ADVERTISEMENT

ಮೈಸೂರು | ಗಂಗರು– ಹೊಯ್ಸಳರ ಕಾಲದ ಜೈನ ಮೂರ್ತಿಗಳು ಪತ್ತೆ

ಕೂಶ್ಮಾಂಡಿನಿ, ತೀರ್ಥಂಕರರ ವಿಗ್ರಹ l ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 14:10 IST
Last Updated 31 ಡಿಸೆಂಬರ್ 2023, 14:10 IST
ಮೈಸೂರು ತಾಲ್ಲೂಕಿನ ವರುಣ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಪತ್ತೆಯಾದ ಗಂಗರು– ಹೊಯ್ಸಳರ ಕಾಲದ ಮೂರು ಜೈನ ವಿಗ್ರಹಗಳೊಂದಿಗೆ ಪ್ರಸನ್ನಕುಮಾರ್, ಪ್ರೊ.ಎನ್‌.ಎಸ್‌.ರಂಗರಾಜು, ವಿನೋದ್‌ ಜೈನ್‌, ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕಿ ಸಿ.ಎನ್‌.ಮಂಜುಳಾ 
ಮೈಸೂರು ತಾಲ್ಲೂಕಿನ ವರುಣ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಪತ್ತೆಯಾದ ಗಂಗರು– ಹೊಯ್ಸಳರ ಕಾಲದ ಮೂರು ಜೈನ ವಿಗ್ರಹಗಳೊಂದಿಗೆ ಪ್ರಸನ್ನಕುಮಾರ್, ಪ್ರೊ.ಎನ್‌.ಎಸ್‌.ರಂಗರಾಜು, ವಿನೋದ್‌ ಜೈನ್‌, ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕಿ ಸಿ.ಎನ್‌.ಮಂಜುಳಾ    

ಮೈಸೂರು: ತಾಲ್ಲೂಕಿನ ವರುಣ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಗಂಗರು– ಹೊಯ್ಸಳರ ಕಾಲದ ಮೂರು ಜೈನ ವಿಗ್ರಹಗಳು ಪತ್ತೆಯಾಗಿದ್ದು, ಅವನ್ನು ವೆಲ್ಲಿಂಗ್ಟನ್‌ ಬಂಗಲೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಗ್ರಾಮದ ಅಂಬೇಡ್ಕರ್‌ ಬೀದಿಯಲ್ಲಿ ಡಿ.26ರ ಮಂಗಳವಾರ ಜೆಸಿಬಿಯಲ್ಲಿ ಚರಂಡಿ ನಿರ್ಮಿಸಲು ಕಾಮಗಾರಿ ನಡೆಸಿದ್ದಾಗ ಕೂಷ್ಮಾಂಡಿನಿ, ಜೈನ ತೀರ್ಥಂಕರರ ಎರಡು ಮೂರ್ತಿಗಳು ಪತ್ತೆಯಾದವು. ಈ ವೇಳೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಸ್ಥಳೀಯರು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯವರಿಗೆ ವಿಷಯ ಮುಟ್ಟಿಸಿದ್ದರು.

ಇಲಾಖೆಯ ಉಪನಿರ್ದೇಶಕಿ ಸಿ.ಎನ್‌.ಮಂಜುಳಾ, ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಸಂಶೋಧಕ ಟಿ.ಎ.ಶಶಿಧರ್, ಜೈನ ಸಮುದಾಯದ ಮುಖಂಡರಾದ ಪ್ರಸನ್ನಕುಮಾರ್, ವಿನೋದ್‌ ಜೈನ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

ADVERTISEMENT

‘ಭಗ್ನ ಜೈನ ಮೂರ್ತಿಗಳಾಗಿದ್ದು, ಕೂಶ್ಮಾಂಡಿನಿ ದೇವಿಯ ಕೈ ಮುರಿದಿದೆ. ಮತ್ತೊಬ್ಬ ಜಿನನ ತಲೆ ಭಾಗ ಮಾತ್ರ ಸಿಕ್ಕಿದೆ. ದೇಹದ ಭಾಗವನ್ನು ಹುಡುಕಲಾಯಿತಾದರೂ ಸಿಗಲಿಲ್ಲ. ಮತ್ತೊಂದು ಜಿನ ಮೂರ್ತಿಯನ್ನು ಚರಂಡಿ ತೆಗೆಯುವಾಗ ಜೆಸಿಬಿಯಿಂದ ಹಾನಿಯಾಗಿದೆ’ ಎಂದು ಇತಿಹಾಸ ತಜ್ಞ ಪ್ರೊ.ಎನ್‌.ಎಸ್.ರಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗಂಗ– ಹೊಯ್ಸಳರ ಕಾಲದಲ್ಲಿ ಗ್ರಾಮದಲ್ಲಿ ಜೈನ ದೇವಾಲಯಗಳಿದ್ದವು. ವರುಣ ಕೆರೆಯ ಕೆಳ ಭಾಗದಲ್ಲಿ ಉತ್ಖನನ ಮಾಡಿದರೆ ದೇಗುಲಗಳು ಸಿಗಬಹುದು. ಸಿಕ್ಕ ಹಲವು ಮೂರ್ತಿಗಳನ್ನು ಗ್ರಾಮಸ್ಥರು ದೇವಾಲಯಗಳಲ್ಲಿ ಸ್ಥಾಪಿಸಿದ್ದಾರೆ’ ಎಂದರು.

‘ಗಂಗರ ಕಾಲದಲ್ಲಿ ತಲಕಾಡು, ಹೆಮ್ಮಿಗೆ, ಮೂಗೂರು, ತಿ.ನರಸೀಪುರ, ವರಕೋಡು, ವರುಣ, ವಾಜಮಂಗಲ, ಮೈಸೂರು, ಹೆಮ್ಮನಹಳ್ಳಿ, ಕುಮಾರಬೀಡು ಮುಖ್ಯ ಜೈನ ಗ್ರಾಮಗಳಾಗಿದ್ದವು. ಶ್ರವಣಬೆಳಗೊಳಕ್ಕೆ ತೆರಳಲು ಇದೇ ಮಾರ್ಗ ಬಳಸುತ್ತಿದ್ದರು ಎನ್ನಲಾಗಿದೆ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.