. ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತಿತ್ತು.

ಬೆಂಗಳೂರಿನಿಂದ ಮೈಸೂರಿನವರೆಗೆ ಸೈಕಲ್‌ ರೇಸ್‌ ನಡೆಯುತ್ತಿದ್ದರೆ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿರುತಿತ್ತು. ಚಾಮುಂಡಿಬೆಟ್ಟದಿಂದ ಕ್ರೀಡಾ ಜ್ಯೋತಿ ತಂದು ನಗರದಲ್ಲಿ ಸುತ್ತಾಡಿ ಮಹಾರಾಜ ಕಾಲೇಜಿನ ಹಿಂಭಾಗದ ಬೇವಿನಮರದ ಬಳಿ ಪ್ರತಿಷ್ಠಾಪಿಸಲಾಗುತಿತ್ತು. ಸ್ಪೋರ್ಟ್ಸ್‌ ಪೆವಿಲಿಯನ್‌ ಹಿಂಭಾಗದಲ್ಲಿರುವ ಆಲದ ಮರದ ಕೆಳಗೆ ಬೆಡ್‌ ಹಾಕಿ ಕುಸ್ತಿ ಮಾಡಿಸಲಾಗುತಿತ್ತು.

ಖ್ಯಾತ ಅಥ್ಲೀಟ್‌ ಕೆನೆತ್‌ ಪೋವೆಲ್‌, ಡಿಸ್ಕಸ್‌ ಥ್ರೋ ಸ್ಪರ್ಧಿ ಬೋಳಾರ್‌, ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆಯಂಥ ಕ್ರೀಡಾಳುಗಳು ಪಾಲ್ಗೊಂಡ ಕ್ಷಣಗಳು ಇನ್ನೂ ಹಸಿರಾಗಿವೆ. ಅಪಾರ ಸಾಧನೆ ಮಾಡಿದ್ದ ಕ್ರೀಡಾಪಟುಗಳೂ ದಸರಾ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿದ್ದರು. ಇಲ್ಲಿ ಗೆದ್ದ ಹಲವು ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿದ್ದಾರೆ.

ADVERTISEMENT

ಸರ್ಕಾರ ಆಗ ಯಾವುದಕ್ಕೂ ಕೊರತೆ ಮಾಡುತ್ತಿರಲಿಲ್ಲ. ಈಗಿನಂತೆ ದೂರುಗಳೂ ಇರುತ್ತಿರಲಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದ್ದವು. ಕ್ರೀಡೆಯಿಂದಲೇ ದಸರೆಗೆ ಮೆರುಗು ಸಿಕ್ಕಿದೆ. ಸ್ಥಳೀಯರು ಕ್ರೀಡಾಪಟುಗಳನ್ನು ಗೌರವಿಸುತ್ತಿದ್ದ ಪರಿಯಂತೂ ಅದ್ಭುತ. ಹಿಂದಿನ ಹೊಳಪು, ಮೆರುಗು ಈಗ ಇಲ್ಲವಾಗಿದೆ. ಪ್ರೇಕ್ಷಕರೂ ಕಡಿಮೆಯಾಗಿದ್ದಾರೆ.

‘1962ರಿಂದಲೇ ದಸರಾ ನೋಡುತ್ತಿದ್ದೇನೆ. ವಿದ್ಯಾರ್ಥಿಯಾಗಿದ್ದಾಗ, ಅಂದರೆ 1964ರಲ್ಲಿ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದೆ. ನಂತರ ಕ್ರೀಡಾಕೂಟ ಸಂಘಟನೆಯಲ್ಲಿ ತೊಡಗಿದೆ. ಆಗ ದಸರಾ ಕ್ರೀಡಾಕೂಟಗಳು ವೈಭವದಿಂದ ನಡೆಯುತ್ತಿದ್ದವು. ಮಹಾರಾಜ ಕಾಲೇಜು ಮೈದಾನ, ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಆಯೋಜಿಸಲಾಗುತಿತ್ತು. ದಿಗ್ಗಜ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರು. ಆಗಿನ್ನೂ ಚಾಮುಂಡಿವಿಹಾರ ಕ್ರೀಡಾಂಗಣ ನಿರ್ಮಾಣವಾಗಿರಲಿಲ್ಲ.

-ಪ್ರೊ.ಶೇಷಣ್ಣ ,ಕ್ರೀಡಾ ತಜ್ಞ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.