ADVERTISEMENT

5,039 ಶಿಫಾರಸಿನಲ್ಲಿ 2,800 ಜಾರಿ

ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಜಯಭಾಸ್ಕರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 13:57 IST
Last Updated 14 ನವೆಂಬರ್ 2024, 13:57 IST
<div class="paragraphs"><p>ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಿ.ಎಸ್. ರವಿಕುಮಾರ್, ಪ್ರೊ.ಕೃಷ್ಣ ಹೊಂಬಳ, ಟಿ.ಎಂ. ವಿಜಯಭಾಸ್ಕರ್‌ ಹಾಗೂ ಜೆ.ಸೋಮಶೇಖರ್‌ ಪಾಲ್ಗೊಂಡಿದ್ದರು</p></div>

ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಿ.ಎಸ್. ರವಿಕುಮಾರ್, ಪ್ರೊ.ಕೃಷ್ಣ ಹೊಂಬಳ, ಟಿ.ಎಂ. ವಿಜಯಭಾಸ್ಕರ್‌ ಹಾಗೂ ಜೆ.ಸೋಮಶೇಖರ್‌ ಪಾಲ್ಗೊಂಡಿದ್ದರು

   

ಪ್ರಜಾವಾಣಿ ಚಿತ್ರ

ಮೈಸೂರು: ‘ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದಿಂದ 2021ರ ಜುಲೈನಿಂದ 2024ರ ಫೆಬ್ರುವರಿವರೆಗೆ ಒಟ್ಟು ಏಳು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಒಟ್ಟು 5,039 ಶಿಫಾರಸುಗಳನ್ನು ಮಾಡಲಾಗಿದ್ದು, 2,800 ಜಾರಿಯಾಗಿವೆ. ಉಳಿದವು ಪರಿಶೀಲನೆ ಹಂತದಲ್ಲಿವೆ’ ಎಂದು ಆಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗಗಳು ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐ‍ಪಿಎ) ಮೈಸೂರು ಸ್ಥಳೀಯ ಶಾಖೆಯ ಸಹಯೋಗದಲ್ಲಿ ಇಲ್ಲಿನ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳು’ ಕುರಿತು ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ಮೊದಲನೇ ಆಯೋಗವನ್ನು 2000ದಲ್ಲಿ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಆಯೋಗವು 2001ರಲ್ಲಿ ವರದಿ ಸಲ್ಲಿಸಿ 729 ಶಿಫಾರಸು ಮಾಡಿತ್ತು. ಇದರಲ್ಲಿ 389 ಜಾರಿಯಾಗಿವೆ. 386 ಪರಿಶೀಲನೆ ಹಂತದಲ್ಲಿವೆ’ ಎಂದು ಹೇಳಿದರು.

ಮಾಹಿತಿ ಸಂಗ್ರಹಿಸಿ: ‘2021ರಲ್ಲಿ 2ನೇ ಆಯೋಗ ರಚನೆಯಾಯಿತು.‌ ಹಿಂದಿನ ವರದಿಗಳು ಕೇಂದ್ರ ಕಚೇರಿ ಮಟ್ಟದ ಆಡಳಿತದ ಬಗ್ಗೆಯೇ ಗಮನಕೊಟ್ಟಿದ್ದವು.‌ ನಾನು ಜನರಿಗೆ ಅನುಕೂಲ ‌ಮಾಡಿಕೊಡುವುದನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ‌ನಡೆಸಿ ಶಿಫಾರಸು ‌ಮಾಡಿದ್ದೇನೆ. ಸಾರ್ವಜನಿಕ ಆಡಳಿತದಲ್ಲಿ ಕೇಂದ್ರ ಕಚೇರಿಯಲ್ಲಿ ಇರುವವರಿಗೆ ಕಾಣಿಸುವುದು ಶೇ 4ರಷ್ಟು ಮಾತ್ರ. ಉಳಿದವು ಕಾಣಿಸುವುದು ತಳಮಟ್ಟದ ಸಿಬ್ಬಂದಿಗೆ ಮಾತ್ರವೇ. ಅವರೆಲ್ಲರಿಂದಲೂ ಮಾಹಿತಿ ಸಂಗ್ರಹಿಸಲಾಯಿತು. ಜನರನ್ನು ಖುದ್ದು ಭೇಟಿಯಾಗಿ ಸಮಸ್ಯೆ ಆಲಿಸಿದ್ದೆ. ಅವರೆಲ್ಲರ ಸಲಹೆಗಳನ್ನು ಆಧರಿಸಿ ಶಿಫಾರಸು ಮಾಡಿದ್ದೇನೆ’ ಎಂದು ವರದಿ‌‌ ಸಿದ್ಧಪಡಿಸಿದ ಪ್ರಕ್ರಿಯೆಯನ್ನು ಹಂಚಿಕೊಂಡರು.

‘ಅಧಿಕಾರ‌ ವಿಕೇಂದ್ರೀಕರಣದಿಂದ ಮಾತ್ರ ಆಡಳಿತದಲ್ಲಿ ಸುಧಾರಣೆ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಗ್ರಾಮ ಪಂಚಾಯಿತಿಯಲ್ಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮದುವೆ ನೋಂದಾಯಿಸಬೇಕೆಂದು ಮಾಡಲಾಗಿದ್ದ ಶಿಫಾರಸು ಅನುಷ್ಠಾನಕ್ಕೆ ಬಂದಿದೆ. ಇದರಿಂದ ಉಪ‌ ನೋಂದಣಾಧಿಕಾರಿ ಕಚೇರಿಗೆ ಹೋಗುವುದು ತಪ್ಪಿದೆ’ ಎಂದು ತಿಳಿಸಿದರು.

ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೃಷ್ಣ ಹೊಂಬಳ ಅಧ್ಯಕ್ಷತೆ ವಹಿಸಿದ್ದರು. ಐಐ‍ಪಿಎ ಮೈಸೂರು ಸ್ಥಳೀಯ ಶಾಖೆ ಅಧ್ಯಕ್ಷ ಜೆ.ಸೋಮಶೇಖರ್‌ ಹಾಗೂ ಕಾರ್ಯದರ್ಶಿ ಜೆ.ಸೋಮಶೇಖರ್‌ ಪಾಲ್ಗೊಂಡಿದ್ದರು.

ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಕುರಿತು ವಿಶ್ವವಿದ್ಯಾಲಯದ ಮಟ್ಟದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಮೊದಲು ಆಯೋಜಿಸಿದ್ದ ಶ್ರೇಯ ಮೈಸೂರು ವಿವಿಯದು.
–ಜೆ.ಸೋಮಶೇಖರ್‌, ಕಾರ್ಯದರ್ಶಿ ಐಐ‍ಪಿಎ ಮೈಸೂರು ಸ್ಥಳೀಯ ಶಾಖೆ

ಆಯೋಗದ ಪ್ರಮುಖ ಶಿಫಾರಸುಗಳೇನು?

ಉದ್ಯೋಗ ಸೃಷ್ಟಿಗೆ ಆಯಾ ಜಿಲ್ಲಾಧಿಕಾರಿಗೆ ಜವಾಬ್ದಾರಿ ಕೊಡಬೇಕು.  ಸುಳ್ಳು ದಾಖಲೆಗಳನ್ನು ಆಧರಿಸಿ ಮಾಡಲಾದ ಆಸ್ತಿ ನೋಂದಣಿ ರದ್ದುಪಡಿಸಲು ಉಪನೋಂದಣಾಧಿಕಾರಿಗೆ ಅಧಿಕಾರ ಕೊಡಲು‌ ಶಿಫಾರಸು ‌ಮಾಡಲಾಗಿತ್ತು. ಅದು ಜಾರಿಯಾಗಿದೆ. ಕಾಡಾ ಕಚೇರಿಗಳನ್ನು ನೀರಾವರಿ ನಿಗಮದೊಂದಿಗೆ ವಿಲೀನ‌ಕ್ಕೆ ಸಲಹೆ ನೀಡಲಾಗಿದ್ದು ಪರಿಶೀಲನೆ ಹಂತದಲ್ಲಿದೆ.

ಗ್ರಾಮ ಪಂಚಾಯಿತಿ ಹಾಗೂ ಪಾಲಿಕೆ ಮಟ್ಟದಲ್ಲಿ ಪರಂಪರೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ರಚಿಸಿ ಅನುದಾನ ಒದಗಿಸಬೇಕು. ತಾಲ್ಲೂಕುಗಳಲ್ಲಿನ ಜನಸಂಖ್ಯೆ ಹಾಗೂ ಕ್ಷೇತ್ರದ ಆಧಾರದ ಮೇಲೆ‌ ಸಿಬ್ಬಂದಿಯನ್ನು ‌ಮರು ಹಂಚಿಕೆ ಮಾಡಬೇಕು. ಕರ್ನಾಟಕ ಮುನ್ಸಿಪಲ್ ಕಾಯ್ದೆಯಡಿ ಶುಲ್ಕ ಹಾಗೂ ದಂಡ ಪರಿಷ್ಕರಿಸಬೇಕು. ಅನಧಿಕೃತ ನಿವೇಶನ ಹಾಗೂ ಕಟ್ಟಡಗಳ ಮೇಲೆ‌ ದಪ್ಪಟ್ಟು ತೆರಿಗೆ ವಿಧಿಸಬೇಕು.‌ ಹತ್ತು ಹಾಗೂ 12ನೇ ತರಗತಿ ಪರೀಕ್ಷೆಯ ಪದ್ಧತಿಯನ್ನು ಬದಲಿಸಬೇಕು.

ರಾಜ್ಯದ ಒಟ್ಟು 191 ಲಕ್ಷ ಹೆಕ್ಟೇರ್‌ನಲ್ಲಿ 22 ಲಕ್ಷ ಹೆಕ್ಟೇರ್ ‌ಭೂಮಿ ಬಂಜರು ಅಥವಾ ಬೀಳು ಬಿಡಲಾಗಿದೆ. ಅದರಿಂದ ದೊಡ್ಡ ಆರ್ಥಿಕ ನಷ್ಟವಾಗುತ್ತಿದೆ.‌ ಅದನ್ನು ಗುತ್ತಿಗೆಗೆ ಕೊಡಬಹುದು. 100 ಮೀಟರ್‌ ಅಂತರದೊಳಗಿನ ಸರ್ಕಾರಿ ಶಾಲೆಗಳ ವಿಲೀನ.

ಸಚಿವರಿಂದ ಪರಿಶೀಲನೆ

‘ಆಯೋಗದ ಈಗಿನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಶಿಫಾರಸಿನ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆಯೋಗ ಮಾಡಿರುವ ಎಲ್ಲ ಶಿಫಾರಸುಗಳನ್ನೂ ಅನುಷ್ಠಾನಕ್ಕೆ ತಂದರೆ ಆಡಳಿತ ‌ಯಂತ್ರ ಚುರುಕಾಗುತ್ತದೆ.‌ ದಕ್ಷತೆಯೂ ಹೆಚ್ಚುತ್ತದೆ. ಜನರಿಗೆ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕೆಲಸ ಆಗುತ್ತದೆ. ಎಲ್ಲ ಶಿಫಾರಸುಗಳೂ ಅನುಷ್ಠಾನಕ್ಕೆ ಬರುತ್ತವೆ ಎಂಬ ಆಶಾಭಾವ ನನ್ನದು’ ಎಂದು ವಿಜಯಭಾಸ್ಕರ್‌ ಹೇಳಿದರು.

‘ಕುಟುಂಬ ದತ್ತಾಂಶ ಹಾಗೂ‌ ಫ್ರೂಟ್ಸ್ ಐಡಿಯಲ್ಲಿ ಬಹುತೇಕರ ಮಾಹಿತಿ ಇದೆ. ಇವುಗಳನ್ನು ಆಧರಿಸಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ಒಂದೇ‌ ಜಮೀನು 2–3 ಮಂದಿಗೆ ಮಾರಾಟ ಸಾಧ್ಯವಾಗದಂತೆ ಇ-ಸ್ವತ್ತು ಕಡ್ಡಾಯಗೊಳಿಸಲಾಗಿದೆ. ಇದರಿಂದ ‌ವಂಚನೆ ತಪ್ಪಲಿದೆ. ಯಾವುದೇ ಬಿಲ್ ಪಾವತಿಯನ್ನು ಇ–ಪ್ರಕ್ಯೂರ್‌ಮೆಂಟ್ ಮೂಲಕ‌ ಬಂದರೆ ಮಾತ್ರ ಮಾಡಬೇಕು ಎನ್ನುವ ಆದೇಶ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.