ಮೈಸೂರು: ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಬುಧವಾರ ಆರಂಭಗೊಂಡ ಸರ್ಕಾರಿ ನೌಕರರ ಮುಷ್ಕರದಿಂದ ಜಿಲ್ಲೆಯ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು.
ನಗರದ ಕೆ.ಆರ್.ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆಯ ಮುಖ್ಯ ಹಾಗೂ ವಲಯ ಕಚೇರಿಗಳಲ್ಲಿ ಸೇವೆ ಸಿಗದೆ ಸಾರ್ವಜನಿಕರು ಪರದಾಡಿದರು.
ಜಯನಗರದಲ್ಲಿರುವ ಪಾಲಿಕೆ ವಲಯ ಕಚೇರಿಗೆ ಸಿಬ್ಬಂದಿ ಬಂದಿರಲಿಲ್ಲ. ಕಚೇರಿಯ ಬಾಗಿಲು ಮುಚ್ಚಲಾಗಿತ್ತು. ಖಾತೆ ಬದಲಾವಣೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಅರ್ಜಿ ಸಲ್ಲಿಸಲು ಬಂದಿದ್ದವರು ವಾಪಸ್ ಆದರು. ಕರ್ನಾಟಕ ಒನ್ ಕೇಂದ್ರಗಳು ಮಾತ್ರ ಕಾರ್ಯಾಚರಿಸಿದವು. ಹೊರಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದರು
'ಖಾತೆ ಬದಲಾವಣೆಗೆ ಮೂರು ತಿಂಗಳಿಂದ ಅಲೆಯುತ್ತಿದ್ದೇನೆ. ಬುಧವಾರ ಬರಲು ಹೇಳಿದ್ದರು. ಇಂದೂ ಕೆಲಸವಾಗಿಲ್ಲ' ಎಂದು ಚಾಮರಾಜಪುರಂನ ರಮೇಶ್ ಹೇಳಿದರು.
ಹೊರರೋಗಿಗಳಿಂದ ಗಿಜಿಗುಡುತ್ತಿದ್ದ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ವ್ಯತ್ಯಯವಾಗಿತ್ತು. ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ಮಂಗಳವಾರದಿಂದಲೇ ದಾಖಲಿಸಿಕೊಂಡಿರಲಿಲ್ಲ. ವೈದ್ಯರು ಇರಲಿಲ್ಲ. ಶುಶ್ರೂಷಕಿಯೊಬ್ಬರಷ್ಟೇ ಇದ್ದರು. ನಾಲ್ವರು 'ಡಿ' ಗ್ರೂಪ್ ನೌಕರರು ಕೆಲಸಕ್ಕೆ ಹಾಜರಾಗಿದ್ದರು.
'ಸ್ವಚ್ಚತೆಗೆ ಹಾಗೂ ಆಸ್ಪತ್ರೆ ನಿರ್ವಹಣೆಗೆ ಬಂದಿದ್ದೇವೆ. ನಿನ್ನೆಯಿಂದಲೇ ರೋಗಿಗಳನ್ನು ದಾಖಲಿಸಿಕೊಂಡಿಲ್ಲ. ಆಸ್ಪತ್ರೆಯಲ್ಲಿರುವ ರೋಗಿಗಳು, ತಾಯಿ-ಮಗುವಿಗೆ ಆರೈಕೆ ಮುಂದುವರಿದಿದೆ' ಎಂದು ಸಿಬ್ಬಂದಿ ತಿಮ್ಮಣ್ಣ ಹೇಳಿದರು.
'ಸೋಮವಾರ ಸೊಸೆಗೆ ಮಗುವಾಗಿದೆ. ಇಂದು ಬಂದಿದ್ದರೆ ದಾಖಲಿಸಿಕೊಳ್ಳುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಬೇಕಿತ್ತು' ಎಂದು ರಾಜೇಶ್ ಹೇಳಿದರು.
ಜಯನಗರದ ಕೌಟುಂಬಿಕ ನ್ಯಾಯಾಲಯ ಸಂಕೀರ್ಣದಲ್ಲಿ 200ಕ್ಕೂ ಹೆಚ್ಚು ನೌಕರರು ವಾಪಸಾದರು. ಕೆಲವರು ಕೆಲಸ ನಿರ್ವಹಿಸಿದರು. ಕಲಾಪಗಳು ಎಂದಿನಂತೆ ನಡೆದಿವೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.