ಮೈಸೂರು: ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲೇ ಬಿಜೆಪಿಗೆ 57 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಅಲ್ಲಿನ ಜನರು ಏಕೆ ಶಾಸಕ ಹರೀಶ್ ಗೌಡರ ಮುಖ ನೋಡಿ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ ಪ್ರಶ್ನಿಸಿದರು.
‘ಮೈಸೂರು–ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸರಿ ಇದ್ದಿದ್ದರೆ ಚುನಾವಣೆ ಗೆಲ್ಲಬಹುದಿತ್ತು’ ಎಂಬ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ಹೇಳಿಕೆ ಕುರಿತು ಬುಧವಾರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
‘ಎಲ್ಲ ಎಂಟು ಕ್ಷೇತ್ರಗಳ ಶಾಸಕರು– ಮಾಜಿ ಶಾಸಕರ ಅಭಿಪ್ರಾಯ ಪಡೆದೇ ಪಕ್ಷವು ನನಗೆ ಟಿಕೆಟ್ ನೀಡಿತ್ತು. ನನ್ನ ಹಣೆಬರಹ ಸರಿಯಿಲ್ಲದ ಕಾರಣ ಸೋತಿದ್ದೇನೆ ಎಂದು ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಯಾರ ಮೇಲೂ ದೂಷಣೆ ಮಾಡುವ ಕೆಲಸವನ್ನು ನಾನು ಮಾಡಿಲ್ಲ’ ಎಂದರು.
‘ಸೋತ ಮೇಲೆ ಮಾತನಾಡುವುದಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಲಿ. ಆಗ ನಾನು ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.
‘ಮುಡಾಕ್ಕೆ ದಕ್ಷ ಐಎಎಸ್ ಅಧಿಕಾರಿಯೊಬ್ಬರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಅಲ್ಲಿ 20–30 ವರ್ಷದಿಂದ ಬೇರೂರಿರುವ ಅಧಿಕಾರಿ–ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಕೆಲಸವನ್ನೂ ಸರ್ಕಾರ ಮಾಡಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.