ADVERTISEMENT

ಮೈಸೂರು ವಿಶ್ವವಿದ್ಯಾಲಯ | ವೆಬ್‌ಸೈಟ್‌ ಸ್ತಬ್ಧ: ವಿದ್ಯಾರ್ಥಿ ಕಂಗಾಲು

ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸುಗಳಿಗೆ ಅರ್ಜಿ ಸಲ್ಲಿಕೆ

ಆರ್.ಜಿತೇಂದ್ರ
Published 24 ಜುಲೈ 2024, 6:25 IST
Last Updated 24 ಜುಲೈ 2024, 6:25 IST
ಮೈಸೂರು ವಿ.ವಿ. ವೆಬ್‌ಸೈಟ್‌ನಲ್ಲಿ ಕಂಡ ‘ಎರರ್‌’ ಸಂದೇಶ
ಮೈಸೂರು ವಿ.ವಿ. ವೆಬ್‌ಸೈಟ್‌ನಲ್ಲಿ ಕಂಡ ‘ಎರರ್‌’ ಸಂದೇಶ   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಾಳೆ (ಜುಲೈ 25) ಕಡೆಯ ದಿನವಾಗಿದ್ದು, ನೋಂದಣಿಯ ವೆಬ್‌ಸೈಟ್ ತೆರೆದುಕೊಳ್ಳದೇ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ.

ವಿಶ್ವವಿದ್ಯಾಲಯವು 2024–25ನೇ ಸಾಲಿಗೆ ಪ್ರವೇಶಕ್ಕಾಗಿ ಜುಲೈ 10ರಂದು ಅರ್ಜಿ ಆಹ್ವಾನಿಸಿದ್ದು, www.uompgadmissions.com ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ ಶುಲ್ಕ ತುಂಬುವಂತೆ ಸೂಚಿಸಿದೆ. ಕಡೆಯ ದಿನಾಂಕಕ್ಕೆ ಇನ್ನು ಎರಡೇ ದಿನ ಬಾಕಿ ಉಳಿದಿದ್ದರೂ ವೆಬ್‌ಸೈಟ್ ಮಾತ್ರ ತೆರೆದುಕೊಳ್ಳುತ್ತಿಲ್ಲ. ‘404 eror' ಎನ್ನುವ ಸಂದೇಶ ಕಂಡು ವಿದ್ಯಾರ್ಥಿಗಳು ಗಾಬರಿಗೊಂಡಿದ್ದು, ವಿಶ್ವವಿದ್ಯಾಲಯದ ಕಚೇರಿಗೆ ಅಲೆಯತೊಡಗಿದ್ದಾರೆ.

ನಿಗದಿತ ವೇಳಾ‍ಪಟ್ಟಿಯಂತೆ ಜುಲೈ 25ಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡು, ಆಗಸ್ಟ್‌ 9ರಿಂದ 12ರವರೆಗೆ ಪ್ರವೇಶ ಪರೀಕ್ಷೆಗಳು ನಡೆಯಬೇಕಿದೆ. ಆ ಫಲಿತಾಂಶ ಆಧರಿಸಿ ಆ. 22ರಿಂದ ಪ್ರವೇಶಾತಿ ಪ್ರಕ್ರಿಯೆಗಳು ಆರಂಭ ಆಗಬೇಕಿದೆ. ಈ ವೇಳಾಪಟ್ಟಿ ಏರುಪೇರಾದಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.

ADVERTISEMENT

‘ಜುಲೈ 10ರಿಂದಲೂ ವೆಬ್‌ಸೈಟ್ ಮೂಲಕ ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ ನೋಂದಣಿ ಸಾಧ್ಯವಾಗುತ್ತಿಲ್ಲ. ಕ್ರಾಫರ್ಡ್‌ ಭವನಕ್ಕೂ ಹೋಗಿಬಂದಿದ್ದು, ಸದ್ಯದಲ್ಲೇ ವೆಬ್‌ಸೈಟ್ ಸರಿಹೋಗುತ್ತದೆ. ಆನ್‌ಲೈನ್‌ನಲ್ಲೇ ಅರ್ಜಿ ಹಾಕಿ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

‘ಒಮ್ಮೆ ವೇಳಾಪಟ್ಟಿ ವ್ಯತ್ಯಾಸ ಆದಲ್ಲಿ ಅದರಿಂದ ಇಡೀ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಏರು‍ಪೇರಾಗಲಿವೆ. ಇಲ್ಲಿ ಪ್ರವೇಶ ಸಿಗದೇ ಇದ್ದರೆ ಬೇರೆ ಕಡೆಗೆ ಅರ್ಜಿ ಸಲ್ಲಿಸಲು ಅವಕಾಶ ಇರದಂತೆ ಆಗಲಿದೆ. ಹೀಗಾಗಿ ವಿಶ್ವವಿದ್ಯಾಲಯವು ವೆಬ್‌ಸೈಟ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಈಗಾಗಲೇ ವಿಳಂಬ ಆಗಿರುವ ಕಾರಣ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿ ಅಧಿಕೃತ ಪ್ರಕಟಣೆ ಹೊರಡಿಸಬೇಕು’ ಎಂಬುದು ವಿದ್ಯಾರ್ಥಿಗಳ ಆಗ್ರಹ.

ತಾಂತ್ರಿಕ ಸಮಸ್ಯೆ ಕಾರಣ

ವಿದ್ಯಾರ್ಥಿಗಳಿಗೆ ಆಗಿರುವ ಸಮಸ್ಯೆ ಕುರಿತು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್‌.ಕೆ. ಲೋಕನಾಥ್‌ ಪ್ರತಿಕ್ರಿಯಿಸಿ ‘ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆ ಆಗಿದ್ದು, ಸರಿಪಡಿಸುವ ಪ್ರಯತ್ನ ನಡೆದಿದೆ. ಬುಧವಾರದಿಂದಲೇ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪದವಿ ಪರೀಕ್ಷೆಗಳು ಈಗಷ್ಟೇ ಮುಗಿದಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆ ಆಗದು. ಅವರ ಅನುಕೂಲಕ್ಕಾಗಿ ಆನ್‌ಲೈನ್‌ ನೋಂದಣಿಗೆ ದಿನಾಂಕವನ್ನು ವಿಸ್ತರಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಕೆ ಕಡ್ಡಾಯ ಮಾಡಿದ್ದು ವೆಬ್‌ಸೈಟ್‌ ಮಾತ್ರ ತೆರೆದುಕೊಳ್ಳುತ್ತಿಲ್ಲ. ವಿಶ್ವವಿದ್ಯಾಲಯವು ತಾಂತ್ರಿಕ ದೋಷ ಸರಿಪಡಿಸಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಬೇಕು,
ಗೌತಮ್‌, ವಿದ್ಯಾರ್ಥಿ
ತಾಂತ್ರಿಕ ಸಮಸ್ಯೆಯಿಂದಾಗಿ ವೆಬ್‌ಸೈಟ್ ತೆರೆದುಕೊಳ್ಳುತ್ತಿಲ್ಲ. ಇದನ್ನು ಸದ್ಯದಲ್ಲೇ ಸರಿಪಡಿಸಿ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸುತ್ತೇವೆ.
ಪ್ರೊ. ಎನ್‌.ಕೆ. ಲೋಕನಾಥ್‌, ಕುಲಪತಿ, ಮೈಸೂರು ವಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.