ಮೈಸೂರು: ಶಿಳ್ಳೆಕ್ಯಾತರ ಮಂಜುನಾಥ್, ಹೆಳವರ ಸೊಲ್ಲಿನ ಮಲ್ಲಯ್ಯ ಸೇರಿದಂತೆ ಅಲೆಮಾರಿ ಸಮುದಾಯದ ಕಲಾವಿದರ ಅಂತರಂಗಕ್ಕೆ ಪ್ರೇಕ್ಷಕರು ಕಿವಿಯಾದರೆ, ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಹಾರಿಸಿದ ನಗೆ ಚಟಾಕಿಗಳಿಗೆ ಮನಸಾರೆ ನಕ್ಕರು.
ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ 8ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ಕ್ಕೆ ಬದರು ದಿವ್ಯ ಭೂಷಣ್ ಮತ್ತು ತಂಡದ ಭರತನಾಟ್ಯ ಪ್ರದರ್ಶನದೊಂದಿಗೆ ಭಾನುವಾರ ವೈಭವದ ತೆರೆಬಿತ್ತು. ದಿನವಿಡೀ ಎರಡು ವೇದಿಕೆಗಳಲ್ಲಿ ನಡೆದ ಸಾಹಿತ್ಯ, ಸಂಗೀತ, ರಾಜಕೀಯ, ರಂಗಭೂಮಿ, ಪ್ರಕಾಶನ, ಪರಿಸರದ ಕುರಿತ ಚರ್ಚೆಗಳ ಹೂರಣದ ಸವಿ ಪಾಲ್ಗೊಂಡವರದಾಯಿತು.
ಎಲ್ಲರಿಗೂ ಭಾರತೀಯ ದೃಷ್ಟಿ: ‘ಕಳೆದ 10 ವರ್ಷದಲ್ಲಿ ಭಾರತವನ್ನು ನೋಡುವ ಬಗೆಯೇ ಬದಲಾಗಿದೆ. ವಿಜ್ಞಾನ, ಗಣಿತ, ಆಡಳಿತ, ಕೃಷಿ, ಇತಿಹಾಸ, ಆಹಾರ ಸೇರಿದಂತೆ ಎಲ್ಲವನ್ನೂ ಭಾರತೀಯ ದೃಷ್ಟಿಕೋನದಲ್ಲಿ ನೋಡುವಂತಾಗಿದೆ’ ಎಂದು ಲೇಖಕ ಆರ್.ಬಾಲಸುಬ್ರಹ್ಮಣ್ಯಂ ಪ್ರತಿಪಾದಿಸಿದರು.
ತಮ್ಮ ‘ಪವರ್ ವಿದಿನ್ ದ ಲೀಡರ್ ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ’ ಕೃತಿ ಬಿಡುಗಡೆ ನಂತರ ನಡೆದ ಸಂವಾದದಲ್ಲಿ, ‘ಭಕ್ತನಾಗಿಯೋ, ವಿಮರ್ಶಕನಾಗಿಯೋ ಈ ಕೃತಿಯನ್ನು ಬರೆದಿಲ್ಲ. ಮೋದಿ ನಾಯಕತ್ವ ಗುಣದ ಬಗ್ಗೆ ಸಂಶೋಧನೆಯನ್ನು ನಡೆಸಿರುವೆ. 6–7 ವರ್ಷ ಅವರೊಂದಿಗೆ ಕೆಲಸ ಮಾಡುವಾಗ ನಡೆಸಿದ ಹಲವು ಚರ್ಚೆಗಳು ಪುಸ್ತಕವಾಗಿ ಮೂಡಿಬಂದಿವೆ’ ಎಂದರು.
‘ನಿಮ್ಮಂತೆ ಹಾರ್ವರ್ಡ್‌ಗೆ ಹೋಗಿ ಎಂಬಿಎ ಮಾಡಿಲ್ಲ. ನಾನು ತಿಳಿದುಕೊಂಡಿದ್ದೆಲ್ಲ ವೇದ– ಉಪನಿಷತ್‌ನಿಂದಷ್ಟೇ ಎಂದು ಮೋದಿ ಹೇಳಿದ್ದರು. ಅಕಾಡೆಮಿಕ್ ಪುಸ್ತಕದಂತೆಯೇ ಕೃತಿ ರಚಿಸಿರುವೆ. ಇದನ್ನು 35ಕ್ಕೂ ಹೆಚ್ಚು ಬಾರಿ ಪರಿಷ್ಕರಿಸುವೆ. ಭಾರತೀಯ ನಾಯಕತ್ವ ಜಗತ್ತಿಗೆ ಈ ಪುಸ್ತಕದಿಂದ ಗೊತ್ತಾಗಲಿದೆ’ ಎಂದು ಹೇಳಿದರು.
ಕೃತಿಯು ಪ್ರಕಟವಾಗುವ ಮುನ್ನ ಬಹು ಓದು ಎಷ್ಟು ಮುಖ್ಯವೆನ್ನುತ್ತೇವೆಯೋ ಅಷ್ಟೇ ಮಹತ್ವವನ್ನು ಅನುವಾದದ ಓದಿಗೂ ನೀಡಬೇಕು. ಲೇಖಕನ ಜಗತ್ತನ್ನು ಅನುವಾದಕ ಸಂಪೂರ್ಣ ಪ್ರವೇಶಿಸಬೇಕು.ವಿವೇಕ ಶಾನಭಾಗ, ಲೇಖಕ
‘ಬೆಳ್ಳಿ ಚಮಚದೊಂದಿಗೆ ಹುಟ್ಟಿದವರು ಇನ್ನೂ ಪ್ರಧಾನಿಯಾಗಲು ಸಾಹಸ ಪಡುತ್ತಿದ್ದಾರೆ. ಆದರೆ, ಟೀ ಮಾರುವ ಹುಡುಗ ಪ್ರಧಾನಿಯಾಗಬೇಕೆಂದರೆ ಪರಿಶ್ರಮ ಹಾಗೂ ನಾಯಕತ್ವದ ಗುಣ ಮುಖ್ಯ. ಭಾರತೀಯ ನಾಯಕತ್ವವು ಮೋದಿ ಅವರಿಂದ ಜಗತ್ತಿಗೆ ಗೊತ್ತಾಗಿದೆ. ಅವರಲ್ಲಿ ಗಾಂಧಿ–ಪಟೇಲ್– ವಾಜಪೇಯಿ ಅವರ ನಾಯಕತ್ವ ಗುಣಗಳ ಮಿಳಿತವಿದೆ’ ಎಂದು ಅಭಿಪ್ರಾಯಪಟ್ಟರು.
ಕೃತಿ ಬಿಡುಗಡೆ ಮಾಡಿದ ಇತಿಹಾಸಕಾರ ವಿಕ್ರಂ ಸಂಪತ್, ‘ಕೃತಿಯು ಭಾರತೀಯ ನಾಯಕತ್ವದ ದಾಖಲೆಯಾಗಿದ್ದು, ಮುಖಪುಟ ನೋಡಿ ಮೋದಿ ಬಗ್ಗೆಯೇ ಇದೆಯೆಂದುಕೊಳ್ಳಬಾರದು. ನಾಲ್ವಡಿ, ಗಾಂಧಿಯವರು ಭಾರತೀಯ ನಾಯಕತ್ವಕ್ಕೆ ಉದಾಹರಣೆಯಾಗಿದ್ದಾರೆ. ಇತರ ದೇಶಗಳು ಭಾರತವನ್ನು ನೋಡುವ ದೃಷ್ಟಿಕೋನವು ಮೋದಿ ನಾಯಕತ್ವದಿಂದ ಬದಲಾಗಿದೆ’ ಎಂದರು.
ದೀಪ್ತಿ ನವರತ್ನ ಸಂವಾದ ನಡೆಸಿಕೊಟ್ಟರು. ಉದ್ಯಮಿ ಸುಧನ್ವ ಧನಂಜಯ ಹಾಜರಿದ್ದರು.
‘ಪ್ರತಿ ಬರಹವೂ ರಾಜಕೀಯವೇ’
‘ಕಥೆಯನ್ನು ಕಟ್ಟಿಕೊಡುವಾಗ ತನ್ನ ಸುತ್ತಲೂ ನಡೆಯುತ್ತಿರುವ ಘಟನೆಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗದು. ಹೀಗಾಗಿಯೇ ಕಲಾವಿದ ಲೇಖಕನ ಅಭಿವ್ಯಕ್ತಿಯು ರಾಜಕೀಯ ನಿಲುವೇ ಆಗಿರುತ್ತದೆ’ ಎಂದು ಲೇಖಕ ವಿವೇಕ ಶಾನಭಾಗ ಪ್ರತಿಪಾದಿಸಿದರು.
‘ಸಕೀನಾಳ ಮುತ್ತು’ ಕೃತಿಯ ಇಂಗ್ಲಿಷ್ ಅನುವಾದದ ಕುರಿತ ಸಂವಾದದಲ್ಲಿ ಮಾತನಾಡಿ ‘ರಾಜಕೀಯವೆಂದರೆ ಅದು ಪಕ್ಷ ರಾಜಕಾರಣವಲ್ಲ. ಅದು ನಿತ್ಯ ಬದುಕಿಗೆ ಸಂಬಂಧಿಸಿದ ಆಳವಾದ ರಾಜಕಾರಣ’ ಎಂದರು.
‘ದೇಶದ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು. ಕೃತಿಯ ಸೃಷ್ಟಿಯಲ್ಲಿ ಲೇಖಕನ ನಿಲುವುಗಳು ಧ್ವನಿಸುತ್ತವೆ. ಕೃತಿ ಎಂದಿಗೂ ಪರೋಕ್ಷ. ಅದು ನೇರವಾಗಿ ಮಾತನಾಡದೇ ಪರೋಕ್ಷವಾಗಿ ವಸ್ತುಸ್ಥಿತಿಯನ್ನು ಧ್ವನಿಸುತ್ತದೆ. ರಾಜಕೀಯವೆಂದರೆ ಆಗದೆಂದು ಲೇಖಕ ಪಲಾಯನವಾದ ಮಾಡಲಾಗದು’ ಎಂದು ಉದಾಹರಿಸಿದರು.
‘ಕೃತಿಯ ವಸ್ತು ಹಾಗೂ ಲೇಖಕನ ಜಗತ್ತನ್ನು ಅರ್ಥಮಾಡಿಕೊಂಡೇ ಭಾಷಾಂತರ ಮಾಡಬೇಕು. ಕಥಾಪಾತ್ರದ ಧ್ವನಿಯೇನು? ಲೇಖಕ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾನೆ? ಇದೇ ಪದವೇಕೆ ಬಳಸಿದ್ದಾನೆ ಎಂಬ ಹುಡುಕಾಟ ಅನುವಾದಕನಿಗೆ ಬೇಕಾಗುತ್ತದೆ’ ಎಂದರು. ಸೀತಾ ಭಾಸ್ಕರ್ ಸಂವಾದ ನಡೆಸಿಕೊಟ್ಟರು. ಅನುವಾದಕ ಶ್ರೀನಾಥ್ ಪೆರೂರ್ ಜಯಶ್ರೀ ಜಗನ್ನಾಥ ಹಾಜರಿದ್ದರು.
‘ಖಿನ್ನತೆಯಿಂದ ಬಳಲುತ್ತಿರುವ ಪುರುಷರು’
‘ಮಹಿಳೆಯರಷ್ಟೇ ಪುರುಷರೂ ಖಿನ್ನತೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಅವರಿಬ್ಬರೂ ಸಮಾನರೆಂದೇ ನೋಡಬೇಕು’ ಎಂದು ಲೇಖಕಿ ಸುಚಿತಾ ಸಂಜಯ್ ಪ್ರತಿಪಾದಿಸಿದರು.
‘ದ ಅಲ್ಕೆಮಿ ಆಫ್ ಕ್ರಾಸಿಂಗ್ ಓವರ್’ ಸಂವಾದದಲ್ಲಿ ಮಾತನಾಡಿ ‘ಹುಡುಗನೊಬ್ಬ ಅಳುತ್ತಿದ್ದರೆ ಸಾಮಾನ್ಯವಾಗಿ ಎಲ್ಲರೂ ಹುಡುಗಿಯಂತೆ ಅಳಬೇಡವೆನ್ನುತ್ತಾರೆ. ಈ ವೇಳೆಯಲ್ಲಿ ಭಾವನಾತ್ಮಕವಾಗಿ ಪುರುಷನಲ್ಲಿರುವ ಹೆಂಗರಳನ್ನು ಹೊಸಕಿ ಹಾಕುವ ಕೆಲಸ ನಡೆಯುತ್ತದೆ. ಹೀಗಾಗಿ ಎಷ್ಟೇ ಕಷ್ಟವಿದ್ದರೂ ಪುರುಷರು ತೋರ್ಗೊಡುವುದಿಲ್ಲ’ ಎಂದರು.
‘ಪ್ರೀತಿಪಾತ್ರರಿಗೆ ಜೀವನಕ್ಕೆ ಕುಟುಂಬಕ್ಕಾಗಿ ಮಾಡಿದ ತ್ಯಾಗಗಳನ್ನು ಪುರುಷರು ಹೇಳಿಕೊಳ್ಳುವುದಿಲ್ಲ. ಮನೆ ಸಾಲ ಕಾರು ಸಾಲ ಇಎಂಐಗಳು ಕುಟುಂಬದ ಆರೋಗ್ಯ ಕಾಪಾಡುವುದು ಸೇರಿದಂತೆ ಜವಾಬ್ದಾರಿಯ ಮೂಟೆ ಹೊತ್ತಿರುತ್ತಾರೆ’ ಎಂದು ಹೇಳಿದರು.
‘ಥೆರಪಿಗೆ ಬಂದ ವ್ಯಕ್ತಿಯೊಬ್ಬರು ನನ್ನ ಬಳಿ ಯಾವುದೇ ಉಳಿತಾಯವಿಲ್ಲ. ಸಂಸಾರ ಹಾಳಾಗಿದೆ. ಗಾಯಗೊಂಡು ಆರೋಗ್ಯ ಕೆಟ್ಟಿದೆ. ಕಚೇರಿಯಲ್ಲಿ ಕೆಲಸದ ಬಡ್ತಿ ಸಿಕ್ಕಿಲ್ಲವೆಂದು ಖಿನ್ನರಾಗಿದ್ದರು. ಅವರಿಗೆ ದೈಹಿಕವಾಗಿ ಆದ ಗಾಯ ಮಾಯ್ದಿತ್ತು. ಮಾನಸಿಕ ಗಾಯ ವಾಸಿಯಾಗಿರಲಿಲ್ಲ’ ಎಂದು ಉದಾಹರಿಸಿದರು.
‘ಮಾನಸಿಕ ಗಾಯವನ್ನು ಮಾಯಿಸಲು ಪ್ರೀತಿಪಾತ್ರರು ಶ್ರಮಿಸಬೇಕು’ ಎಂದರು. ಅದಕ್ಕೆ ದನಿಗೂಡಿಸಿದ ಲೇಖಕಿ ದೀಪಾ ಕಣ್ಣನ್ ‘ಭಯ ಆತಂಕ ಕೋಪ ಸಾಮಾನ್ಯ ಸಮಸ್ಯೆಯಾಗಿದೆ. ಅದಕ್ಕೆ ಚಿಕಿತ್ಸೆ ಮುಖ್ಯ. ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಟಮಿನ್ ಏರುಪೇರಿನ ಬಗ್ಗೆ ಗಮನಹರಿಸಬೇಕು’ ಎಂದರು. ಪ್ರೀತಿ ನಾಗರಾಜ್ ಸಂವಾದ ನಡೆಸಿಕೊಟ್ಟರು. ವನಿತಾ ಅಶೋಕ್ ಯಾಸ್ಮಿನ್ ಸೇಠ್ ಮಿಹೊ ಸಕಾತಾ ಮಲ್ಹಾ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.