ADVERTISEMENT

ಮೈಸೂರು: ನಿಂತ ಗಡಿಯಾರದ ‘ಎದೆಬಡಿತ’!

ಚಿಕ್ಕ ಹಾಗೂ ದೊಡ್ಡ ಗಡಿಯಾರಗಳ ‘ಕಾಲ’ವೇ ಸರಿ ಇಲ್ಲ; ನಿರ್ವಹಣೆಯ ಕೊರತೆ

ಎಂ.ಮಹೇಶ
Published 20 ಅಕ್ಟೋಬರ್ 2024, 7:45 IST
Last Updated 20 ಅಕ್ಟೋಬರ್ 2024, 7:45 IST
ಮೈಸೂರಿನ ದೊಡ್ಡ ಗಡಿಯಾರ ಗೋ‍ಪುರ
ಮೈಸೂರಿನ ದೊಡ್ಡ ಗಡಿಯಾರ ಗೋ‍ಪುರ   

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಗೋಪುರಗಳಾದ ಚಿಕ್ಕ ಗಡಿಯಾರ ಮತ್ತು ದೊಡ್ಡ ಗಡಿಯಾರಗಳ ಸಮಯವೇ ಸರಿಯಿಲ್ಲ. ಅವು ಕೆಟ್ಟು ಹೋಗಿದ್ದು, ಸಂಬಂಧಿಸಿದವರು ತಿಂಗಳುಗಳೇ ಕಳೆದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ಇವು ಸಾಂಸ್ಕೃತಿಕ ನಗರಿಗೆ ‘ಪಾರಂಪರಿಕ ಹೆಗ್ಗುರುತು’ ಕೂಡ ಆಗಬೇಕು, ಜನರಿಗೆ ಸಮಯವನ್ನು ತಿಳಿಸುವ ಕೆಲಸವೂ ಆಗಬೇಕು ಎಂಬ ಉದ್ದೇಶದಿಂದ ಈ ಗಡಿಯಾರ ಗೋಪುರಗಳನ್ನು ಸ್ಥಾಪಿಸಲಾಗಿದೆ. ಆದರೆ, ಇದರ ಉದ್ದೇಶವೇ ಈಗ ಈಡೇರುತ್ತಿಲ್ಲ. ಜನರಿಗೆ ಇವುಗಳಿಂದ ‘ಸಮಯ ತಿಳಿದುಕೊಳ್ಳುವುದು’ ಸಾಧ್ಯವಾಗುತ್ತಿಲ್ಲ. ಆಗಾಗ ಇವು ದುರಸ್ತಿಯನ್ನು ಬಯಸುತ್ತಲೇ ಇವೆ. ಆದರೆ, ಸಮರ್ಪಕ ನಿರ್ವಹಣೆಯ ಕಾರ್ಯವನ್ನು ಮಾಡಲಾಗುತ್ತಿಲ್ಲ. ಇದು, ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಪುರಭವನದ ಎದುರಿನ ದೊಡ್ಡ ಗಡಿಯಾರದ ಗೋಪುರವನ್ನು 1927ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ರಜತ ಮಹೋತ್ಸವದ ನೆನಪಿಗಾಗಿ ನಿರ್ಮಿಸಲಾಗಿತ್ತು. ಇದನ್ನು ಸಿಲ್ವರ್ ಜ್ಯೂಬಿಲಿ ಟವರ್ ಎಂದೂ ಕರೆಯುತ್ತಾರೆ. ಈ ದೊಡ್ಡ ಗಡಿಯಾರ ಗೋಪುರವನ್ನು ಇಂಡೋ–ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಐದು ಅಡಿ ವ್ಯಾಸದ ಗಡಿಯಾರವಿದೆ.

ADVERTISEMENT

ಆಕ್ರಮಿಸಿಕೊಂಡಿದ್ದರು: ಚಿಕ್ಕ ಗಡಿಯಾರ ಗೋಪುರವು ನಗರದ ಐತಿಹಾಸಿಕ ಸ್ಮಾರಕ ಮತ್ತು ಪಾರಂಪರಿಕ ಗೋಪುರವಾಗಿದೆ. ದೇವರಾಜ ಮಾರುಕಟ್ಟೆಯ ಮುಂಭಾಗದಲ್ಲಿ ಇರುವ ದೊಡ್ಡ ಗಡಿಯಾರವನ್ನು ಡಫರಿನ್ ಕ್ಲಾಕ್ ಟವರ್ ಎಂದೂ ಕರೆಯಲಾಗುತ್ತದೆ. ಲಾರ್ಡ್ ಡಫರಿನ್ 1884–1888ರ ಅವಧಿಯಲ್ಲಿ ಭಾರತದ ವೈಸರಾಯ್ ಆಗಿದ್ದರು. ದೇವರಾಜ ಮಾರುಕಟ್ಟೆಯ ಬಳಿಯಲ್ಲಿ ಚಿಕ್ಕ ಗಡಿಯಾರವನ್ನು ಲಾರ್ಡ್ ಡಫರಿನ್ ಅವರ ಗೌರವಾರ್ಥವಾಗಿ 1886ರಲ್ಲಿ ನಿರ್ಮಿಸಲಾಗಿತ್ತು.

ಈ ಚಿಕ್ಕ ಗಡಿಯಾರ ಗೋಪುರದ ಸುತ್ತಲಿನ ಜಾಗವನ್ನು ಈ ಹಿಂದೆ ರಸ್ತೆಬದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ವಾಹನ ನಿಲುಗಡೆಗೆ ಬಳಸುತ್ತಿದ್ದರು. ಪಾರಂಪರಿಕ ಇಲಾಖೆಯು ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸಿ 2012ರಲ್ಲಿ ನಗರ ಪಾಲಿಕೆಯು ಈ ಗಡಿಯಾರ ಗೋಪುರದ ಸುತ್ತಲಿನ ಜಾಗವನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನವೀಕರಿಸಿತ್ತು. ಆದರೆ, ಚಿಕ್ಕ ಗಡಿಯಾರ ಮತ್ತು ದೊಡ್ಡ ಗಡಿಯಾರಗಳ ಹೃದಯಗಳು ಈಗ ಮಿಡಿಯುತ್ತಿಲ್ಲ. ಅಂದರೆ, ಗಡಿಯಾರಗಳು ಕಾರ್ಯನಿರ್ವಹಿಸುತ್ತಿಲ್ಲ.

ಕ್ರಮ ಕೈಗೊಳ್ಳಲಿ: ‘ಕೆಟ್ಟು ಹೋದ ಗಡಿಯಾರಗಳೂ ಕೂಡ ದಿನಕ್ಕೆರಡು ಬಾರಿ ಸರಿಯಾದ ಸಮಯವನ್ನು ತೋರಿಸುತ್ತವೆ. ಆದರೆ, ಇಲ್ಲಿನ ಚಿಕ್ಕ ಗಡಿಯಾರ ಮತ್ತು ದೊಡ್ಡ ಗಡಿಯಾರಗಳು ನಾಲ್ಕು ದಿಕ್ಕಿನಲ್ಲಿ ನಾಲ್ಕು ರೀತಿಯ ಸಮಯವನ್ನು ತೋರಿಸುತ್ತಾ ಅಸುನೀಗಿವೆ. ಇದರಿಂದ ಈ ಎರಡೂ ಗೋಪುರಗಳು ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಪಾರಂಪರಿಕ ಇಲಾಖೆಗಳ ಬೇಜವಾಬ್ದಾರಿಗೆ ಕನ್ನಡಿ ಹಿಡಿದಂತಿವೆ’ ಎಂದು ವಕೀಲ ಪಿ.ಜೆ. ರಾಘವೇಂದ್ರ ಹೇಳಿದರು.

‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿಕ್ಕ ಗಡಿಯಾರ ಗೋಪುರದ ಸುತ್ತಮುತ್ತಲಿನ ಜಾಗವನ್ನು ನವೀಕರಿಸಿ ಅಲಂಕರಿಸಿದವರಿಗೆ ಈ ಗಡಿಯಾರವನ್ನು ರಿಪೇರಿ ಮಾಡಿಸಬೇಕೆಂಬ ಯೋಚನೆ ಬಂದೇ ಇಲ್ಲದಿರುವುದು ಸರಿಯಲ್ಲ. ಈ ಕೂಡಲೇ ಜಿಲ್ಲಾಡಳಿತ, ಪಾಲಿಕೆ ಹಾಗೂ ಪಾರಂಪರಿಕ ಇಲಾಖೆ ಎಚ್ಚೆತ್ತು ಈ ಎರಡೂ ಗಡಿಯಾರಗಳ ಹೃದಯಕ್ಕೆ ಚಾಲನೆ ನೀಡಿ ಮೈಸೂರಿನ ಪರಂಪರೆಯನ್ನು ಎತ್ತಿಹಿಡಿಯಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

‘ಈ ಗಡಿಯಾರಗಳ ನಿರ್ವಹಣೆಯ ಹೊಣೆಯನ್ನು ಹಿಂದೆ ಒಬ್ಬರಿಗೆ ಗುತ್ತಿಗೆ ಕೊಡಲಾಗಿತ್ತು. ಅವರು ವಯೋಸಹಜ ಕಾರಣದಿಂದ ಆ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಗಡಿಯಾರಗಳ ದುರಸ್ತಿಗೆ ಸಮಸ್ಯೆಯಾಗಿದೆ’ ಎಂದು ನಗರ ಪಾಲಿಕೆಯ ಮೂಲಗಳು ತಿಳಿಸಿವೆ.

ಶಿವಕುಮಾರ್‌ ಅವರು ಮೇಯರ್ ಆಗಿದ್ದಾಗ ಅಂದರೆ ಹೋದ ವರ್ಷ ನಗರ ಪಾಲಿಕೆಯಿಂದ ₹38 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು.

ಚಿಕ್ಕಗಡಿಯಾರ ಗೋಪುರ

‘ದುರಸ್ತಿ ಸವಾಲಿನ ಕೆಲಸ’

‘ಈ ಗಡಿಯಾರಗಳ ದುರಸ್ತಿಗೆ ಸಂಬಂಧಿಸಿದಂತೆ ನಾನು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೆ. ದುರಸ್ತಿ ಮಾಡುವ ಪರಿಣತರು ದೊರೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ಈಚೆಗೆ ಸಿಕ್ಕಿದ್ದು ಅವರೊಂದಿಗೆ ಮಾತುಕತೆ ಆಗಬೇಕಾಗಿದೆ. ದೊಡ್ಡ ಗಡಿಯಾರವನ್ನು ಏರಿ ದುರಸ್ತಿ ಮಾಡುವುದು ಸವಾಲಿನ ಕೆಲಸವೂ ಆಗಿದೆ’ ಎಂದು ಇತಿಹಾಸ ತಜ್ಞ ಎನ್.ಎಸ್. ರಂಗರಾಜು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.