ADVERTISEMENT

ಮೈಸೂರು ವಿಶ್ವವಿದ್ಯಾಲಯ: ₹ 80 ಕೋಟಿ ಕೊರತೆ ಬಜೆಟ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 13:27 IST
Last Updated 28 ಜೂನ್ 2024, 13:27 IST

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 2024–25ನೇ ಸಾಲಿನ ಅಂದಾಜು ₹ 80.35 ಕೋಟಿ ಕೊರತೆ ಬಜೆಟ್‌ಗೆ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್‌ ಭವನದಲ್ಲಿ ಶುಕ್ರವಾರ ನಡೆದ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಬಜೆಟ್‌ ಮಂಡಿಸಿದ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ‘ಸರ್ಕಾರದಿಂದ ಬರುವ ಅನುದಾನವೂ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟಾರೆ ₹ 277.39 ಕೋಟಿ ಆದಾಯ ನಿರೀಕ್ಷಿಸಿದ್ದರೆ, ಹಲವು ಕಾರ್ಯಚಟುವಟಿಕೆಗಾಗಿ ₹ 357.74 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ನಿರೀಕ್ಷಿತ ಆದಾಯಕ್ಕಿಂತ ಸಿಬ್ಬಂದಿ ವೇತನ, ಪಿಂಚಣಿ, ನಿರ್ವಹಣೆಗೆ ವೆಚ್ಚವೇ ಜಾಸ್ತಿ ಆಗುತ್ತಿದೆ. ಇದರಿಂದಾಗಿ, ವಿಶ್ವವಿದ್ಯಾಲಯವು ಕೊರತೆ ಬಜೆಟ್‌ ಎದುರಿಸುತ್ತಿದೆ’ ಎಂದು ಮಾಹಿತಿ ನೀಡಿದರು.

‘2022–23, 2023–24 ಹಾಗೂ 2024–25ನೇ ಸಾಲಿನಲ್ಲಿ ಸರ್ಕಾರದಿಂದ ಪಿಂಚಣಿ ಅನುದಾನವಾಗಿ ಕ್ರಮವಾಗಿ ₹ 56 ಕೋಟಿ, ₹ 63 ಕೋಟಿ ಮತ್ತು ₹ 70 ಕೋಟಿ ಕಡಿಮೆ ನೀಡಿದ ಕಾರಣದಿಂದಾಗಿ ಕೊರತೆ ಎದುರಾಗಿದೆ. ಆದರೂ, ಈ ಸಾಲಿನಲ್ಲಿ ಮಿತವ್ಯಯ ಸಾಧಿಸಲು ಹಾಗೂ ಅಗತ್ಯ ವೆಚ್ಚ ಹೊರತುಪಡಿಸಿ ಇತರ ವೆಚ್ಚಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

ಪಿಂಚಣಿಗೇ ಬೇಕು ₹ 120 ಕೋಟಿ:

‘ವಿಶ್ವವಿದ್ಯಾಲಯವು 109ನೇ ವರ್ಷಕ್ಕೆ ಕಾಲಿಟ್ಟಿದೆ. 182 ಪಿಂಚಣಿ/ಕುಟುಂಬ ಪಿಂಚಣಿದಾರರಿದ್ದು, ಪಿಂಚಣಿ ಸೌಲಭ್ಯಗಳನ್ನು 2024–25ನೇ ಸಾಲಿಗೆ ಪಡೆಯಲಿದ್ದಾರೆ. 2023–24ರಲ್ಲಿ 1,802 ಪಿಂಚಣಿದಾರರಿದ್ದು 2024–25ರಲ್ಲಿ ಅವರ ಸಂಖ್ಯೆ 1,852 ಆಗಲಿದೆ. ಪ್ರಸ್ತುತ ಸಾಲಿನಲ್ಲಿ 50 ಉದ್ಯೋಗಿಗಳು (20 ಬೋಧಕರು ಹಾಗೂ 30 ಬೋಧಕೇತರರು) ನಿವೃತ್ತರಾಗಲಿದ್ದಾರೆ. ಇದಕ್ಕಾಗಿಯೇ ಈ ಸಾಲಿನಲ್ಲಿ ₹ 120 ಕೋಟಿ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿವಿಯ 18 ಖಾತೆಗಳ (ಪ್ರಾಯೋಜಿತ ಕಾರ್ಯಕ್ರಮಗಳು ಮತ್ತು ಇನ್ನಿತರ ಖಾತೆಗಳು ಒಳಗೊಂಡಂತೆ) ಸ್ವೀಕೃತಿ, ಬಡ್ಡಿ ಮೊತ್ತ ಸೇರಿ ₹ 61.94 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ವೆಚ್ಚಕ್ಕಾಗಿ ₹ 47.66 ಕೋಟಿ ನಿಗದಿಪಡಿಸಲಾಗಿದೆ. ಈ ಖಾತೆಗಳ ಆದಾಯಕ್ಕಾಗಲಿ ಮತ್ತು ವೆಚ್ಚಕ್ಕಾಗಲಿ ವಿಶ್ವವಿದ್ಯಾಲಯವು ಆರ್ಥಿಕ ಹೊರೆಗೆ ಒಳಪಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.