ಮೈಸೂರು: ‘ನಗರದಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ಸ್ಥಾಪಿಸಿ, ವರ್ಷವಿಡೀ ಚಿತ್ರಕಲಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು’ ಎಂಬ ಹಕ್ಕೊತ್ತಾಯ ಚಿತ್ರಕಲಾವಿದರಿಂದ ಕೇಳಿಬಂತು.
ನಗರದ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಆಯೋಜಿಸಿದ್ದ ಡಾ.ಜಮುನಾರಾಣಿ ವಿ. ಮಿರ್ಲೆ ಅವರ ರಚನೆಯ ‘ರಾಗದೃಶ್ಯ ಕಲಾಕೃತಿ’ಗಳ ಪ್ರದರ್ಶನದಲ್ಲಿ ಈ ಬೇಡಿಕೆಯನ್ನು ಮುಂದಿಟ್ಟರು.
ಮೈಸೂರು ಆರ್ಟ್ ಗ್ಯಾಲರಿಯ ಸಂಸ್ಥಾಪಕ ಎಲ್.ಶಿವಲಿಂಗಪ್ಪ ಮಾತನಾಡಿ, ‘ಈ ಗ್ಯಾಲರಿಯಲ್ಲಿ 10 ವರ್ಷಗಳಿಂದ ಚಿತ್ರಕಲಾಕೃತಿಗಳ ಉಚಿತ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದ್ದೇನೆ. ಆದರೆ, ದೊಡ್ಡ ಪ್ರಮಾಣದಲ್ಲಿ ಚಿತ್ರಕಲಾ ಪ್ರದರ್ಶನ ಮಾಡಲು ಸೂಕ್ತ ಗ್ಯಾಲರಿ ಇಲ್ಲ. ಸುಚಿತ್ರ ಆರ್ಟ್ ಗ್ಯಾಲರಿ ಇದ್ದರೂ ಅದು ವ್ಯವಸ್ಥಿತವಾಗಿ ಇಲ್ಲ. ಗೂಡಿನಂತಿರುವ ಈ ಗ್ಯಾಲರಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ದುಬಾರಿ ಶುಲ್ಕದಿಂದಾಗಿ ಕಲಾವಿದರು ಅತ್ತ ಮುಖ ಮಾಡುವುದಿಲ್ಲ. ಹೀಗಾಗಿ, ವೆಂಕಟಪ್ಪ ಆರ್ಟ್ ಗ್ಯಾಲರಿ ಮಾದರಿಯಲ್ಲಿ ಗ್ಯಾಲರಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
‘ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ವಿಶಾಲ ಜಾಗವಿದ್ದು, ಚಿತ್ರಕಲೆ, ಶಿಲ್ಪಕಲೆ, ಕರಕುಶಲ ಕಲೆಗಳ ಪ್ರದರ್ಶನಕ್ಕೆ ಕಾಯಂ ಮಳಿಗೆ ಸ್ಥಾಪಿಸಬೇಕು. ಸಂಗೀತ ವಿದ್ವಾಂಸರಿಗೆ ನೀಡುವ ಆಸ್ಥಾನ ವಿದ್ವಾನ್ ಪ್ರಶಸ್ತಿ ರೀತಿಯಲ್ಲಿ ಚಿತ್ರಕಲೆ, ಶಿಲ್ಪಕಲಾವಿದರಿಗೂ ನೀಡಬೇಕು’ ಎಂದು ಒತ್ತಾಯಿಸಿದರು.
ವಿವೇಕಾನಂದನಗರದ ಭರಣಿ ಆರ್ಟ್ ಗ್ಯಾಲರಿ ಸಂಸ್ಥಾಪಕ ಎನ್.ಬಿ.ಕಾವೇರಪ್ಪ ಮಾತನಾಡಿ, ‘1994ರಲ್ಲಿ ಮನೆಯಲ್ಲೇ ಆರ್ಟ್ ಗ್ಯಾಲರಿ ನಿರ್ಮಿಸಿ ಪ್ರದರ್ಶನಕ್ಕೆ ಉಚಿತವಾಗಿ ಅವಕಾಶ ನೀಡುತ್ತಿದ್ದೇನೆ. ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಸರ್ಕಾರದಿಂದಲೇ ಸುಸಜ್ಜಿತ ಗ್ಯಾಲರಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ ಮಾತನಾಡಿ, ‘ವರ್ಷದ 365 ದಿನಗಳೂ ವಸ್ತುಪ್ರದರ್ಶನ ಏರ್ಪಡಿಸುವುದು, ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅನೇಕ ಯೋಜನೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನವೆಂಬರ್ ಆರಂಭದಿಂದ ವಸ್ತುಪ್ರದರ್ಶನ ನಡೆಯಲಿದ್ದು, ಚಿತ್ರಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು’ ಎಂದರು.
‘ರಾಗದೃಶ್ಯ’ ಕಲಾಕೃತಿಗಳ ಕುರಿತು ಮಾತನಾಡಿದ ಗಾಯಕ ಮಾನಸ ನಯನ, ‘ಎಲ್ಲ ಕಲೆಗಳು ಗಾಯನದ ಮೇಲೆ ನಿಂತಿವೆ. ಚಿತ್ರಕಲೆಗೂ ಗಾಯನಕ್ಕೂ ಸಂಬಂಧವಿದೆ. ಜಮುನಾರಾಣಿ ಮಿರ್ಲೆ ಅವರು ರಾಗದ ಆತ್ಮವನ್ನು ಆರಾಧಿಸಿ ಬರೆದಂತೆ ಈ ಕಲಾಕೃತಿಗಳು ಭಾಸವಾಗುತ್ತವೆ’ ಎಂದು ಹೇಳಿದರು.
ಗಮನ ಸೆಳೆದ ‘ರಾಗದೃಶ್ಯ’ ಕಲಾಕೃತಿಗಳು
ಜಮುನಾರಾಣಿ ಮಿರ್ಲೆ ಅವರು ಸಂಗೀತದ ರಾಗಗಳಿಗೆ ತಕ್ಕಂತೆ 33 ಕಲಾಕೃತಿಗಳನ್ನು ರಚಿಸಿದ್ದು, ಕಲಾಸಕ್ತರನ್ನು ಸೆಳೆಯುತ್ತಿವೆ. ಹಂಸಧ್ವನಿ, ಬೌಲಿ, ಉದಯ, ಸಾವೇರಿ, ವಸಂತ, ಯದುಕುಲ ಕಾಂಭೋದಿ, ತಿಲಂಗ್, ಮಲಯ ಮಾರುತ, ರೇವತಿ, ಭೈರವಿ ಹೀಗೆ ಅನೇಕ ರಾಗಗಳನ್ನು ಧ್ವನಿಸುವ ಕಲಾಕೃತಿಗಳು ಇಲ್ಲಿವೆ.
ರಾಗಮಾಲಾ ಚಿತ್ರಗಳನ್ನು 16ನೇ ಶತಮಾನದಿಂದಲೂ ಕಾಣಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ್ ‘ಶ್ರೀತತ್ವನಿಧಿ’ ಕೃತಿಯಲ್ಲಿ ರಾಗಮಾಲಾ ಬಗ್ಗೆ ವಿವರಿಸಿದ್ದಾರೆ.
– ರಮಾ ಬೆಣ್ಣೂರ್, ಸಂಗೀತ ಮತ್ತು ನೃತ್ಯ ಕಲಾ ವಿಮರ್ಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.