ADVERTISEMENT

ಮೈಸೂರು | ಡೆಂಗಿ ಜ್ವರ ಪ್ರಕರಣ ಹೆಚ್ಚಳ, ಆತಂಕ

ಒಟ್ಟು 2565 ಜನರ ರಕ್ತ ಮಾದರಿ ಪರೀಕ್ಷೆ, ಮೈಸೂರು ನಗರದಲ್ಲಿ ಹೆಚ್ಚು

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:33 IST
Last Updated 23 ಜೂನ್ 2024, 5:33 IST
ಮೈಸೂರು ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಜಾಗೃತಿ ಕಾರ್ಯಕ್ರಮ ನಡೆಯಿತು
ಮೈಸೂರು ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಜಾಗೃತಿ ಕಾರ್ಯಕ್ರಮ ನಡೆಯಿತು   

ಮೈಸೂರು: ಜಿಲ್ಲೆಯಲ್ಲಿ ಡೆಂಗಿ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಐದು ತಿಂಗಳಲ್ಲಿ ಈವರೆಗೆ ಒಟ್ಟು 358 ಜನರಲ್ಲಿ ಡೆಂಗಿ ದೃಢಪಟ್ಟಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

ಜನವರಿಯಿಂದ ಜೂನ್‌ವರಗೆಗೂ ಇದುವರೆಗೂ ತಾಲ್ಲೂಕಿನಲ್ಲಿ 1779 ಹಾಗೂ ನಗರ ಭಾಗದಲ್ಲಿ 786 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2,565 ಜನರ ರಕ್ತ ಮಾದರಿ ಪರೀಕ್ಷೆ ನಡೆಸಲಾಗಿದೆ. ತಿ.ನರಸೀಪುರ ತಾಲ್ಲೂಕಿನಲ್ಲಿ ಅತಿ ಕಡಿಮೆ 6 ಪ್ರಕರಣಗಳು ಕಂಡುಬಂದಿದ್ದು, ಮೈಸೂರು ನಗರದಲ್ಲಿ 212 ಪ್ರಕರಣ ದಾಖಲಾಗಿವೆ.

ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 391 ಪರೀಕ್ಷೆ ನಡೆಸಿದ್ದು, 39 ಪಾಸಿಟಿವ್ ಕಂಡುಬಂದಿದೆ. ಫೆಬ್ರುವರಿ ತಿಂಗಳಲ್ಲಿ 436ರಲ್ಲಿ 80, ಮಾರ್ಚ್‌ನಲ್ಲಿ 321ರಲ್ಲಿ 55, ಏ‍ಪ್ರಿಲ್‌ನಲ್ಲಿ 439ರಲ್ಲಿ 78, ಮೇ ತಿಂಗಳಲ್ಲಿ 640 ರಲ್ಲಿ 89, ಜೂನ್‌ನಲ್ಲಿ 168ರಲ್ಲಿ 17 ಕಂಡುಬಂದಿದೆ.

ADVERTISEMENT

ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಹಾಗೂ ಅವುಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರ್ಷವಿಡೀ ಹಲವು ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದರೂ, ಡೆಂಗಿ ಪ್ರಕರಣ ನಿಯಂತ್ರಣವಾಗುತ್ತಿಲ್ಲ.

ಚಿಕಿತ್ಸೆಗೆ ಕ್ರಮ: ‘ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದಾಗಿ ಸೊಳ್ಳೆಗಳ ಉತ್ಪತ್ತಿಯ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ಹೆಚ್ಚಳ ಗುರುತಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಿಸಿ ಲಾರ್ವಾ ನಿರ್ಮೂಲನೆ ಮಾಡಲಾಗುತ್ತಿದೆ. ಡೆಂಗಿ ಲಕ್ಷಣ ಕಂಡು ಬಂದ ಕೂಡಲೇ ರಕ್ತ ಪರೀಕ್ಷೆ ನಡೆಸಿ, ರೋಗಿಗಳಿಗೆ ಚಿಕಿತ್ಸೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮನೆ–ಮನೆಗೆ ಭೇಟಿ ನೀಡಿ ಡೆಂಗಿ ತಪಾಸಣೆ ನಡೆಸಲಾಗುತ್ತದೆ. ಪ್ರತಿ ವಾರಕೊಮ್ಮೆ ಸಭೆ ನಡೆಸಲಾಗುತ್ತಿದೆ. ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ, ಅರಿವು ಮೂಡಿಸಲಾಗುತ್ತಿದೆ. ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೋಂಕು ಲಕ್ಷಣ: ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುವುದು ಡೆಂಗಿ ಲಕ್ಷಣಗಳಾಗಿವೆ.

ಮುಂಜಾಗ್ರತಾ ಕ್ರಮ: ನೀರಿನ ಸಂಗ್ರಹದ ಬಗ್ಗೆ ಜನರು ಜಾಗೃತಿ ವಹಿಸಬೇಕು. ಮನೆಯ ಟ್ಯಾಂಕ್‌, ಸಂಪುಗಳಲ್ಲಿ ಬಳಕೆಗಾಗಿ ಸಂಗ್ರಹಿಸಿದ ನೀರನ್ನು ಸರಿಯಾಗಿ ಮುಚ್ಚಿ ಲಾರ್ವಾ ಆಗದಂತೆ ಜನರು ನೋಡಿಕೊಳ್ಳಬೇಕು. ಮನೆಯ ಸುತ್ತ ಟೈರ್‌, ತೆಂಗಿನ ಚಿಪ್ಪು, ಹೂ ಕುಂಡಗಳಲ್ಲಿ ಹಾಗೂ ಘನ ತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಡೆಂಗಿ ಹರಡುವಿಕೆಗೆ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬೇಕು ಎನ್ನುವುದು ಆರೋಗ್ಯ ಇಲಾಖೆಯವರ ಸಲಹೆಯಾಗಿದೆ.

ಜಿಲ್ಲೆಯಲ್ಲಿ ಡೆಂಗಿ ತೀವ್ರ ತರಹದ ಪ್ರಕರಣಗಳು ಇಲ್ಲ. ಆತಂಕ ಪಡುವ ಅವಶ್ಯಕತೆ ಇಲ್ಲ. ಸೊಳ್ಳೆಗಳಿಂದ ಹರಡುವ ಕಾಯಿಲೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಡಾ.ಕುಮಾರಸ್ವಾಮಿ, ಡಿಎಚ್‌ಒ
ಮಳೆಗಾಲದಲ್ಲಿ ಡೆಂಗಿ ಸಾಮಾನ್ಯ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.