ADVERTISEMENT

ಮೈಸೂರು | ‘ಜನಸ್ಪಂದನ’ಕ್ಕೆ ಚಾಲನೆ, ಅಹವಾಲಿನ ಮಳೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 10:33 IST
Last Updated 20 ಜೂನ್ 2024, 10:33 IST
<div class="paragraphs"><p>ಮೈಸೂರಿನ&nbsp;ಸಿದ್ಧಾರ್ಥ ನಗರದ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ&nbsp;ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನಾಗರಿಕರೊಬ್ಬರು ಮನವಿ ಸಲ್ಲಿಸಿದರು</p></div>

ಮೈಸೂರಿನ ಸಿದ್ಧಾರ್ಥ ನಗರದ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನಾಗರಿಕರೊಬ್ಬರು ಮನವಿ ಸಲ್ಲಿಸಿದರು

   

ಪ್ರಜಾವಾಣಿ ಚಿತ್ರ

ಮೈಸೂರು: ಬಡಾವಣೆಯಲ್ಲಿ ರಸ್ತೆ ನಿರ್ಮಿಸಿಕೊಡಿ. ಪಿಂಚಣಿ, ಉದ್ಯೋಗ ಕೊಡಿಸಿ. ರಸ್ತೆ ಗುಂಡಿಗಳನ್ನು ಮುಚ್ಚಿಸಿ. ಸರ್ಕಾರಿ ಆಸ್ತಿ ಒತ್ತುವರಿ ತೆರವುಗೊಳಿಸಿ. ಜಮೀನಿನ ಅಳತೆ, ಖಾತೆ ಮಾಡಿಸಿಕೊಡಿ, ದುರಸ್ತಿ ಮಾಡಿಸಿಕೊಡಿ. ಸ್ಮಶಾನ ಅಭಿವೃದ್ಧಿಪಡಿಸಿಕೊಡಿ. ಮನೆ ಕಟ್ಟಿಸಿಕೊಡಿ. ಜಮೀನಿಗೆ ರಸ್ತೆ ಮಾಡಿಸಿಕೊಡಿ. ಅಧಿಕಾರಿಗಳಿಂದ ಸ್ಪಂದನೆ ಇಲ್ಲ.

ADVERTISEMENT

– ಹೀಗೆ ನಾಗರಿಕದಿಂದ ಮನವಿ–ದೂರುಗಳ ಸುರಿಮಳೆಯೇ ಆಯಿತು.

ನಗರ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ನಾಗರಿಕರು ಇಲ್ಲಿನ ಸಿದ್ಧಾರ್ಥ ನಗರದ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ‘ತಾಲ್ಲೂಕು ಮಟ್ಟದ ಜನಸ್ಪಂದನ’ ಕಾರ್ಯಕ್ರಮದಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

ಬೆಳಿಗ್ಗೆ 10ರಿಂದ ಹಲವು ತಾಸುಗಳವರೆಗೆ ಸತತವಾಗಿ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಇಂತಿಷ್ಟು ದಿನಗಳ ಗಡುವನ್ನು ನೀಡಿದರು. ಪ್ರತಿ ನಾಗರಿಕರ ಅರ್ಜಿಯನ್ನೂ ಖುದ್ದು ಪರಿಶೀಲಿಸಿದ ಅವರು, ಬಹುತೇಕರನ್ನು ಏಕವಚನದಲ್ಲೇ ಮಾತನಾಡಿಸಿದರು; ಕೆಲವರನ್ನು ಏರುದನಿಯಲ್ಲಿ ಗದರಿದರು. ಕೆಲವರೊಂದಿಗಷ್ಟೆ ಸಮಾಧಾನದಿಂದ ಮಾತನಾಡಿದರು.

ನಿಯನಾನುಸಾರ: ‘ನಿಯಮಾನುಸಾರ ಅವಕಾಶವಿದ್ದರೆ ಕೆಲಸ ಮಾಡಿಕೊಡಬೇಕು; ಇಲ್ಲದಿದ್ದರೆ ಎಲ್ಲರಿಗೂ ಅರ್ಥವಾಗುವಂತೆ ಹಿಂಬರಹವನ್ನು ಕೊಡಬೇಕು. ಎಲ್ಲರಿಗೂ ಹೆಚ್ಚಿನ ಕಾಲಾವಕಾಶವನ್ನೇ ಕೊಟ್ಟಿದ್ದೇನೆ. ಜುಲೈ 1ರೊಳಗೆ ವರದಿ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಎಲ್ಲ ತಾಲ್ಲೂಕುಗಳಲ್ಲೂ ಕಾರ್ಯಕ್ರಮ ನಡೆಸಲಾಗುವುದು. ಸಲ್ಲಿಕೆಯಾದ ಅರ್ಜಿಗಳ ವಿಷಯದಲ್ಲಿ ಕೈಗೊಂಡ ಕ್ರಮಗಳ ಕುರಿತು ಜುಲೈ 15ರೊಳಗೆ ಮುಖ್ಯಮಂತ್ರಿ ಕಚೇರಿಗೆ ವರದಿ ಸಲ್ಲಿಸಬೇಕಾಗಿದೆ. ಆದ್ದರಿಂದ, ಅಧಿಕಾರಿಗಳು ವರದಿಯನ್ನು ನಮ್ಮ ಕಚೇರಿಗೆ ಕಳುಹಿಸಬೇಕು. ಇದನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಜುಲೈ 1ರಂದು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಯಾವ್ಯಾವ ಶಾಲೆ ಜಾಗ ಇಲಾಖೆಯ ಹೆಸರಿನಲ್ಲಿ ಇಲ್ಲವೋ ಅದರ ಪಟ್ಟಿ ಕೊಟ್ಟರೆ ಮಾಡಿಕೊಡಲಾಗುವುದು. ಜುಲೈ ಮೊದಲ ವಾರದೊಳಗೆ ವರದಿ ಸಲ್ಲಿಸಬೇಕು’ ಎಂದು ಡಿಡಿಪಿಐ ಎಚ್‌.ಕೆ. ಪಾಂಡು ಅವರಿಗೆ ಸೂಚಿಸಿದರು.

ತೆರವುಗೊಳಿಸಿ ವರದಿ ಸಲ್ಲಿಸಿ: ‘ಕೆರೆ ಜಾಗದ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಒಂದೊಮ್ಮೆ ಅಲ್ಲಿ ಸ್ಮಶಾನವಿದ್ದಲ್ಲಿ ಪರ್ಯಾಯ ಜಾಗವನ್ನು ಒದಗಿಸಲಾಗುವುದು’ ಎಂದು ದೊಡ್ಡಮಾರಗೌಡನಹಳ್ಳಿಯ ನಿವಾಸಿಗಳಿಗೆ ತಿಳಿಸಿದರು.

ದೂರೊಂದಕ್ಕೆ ಪ್ರತಿಕ್ರಿಯಿಸಿದ ಡಿಸಿ, ‘ವರುಣದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ 15 ದಿನಗಳಲ್ಲಿ ತೆರವುಗೊಳಿಸಿ ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ವಿವೇಕಾನಂದ, ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಡಿಸಿಪಿ ಜಾಹ್ನವಿ, ಎಸಿ ರಕ್ಷಿತ್, ತಹಶೀಲ್ದಾರ್‌ ಮಹೇಶ್ ಪಾಲ್ಗೊಂಡಿದ್ದರು.

ಅಹವಾಲುಗಳೇನು?

  • ಕೂರ್ಗಳ್ಳಿ ಸರ್ಕಾರಿ ಶಾಲೆಯನ್ನು ಇಲಾಖೆಯ ಹೆಸರಿಗೆ ಮಾಡಿಸಬೇಕು ಎಂದು ರವಿಕುಮಾರ್‌ ಕೋರಿದರು.

  • ಮಂಡಿ ಮೊಹಲ್ಲಾದ ಪ್ರಕಾಶ್, ಭಾನುಪ್ರಕಾಶ್ ಸೇರಿದಂತೆ ಹಲವು ಮನೆ ಕಟ್ಟಿಸಿಕೊಡುವಂತೆ ಮನವಿ ಸಲ್ಲಿಸಿದರು.

  • ಕಾಂಗ್ರೆಸ್ ಮುಖಂಡ ಬಸವಣ್ಣ, ನಂದಿನಿ ಬೂತ್ ಸ್ಥಾಪಿಸಲು ವಿಳಂಬ ಮಾಡಲಾಗುತ್ತಿದೆ. ಬದಲಿ ಜಾಗಕ್ಕೂ ಹಣ ಕಟ್ಟಲಾಗಿದೆ. ಆದರೂ ಆಗಿಲ್ಲ ಎಂದು ದೂರಿದರು. ನಗರಪಾಲಿಕೆ ಬಳಿ ಸೇರಿದಂತೆ ನಗರದ ವಿವಿಧೆಡೆ ರಸ್ತೆ ಡಾಂಬರೀಕರಣ ಮಾಡಬೇಕು, ಗುಂಡಿಗಳನ್ನು ಮುಚ್ಚಬೇಕು ಎಂದು ಕೋರಿದರು.

  • ಶ್ರೀರಾಂಪುರ ಎಸ್‌ಬಿಎಂ ಬಡಾವಣೆಯಲ್ಲಿ 36 ಮನೆಗಳಿಗೆ ರಸ್ತೆ ಇಲ್ಲದೆ ತೊಂದರೆಯಾಗಿದೆ ಎಂದು ನಿವಾಸಿಗಳು ಮನವಿ ಸಲ್ಲಿಸಿದರು. ‘ಬಡಾವಣೆ ನಿರ್ಮಿಸಿದವರು ನಿವೇಶನ ಮಾರಿ ಹಣ ತೆಗೆದುಕೊಂಡು ಹೋದರು, ಆಗ ಮುಡಾದಲ್ಲಿದ್ದ ಅಧಿಕಾರಿಗಳು ‌ಈಗ ಇಲ್ಲ. ಈಗ ಇದು ಸಮಸ್ಯೆಯಾಗಿದೆ. ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

  • ಜಯಪುರ ಹೋಬಳಿಯ ಮಾದಳ್ಳಿ ಗ್ರಾಮದಲ್ಲಿ ರಸ್ತೆ ಬಿಡಿಸಿಕೊಡವಂತೆ ಕೇಳಿಕೊಂಡರು.

  • ನೀರು, ಒಳಚರಂಡಿ ಹಾಗೂ ರಸ್ತೆ ಸೌಲಭ್ಯಕ್ಕಾಗಿ ಲಲಿತಾದ್ರಿಪುರದ ಮಲ್ಲನಕಟ್ಟೆ ರಸ್ತೆಯ ನಿವಾಸಿಗಳು ಕೋರಿದರು.

  • ನಾಚನಹಳ್ಳಿ ಪಾಳ್ಯದ ನಿವಾಸಿಯೊಬ್ಬರು ತಮ್ಮ ಮನೆ ಮೇಲೆ ಬೀಳುವ ಸ್ಥಿತಿಯಲ್ಲಿರುವ ಆಲದ ಮರ ಕತ್ತರಿಸಲು ಅನುಮತಿ ಕೊಡುವಂತೆ ಕೇಳಿದರು. ಅಪಾಯಕಾರಿ ಆಗಿದ್ದರೆ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಯು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

  • ಕೊಪ್ಪಲೂರಿನ ಸ್ಮಶಾನಕ್ಕೆ ಸೌಲಭ್ಯ ಒದಗಿಸಬೇಕು. ಒಂದಡಿ ಗುಂಡಿ ತೋಡಿದರೂ ನೀರು ಚಿಮ್ಮುತ್ತದೆ. ಇದನ್ನು ಪರಿಹರಿಸಬೇಕು ಎಂದು ಗ್ರಾಮಸ್ಥರು ಕೋರಿದರು.

  • ಕಂದಾಯ ಗ್ರಾಮ ಮಾಡಿಕೊಡುವಂತೆ ಕೆಂಪಿಸಿದ್ದನಹುಂಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರತಿಕ್ರಿಯಿಸಿದ ಡಿಸಿ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದರು.

  • ಗ್ರಾಮಸ್ಥರ ಮನವಿ ಮೇರೆಗೆ, ಕುಪ್ಪೇಗಾಲ ಕೆರೆ ಒತ್ತುವರಿಯನ್ನು ಎರಡು ವಾರದಲ್ಲಿ ತೆರವುಗೊಳಿಸಬೇಕು ಎಂದು ಡಿಸಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.