ಮೈಸೂರು: ‘ಸ್ವಚ್ಛ ನಗರಿ’ ಎಂಬ ಶ್ರೇಯಕ್ಕೆ ಆರಂಭದಲ್ಲಿ ಸತತ ಎರಡು ಬಾರಿ ಭಾಜನವಾಗಿದ್ದ ಮೈಸೂರು, 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ 23ನೇ ಸ್ಥಾನ ಪಡೆದಿದ್ದು, 9 ವರ್ಷಗಳಲ್ಲಿ ಇದೇ ಮೊದಲ ಬಾರಿ ರ‍್ಯಾಂಕಿಂಗ್‌ನಲ್ಲಿ ತೀವ್ರ ಕುಸಿತ ಕಂಡಿದೆ.
2015, 2016ರಲ್ಲಿ ಅಗ್ರಸ್ಥಾನ ಪಡೆದಿದ್ದ ನಗರಿಯು, 2017ರಲ್ಲಿ 5ನೇ ಸ್ಥಾನ ಕಂಡಿತ್ತು. 2021ರಲ್ಲಿ 11 ಸ್ಥಾನ ಪಡೆದದ್ದನ್ನು ಬಿಟ್ಟರೆ ಟಾಪ್–10ರೊಳಗೆ ಸ್ಥಾನ ಪಡೆಯುತ್ತಿತ್ತು. ಆದರೆ, ಇದೀಗ ದಿಢೀರ್ 30ರೊಳಗಿನ ಪಟ್ಟಿಯಲ್ಲಿರುವುದು ನಾಗರಿಕರಲ್ಲಿ ನಿರಾಸೆ ತಂದಿದೆ.
ಮೈಸೂರು 7,753.46 ಅಂಕಗಳಿಸಿದ್ದರೆ, ಮಧ್ಯಪ್ರದೇಶದ ಇಂದೋರ್ ಹಾಗೂ ಗುಜರಾತ್‌ನ ಸೂರತ್ ತಲಾ 9,348.39 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿವೆ.
ಕಸ ಸಂಗ್ರಹ, ಕಸಬಳಕೆ, ಕಸ ಮರುಬಳಕೆಯಲ್ಲಿ ಶೇ 100ರಷ್ಟು ಸಾಧನೆಯಾಗಿಲ್ಲ. ಅದರಿಂದ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಾಣುತ್ತಿದೆ. 2019ರಿಂದಲೂ ತ್ಯಾಜ್ಯ ಮುಕ್ತ ನಗರಿ ಪ್ರಶಸ್ತಿ ಪಡೆಯುತ್ತಿದ್ದ ಮೈಸೂರು ಈ ಬಾರಿ 5 ಸ್ಟಾರ್‌ಗಳ ಬದಲು 3 ಸ್ಟಾರ್ ಪಡೆದುಕೊಂಡಿದೆ.
ಜಿಲ್ಲೆಯ ವಿವಿಧ ಪಟ್ಟಣಗಳ ಸಾಧನೆ: ಬನ್ನೂರು ಪುರಸಭೆ ರಾಷ್ಟ್ರಮಟ್ಟದಲ್ಲಿ 2,284 ಹಾಗೂ ರಾಜ್ಯ ಮಟ್ಟದಲ್ಲಿ 48ನೇ , ವಲಯವಾರು 110ನೇ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಬೋಗಾದಿ ಪಟ್ಟಣ ಪಂಚಾಯಿತಿ ಕ್ರಮವಾಗಿ 3,024, 138, 222ನೇ ಸ್ಥಾನ, ಎಚ್.ಡಿ.ಕೋಟೆ ಪುರಸಭೆ 3,123, 153 ಹಾಗೂ 307ನೇ ಸ್ಥಾನ, ಹೂಟಗಳ್ಳಿ ನಗರಸಭೆ 3,804, 267 ಹಾಗೂ 201 ಸ್ಥಾನ ಪಡೆದಿವೆ.
ಹುಣಸೂರು ನಗರಸಭೆ 2,829, 101 ಮತ್ತು 160, ಕಡಕೊಳ ಪಟ್ಟಣ ಪಂಚಾಯಿತಿ 3,716, 254 ಮತ್ತು 311, ಕೆ.ಆರ್.ನಗರ ಪುರಸಭೆ 1,671, 17 ಮತ್ತು 91, ನಂಜನಗೂಡು ನಗರಸಭೆ 1,825, 21 ಮತ್ತು 99, ಪಿರಿಯಾಪಟ್ಟಣ ಪುರಸಭೆ 1,425, 11 ಹಾಗೂ 36, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ 3,478, 222 ಮತ್ತು 303, ಸರಗೂರು ಪಟ್ಟಣ ಪಂಚಾಯಿತಿ 3,682, 251 ಮತ್ತು 350, ಶ್ರೀರಾಂಪುರ ಪಟ್ಟಣ ಪಂಚಾಯಿತಿ 3,362, 197 ಮತ್ತು 338, ತಿ.ನರಸೀಪುರ ಪುರಸಭೆ 2,255, 46 ಮತ್ತು 134ನೇ ಸ್ಥಾನ ಪಡೆದುಕೊಂಡಿವೆ.
‘ಉತ್ತಮ ರ‍್ಯಾಂಕ್ ಪಡೆಯಲು ಯತ್ನ’ ‘2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಉತ್ತಮ ರ‍್ಯಾಂಕ್ ಪಡೆಯಲು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು. ‘ನಗರ ಪ್ರದೇಶದಲ್ಲಿ ಸ್ವಚ್ಛತೆಗೆ ಸಂಬಂಧಿದಂತೆ ಹಲವು ನಿಯಮಗಳಿರುತ್ತವೆ. ಮನೆ ಮನೆ ತ್ಯಾಜ್ಯ ಸಂಗ್ರಹಣೆ ಸಂಗ್ರಹವಾದ ತ್ಯಾಜ್ಯದ ಸಮರ್ಪಕ ವಿಲೇವಾರಿ ಮುಖ್ಯವಾಗುತ್ತದೆ. ಇತರ ನಗರಗಳಿಗೆ ಹೋಲಿಸಿದರೆ ಮೈಸೂರು ಸ್ವಚ್ಛವಾಗಿದೆ. ವಿದ್ಯಾರಣ್ಯಪುರಂನ ಸೀವೇಜ್ ಫಾರಂನಲ್ಲಿ ತ್ಯಾಜ್ಯ ನಿರ್ವಹಣೆ ಮಾಡದಿರುವುದು. ಹಸಿ ಕಸ ಒಣ ಕಸ ಬೇರ್ಪಡಿಸದಿರುವುದೇ ಕಡಿಮೆ ರ‍್ಯಾಂಕ್‌ಗೆ ಕಾರಣ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ‘ಮುಡಾ ಬಡಾವಣೆಗಳಲ್ಲೂ ಕಸ ವಿಲೇವಾರಿಯಾಗುತ್ತಿಲ್ಲ. ನಗರದ ಹೊರವಲಯದಲ್ಲೂ ಇದೇ ಸ್ಥಿತಿಯಿದೆ. ಅದನ್ನು ಬದಲಿಸಲಾಗುವುದು. ಎಲ್ಲ ಸಮಸ್ಯೆ ಸರಿಪಡಿಸಿ 10ರೊಳಗಿನ ಸ್ಥಾನ ಪಡೆಯುವಂತೆ ಕ್ರಮ ವಹಿಸುತ್ತೇವೆ’ ಎಂದು ವಿವರಿಸಿದರು.
ಯಾರು ಏನಂತಾರೆ?
‘ಘನ ತ್ಯಾಜ್ಯ ವಿಲೇವಾರಿ ಆಗಲಿ’: ಸೀವೇಜ್ ಫಾರಂನಲ್ಲಿರುವ 6 ಟನ್ ಘನ ತ್ಯಾಜ್ಯ ವಿಲೇವಾರಿ ಮಾಡಲು ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರದಿಂದ ವಿಳಂಬವಾಗುತ್ತಿದೆ. ಎಸ್‌ಟಿಪಿಗಳನ್ನು (ಒಳಚರಂಡಿ ಸಂಸ್ಕರಣ ಘಟಕ) ಮತ್ತಷ್ಟು ಸ್ಥಾಪಿಸಬೇಕು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗಿರುವುದರಿಂದ ರ‍್ಯಾಂಕಿಂಗ್‌ನಲ್ಲಿ ಹಿನ್ನಡೆಯಾಗಿದೆ. ಇಂದೋರ್‌ಗೂ ನಾನು ಪ್ರವಾಸ ಮಾಡಿದ್ದೆ. ಅಲ್ಲಿ ಎರಡು ಪಾಳಿಯಲ್ಲಿ ಪೌರಕಾರ್ಮಿಕರು ಕೆಲಸ ಮಾಡಿತ್ತಾರೆ. ಜಿಪಿಎಸ್ ಮೂಲಕ ಸ್ವಚ್ಛತೆ ನಿರ್ವಹಣೆ ನಡೆಯುತ್ತಿದೆ. ಹಸಿಕಸದಿಂದ ಜೈವಿಕ ಅನಿಲವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಅಂತಹ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಶಿವಕುಮಾರ್ ಮಾಜಿ ಮೇಯರ್
‘ನಮಗೂ ಬೇಜಾರಾಗಿದೆ’: ಒಂದನೇ ಸ್ಥಾನದಲ್ಲಿದ್ದವರು ಕೆಳಗೆ ಹೋಗುತ್ತಲೇ ಇದ್ದೇವೆ. ಪೌರಕಾರ್ಮಿಕರು ಕಷ್ಟ ಪಡುತ್ತಲೇ ಇದ್ದಾರೆ. ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ರಿಂಗ್ ರಸ್ತೆಯಾಚೆಗೂ ನಗರ ವಿಸ್ತರಣೆ ಆಗಿದೆ. 2180 ಪೌರಕಾರ್ಮಿಕರಿದ್ದಾರೆ. ಹೀಗಾಗಿ ಹೆಚ್ಚುವರಿ ನೌಕರರನ್ನು ತೆಗೆದುಕೊಳ್ಳಬೇಕು. 59 ಮಂದಿ ತೀರಿಹೋಗಿದ್ದು ಆ ಜಾಗಕ್ಕೆ ಮತ್ತೆ ನೇಮಕಾತಿ ಆಗಿಲ್ಲ. –ಎನ್.ಮಾರ ಅಧ್ಯಕ್ಷ ಮೈಸೂರು ನಗರ ಪಾಲಿಕೆ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘ
‘ನೂರನೇ ಸ್ಥಾನ ಸಿಕ್ಕರೂ ಆಶ್ಚರ್ಯವಿಲ್ಲ’: ಮೊದಲ ಸ್ಥಾನದಲ್ಲಿದ್ದ ನಗರವು ಕುಸಿಯುತ್ತಲೇ ಸಾಗಿದೆ. ಪರೀಕ್ಷೆಗೆ ಕೊನೆ ಕ್ಷಣದಲ್ಲಿ ಸಿದ್ಧವಾಗುವಂತೆ ಅಧಿಕಾರಿಗಳು ಸರ್ವೇಕ್ಷಣೆಗೆ ಬಂದಾಗಲೇ ಕಾರ್ಯೋನ್ಮುಖರಾಗುತ್ತಾರೆ. ಮುಂದಿನ 50 ವರ್ಷದಲ್ಲಿ ಮೈಸೂರು ಹೇಗಿರಬೇಕು ಎಂಬ ದೂರದೃಷ್ಟಿಯಲ್ಲಿ ಕೆಲಸ ಮಾಡುತ್ತಿಲ್ಲ. ಚರಂಡಿ ಸಂಸ್ಕೃತಿಯಿಂದ ಜಲ ಸಂಸ್ಕೃತಿಯತ್ತ ಮರಳಬೇಕಿದೆ. ಕೆರೆಗಳು ಮಳೆ ನೀರಿನ ಚರಂಡಿಗಳು ಸೇರಿದಂತೆ ಜಲಮೂಲಗಳ ರಕ್ಷಣೆಯಾಗಬೇಕು. ಅದಾದರೆ ಸ್ವಚ್ಛ ನಗರಿ ಗರಿಮೆ ತಾನಾಗೇ ಬರುತ್ತದೆ. ಅದಕ್ಕೆ ಜನರ ಪಾಲ್ಗೊಳ್ಳುವಿಕೆಯೂ ಮುಖ್ಯ. 15 ಲಕ್ಷಕ್ಕೂ ಹೆಚ್ಚಿರುವ ಜನಸಂಖ್ಯೆಯರುವ ನಗರದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕವೇ ಇಲ್ಲ. ಜಲಮೂಲಗಳು ನಾಶವಾಗುತ್ತಿವೆ. ಹೀಗಾಗಿ ಸ್ವಚ್ಛತೆಯಲ್ಲಿ ನೂರನೇ ಸ್ಥಾನ ಸಿಕ್ಕರೂ ಆಶ್ಚರ್ಯವಿಲ್ಲ. ಪರಿಸರ ಹಾಗೂ ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಲಿದೆ -ಯು.ಎನ್.ರವಿಕುಮಾರ್ ಪರಿಸರ ತಜ್ಞ
‘ಕಟ್ಟುನಿಟ್ಟಿನಲ್ಲಿ ದಂಡ ವಿಧಿಸುತ್ತಿಲ್ಲ’: ಹಸಿ ಕಸ ಒಣ ಕಸ ವಿಂಗಡಿಸದೇ ಕಸ ಸಂಗ್ರಹ ಈಗಲೂ ನಡೆಯುತ್ತಿದೆ. ದಂಡ ವಿಧಿಸುವ ಕಾರ್ಯ ಕಟ್ಟುನಿಟ್ಟಿನಲ್ಲಿ ಆಗಬೇಕು. ಜನರಲ್ಲೂ ಶಿಸ್ತು ಬರಬೇಕೆಂದರೆ ಸಿಂಗಪುರದಂತೆಯೇ ಕಠಿಣ ದಂಡ ಕ್ರಮಗಳನ್ನು ಪಾಲಿಕೆ ಅನುಸರಿಸಬೇಕು. ಯಾದವಗಿರಿಯಂಥ ಶಿಕ್ಷಿತರು ಇರುವಲ್ಲೇ ಕಸ ವಿಲೇವಾರಿ ಹೇಗೆ ಮಾಡಬೇಕೆಂಬ ಪ್ರಜ್ಞೆ ಇಲ್ಲ. ಕೆಲಸದವರಿಗೆ ಕಸವನ್ನು ಖಾಲಿ ನಿವೇಶನಗಳಲ್ಲಿ ಹಾಕಲು ಹೇಳುತ್ತಾರೆ. ಪಾಲಿಕೆ ಸದಸ್ಯರೂ ಅವರ ಪರವಾಗಿ ನಿಲ್ಲುತ್ತಾರೆ. ಮತ ತಪ್ಪಿಹೋಗುವುದೆಂದು ಹೆದರುತ್ತಾರೆ. ಹೀಗಿರುವಾಗ ರ‍್ಯಾಂಕಿಂಗ್ ಕಡಿಮೆಯಾಗದೇ ಇನ್ನೇನಾಗುತ್ತದೆ- ಭಾಮಿ ವಿ ಶೆಣೈ ಮೈಸೂರು ಗ್ರಾಹಕ ಪರಿಷತ್ತು
‘ಮೈಸೂರಿಗಾಗಿ ಸ್ವಚ್ಛತಾ ಪ್ರಜ್ಞೆ ಬೆಳೆಸಲಿ’: ರ‍್ಯಾಂಕಿಂಗ್‌ಗಾಗಿ ಸ್ವಚ್ಛವಾಗಿಡಲು ಯತ್ನಿಸುವುದಕ್ಕಿಂತ ಪಾಲಿಕೆ ಹಾಗೂ ಜಿಲ್ಲಾಡಳಿತವು ಸುಂದರ ಮೈಸೂರು ನಿರ್ಮಾಣಕ್ಕಾಗಿ ಸುಸ್ಥಿರ ಕ್ರಮ ಅನುಸರಿಸಬೇಕು. ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಬೇಕು. ಹಸಿರು ವಲಯಗಳ ರಕ್ಷಣೆ ತ್ಯಾಜ್ಯ ವಿಲೇವಾರಿ ಶೌಚಾಲಯಗಳ ನಿರ್ಮಾಣ ಸೇರಿದಂತೆ ಅಭಿಯಾನವನ್ನು ವರ್ಷವಿಡೀ ನಡೆಸಬೇಕು. ಸ್ವಚ್ಛ ಸರ್ವೇಕ್ಷಣೆಯ ಬಗ್ಗೆ ಜನರಲ್ಲಿಯೂ ಅರಿವು ಮೂಡಿಸಬೇಕು- ಶೈಲಜೇಶ್ ಪರಿಸರ ತಜ್ಞ
ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ : ಮನೆ–ಮನೆ ಕಸ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿಲ್ಲ. ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ ವ್ಯಾಪಾರ ಮಳಿಗೆಗಳಲ್ಲಿ ಇನ್ನೂ ಬಳಕೆ ನಡೆದಿದೆ. ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನೇ ಮುಚ್ಚಿಸಬೇಕು. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಬೇಕು. ಪಾದಚಾರಿ ಮಾರ್ಗದಲ್ಲಿ ಫಾಸ್ಟ್‌ಫುಡ್‌ಗಳ ಸಂಖ್ಯೆ ಹೆಚ್ಚುತ್ತಿದ್ದು ಕಸ– ಪ್ಲಾಸ್ಟಿಕ್‌ಗಳು ಚರಂಡಿ ಸೇರುತ್ತಿವೆ. ಸ್ವಚ್ಛತೆಯೂ ಮರೀಚಿಕೆಯಾಗಿದೆ. ಪೌರಕಾರ್ಮಿಕರಿಗೂ ಕೆಲಸ ಹೆಚ್ಚುವರಿಯಾಗುತ್ತಿದೆ. ಅವರು ನಮ್ಮಂತೆಯೇ ಅಲ್ಲವೇ- ಭಾನು ಮೋಹನ್ ಪರಿಸರ ಹೋರಾಟಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.