ಸುಧೀರ್‌ಕುಮಾರ್ ಎಚ್.ಕೆ.
ಮೈಸೂರು: ನಿತ್ಯವೂ ಸಾವಿರಾರು ಜನ ಭೇಟಿ ನೀಡುವ ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಕುಡಿಯಲು ಶುದ್ಧ ನೀರಿಲ್ಲ. ಹಲವು ಬೆಂಚುಗಳೂ ಮುರಿದಿದ್ದು, ಹೊಸ ಬೆಂಚುಗಳನ್ನು ಅಳವಡಿಸುವ ಕೆಲಸವೂ ನಡೆದಿಲ್ಲ.
ಇರುವ ಬೆಂಚುಗಳಲ್ಲಿ ಕುಳಿತಿರುವವರನ್ನು ನೋಡಿ, ಉಳಿದವರು ಮುಂದೆ ನಡೆಯುವುದು ಅನಿವಾರ್ಯ. ನಡೆಯುವಾಗ ನೀರಿನ ಬಾಟಲಿಗಳನ್ನು ಹಿಡಿದು ನಡೆಯುವುದು ಕಷ್ಟವಾದರೂ ಅದೂ ಅನಿವಾರ್ಯವೇ ಆಗಿದೆ.
‘ಬೆಂಚುಗಳಲ್ಲಿ ಕೆಲವು ಮುರಿದಿವೆ. ಕೆಲವು ಕೂರಲೂ ಪ್ರಯೋಜನವಿಲ್ಲದಂತೆ ಬಾಗಿವೆ. ಮುರಿದ ಬೆಂಚುಗಳ ತ್ಯಾಜ್ಯವೂ ಅಲ್ಲಿಯೇ ಬಿದ್ದಿದ್ದು ತೆರವುಗೊಳಿಸುವ ಕಡೆಗೂ ವಿಶ್ವವಿದ್ಯಾಲಯ ಗಮನ ಹರಿಸಿಲ್ಲ. ಕೆರೆ ಆವರಣದ ಕುರಿತು ಏಕಿಷ್ಟು ನಿರ್ಲಕ್ಷ್ಯ? ಎಂಬುದು ವಾಯುವಿಹಾರಿಗಳ ಪ್ರಶ್ನೆಯಾಗಿದೆ.
ಕೆರೆಯ ಒಂದು ಬದಿಯ ದಂಡೆಯಲ್ಲಿ, ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ದಾನ ನೀಡಿರುವ ಕಾಂಕ್ರಿಟ್ ಕುರ್ಚಿಗಳನ್ನು ಅಳವಡಿಸಲಾಗಿದೆ. ಆ ದಂಡೆಯಲ್ಲೇ ಹೆಚ್ಚು ಮಂದಿ ವಿಶ್ರಾಂತಿ ಪಡೆಯಲು ಬಯಸಿದರೂ, ಅದು ಸಾಧ್ಯವಾಗುತ್ತಿಲ್ಲ. ಹಕ್ಕಿ ದ್ವೀಪದ ಹಿಂಭಾಗದ ದಂಡೆಯಲ್ಲಿ ಕಲ್ಲಿನ ಬೆಂಚುಗಳಿದ್ದರೂ, ಬೇಡಿಕೆಗೆ ತಕ್ಕಷ್ಟಿಲ್ಲ.
ಪಡುವಾರಹಳ್ಳಿ ಕಡೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ಕೆರೆಯ ದಂಡೆಯ ಮೂಲೆಗಳಲ್ಲಿ ನಿರ್ಮಿಸಿರುವ ಮಳೆನೀರು ಕಾಲುವೆಗಳಿಗೆ ಕಟ್ಟಿದ ಕಟ್ಟೆಗಳನ್ನೇ ಬಹಳಷ್ಟು ಮಂದಿ ಬಳಸುತ್ತಾರೆ. ಅಲ್ಲಿಂದ ಮುಂದೆ ಇರುವ, ವಿಶ್ವವಿದ್ಯಾಲಯದ ತರಬೇತಿ ಕೇಂದ್ರದ ಕಟ್ಟಡದ ಆವರಣದಲ್ಲಿ ಹಲವರು ಯೋಗಾಭ್ಯಾಸ ಮಾಡುತ್ತಾರೆ. ಆದರೆ ಅಲ್ಲಿಯೂ ಬೆಂಚುಗಳಿಲ್ಲ.
ಆ ಕಟ್ಟಡದ ಮುಂಭಾಗದ ಕೆರೆ ದಂಡೆಯ ಮೆಟ್ಟಿಲುಗಳನ್ನು ಕಳೆಸಸ್ಯಗಳು ಆವರಿಸಿದ್ದು, ಅಲ್ಲಿಯೂ ಕುಳಿತುಕೊಳ್ಳಲು ಆಸ್ಪದವಿಲ್ಲ.
‘ಇಂಥ ಸನ್ನಿವೇಶದಲ್ಲೇ ಸಾವಿರಾರು ಮಂದಿ ಬೆಳಿಗ್ಗೆ– ಸಂಜೆ ನಿತ್ಯ ಬೆವರಿಳಿಸುತ್ತಿದ್ದಾರೆ. ಇನ್ನಷ್ಟು ಬೆಂಚುಗಳನ್ನು ಅಳವಡಿಸುವತ್ತ ವಿಶ್ವವಿದ್ಯಾಲಯ ಗಮನ ಹರಿಸಬೇಕು’ ಎಂದು ನಗರದ ಸರಸ್ವತಿಪುರಂನ ವೆಂಕಟೇಶ್, ಟಿ.ಕೆ.ಬಡಾವಣೆಯ ಇಂದುಶ್ರೀ ಆಗ್ರಹಿಸಿದರು.
ನೀರು ಕೊಡಿ ಪ್ಲೀಸ್: ಕುಕ್ಕರಹಳ್ಳಿ ಮುಖ್ಯ ದ್ವಾರದ ಬಳಿ ಇರುವ ಹಾಗೂ ಸಿಗ್ನಲ್ ಬಳಿ ದ್ವಾರದ ಬಳಿ ಅಳವಡಿಸಿದ್ದ ನೀರಿನ ಕಟ್ಟೆಗಳೇ ಬಾಯಾರಿ ನಿಂತಿವೆ. ಏಕೆಂದರೆ ಅಲ್ಲಿ ನೀರು ಪೂರೈಕೆಯೇ ಇಲ್ಲ. ಹೀಗಾಗಿ ದೂಳು ಆವರಿಸಿದೆ.
‘ಮೃಗಾಲಯದಲ್ಲಿರುವಂತೆ, ಕೆರೆಯ ಒಂದೆರಡು ಮೂಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅಗ್ರಹಾರದ ಅರವಿಂದ್.
‘ಕೆರೆ ಪ್ರವೇಶಿಸುವ ಯಾವುದೇ ದ್ವಾರದಲ್ಲಾದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲು ವಿಶ್ವವಿದ್ಯಾಲಯಕ್ಕೆ ಹೆಚ್ಚೇನು ಹಣ ಖರ್ಚಾಗದು. ಹಣದ ಕೊರತೆ ಇದೆ ಎಂದಾದರೆ, ದಾನಿಗಳು ಅಥವಾ ಕಂಪೆನಿಗಳ ಸಿಎಸ್‌ಆರ್ ಅನುದಾನ ಪಡೆದು ಅಳವಡಿಸಲಿ’ ಎಂದು ಹಿರಿಯ ನಾಗರಿಕರಾದ ಸೆಬಾಸ್ಟಿಯನ್, ರುದ್ರಾಣಿ ಹೇಳಿದರು.
ಕುಡಿಯುವ ನೀರಿನ ಮತ್ತು ಬೆಂಚ್‌ಗಳ ಅಗತ್ಯವನ್ನು ವಿಶ್ವವಿದ್ಯಾಲಯ ಮನಗಂಡು ಕ್ರಮ ಕೈಗೊಳ್ಳಬೇಕು ರಘು ಮಂಡಿಮೊಹಲ್ಲಾ ನಿವಾಸಿ
ಕುಳಿತುಕೊಳ್ಳಲು ಉತ್ತಮ ಸ್ಥಳವಿದ್ದರೆ ಕೆರೆ ಆವರಣ ಹೆಚ್ಚು ಜನ ಸ್ನೇಹಿಯಾಗುತ್ತದೆ. ಮಂಜುಳಾ ಯಾದವಗಿರಿ ನಿವಾಸಿ
ಬೆಂಚ್‌ನಲ್ಲೇ ವ್ಯಾಯಾಮ: ಆರೋಪ ‘ಬೆಂಚ್ ಬಳಸಿ ಕೆಲವರು ವ್ಯಾಯಾಮ ಮಾಡುವುದರಿಂದ ಮುರಿದಿವೆ’ ಎಂದು ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಎಇಇ ಶಿವಲಿಂಗಪ್ರಸಾದ್ ಪ್ರತಿಪಾದಿಸಿದರು. ‘ಶೌಚಾಲಯಗಳಲ್ಲಿ ಬಳಸಲ್ಪಡುತ್ತಿರುವುದು ಕೆರೆ ನೀರು. ಬೇರೆ ಪೈಪ್‌ಲೈನ್ ಕೂಡ ಇಲ್ಲ. ಪಾಲಿಕೆಯಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ. ಫಲಕ ಅಳವಡಿಸುವತ್ತಾ ಮುರಿದ ಬೆಂಚ್‌ಗಳ ವಿಲೇವಾರಿಗೆ ಕ್ರಮ ಕೈಗೊಳ್ಳತ್ತೇವೆ. ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.