ADVERTISEMENT

ಪ್ರೊ.ಎನ್.ಕೆ. ಲೋಕನಾಥ್ ನೇಮಕಕ್ಕೆ ತಡೆ: ಮೈಸೂರು ವಿವಿಯಲ್ಲಿ ಮತ್ತೊಮ್ಮೆ ನಿರ್ವಾತ!

ಹಿಂದೆ ಗುರುವಿಗೆ ರಾಜ್ಯಪಾಲರು, ಈಗ ಶಿಷ್ಯನ ನೇಮಕಕ್ಕೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:59 IST
Last Updated 23 ಜೂನ್ 2023, 13:59 IST
ಮೈಸೂರು ವಿವಿ
ಮೈಸೂರು ವಿವಿ   

ಮೈಸೂರು: ಶತಮಾನದ ಇತಿಹಾಸದ ಹೆಗ್ಗಳಿಕೆಯ ಮೈಸೂರು ವಿಶ್ವವಿದ್ಯಾಲಯವು ಕುಲಪತಿ ನೇಮಕದ ವಿಷಯದಿಂದಾಗಿ ಸುದ್ದಿಯಲ್ಲಿದೆ. ಕುಲಪತಿಯಾಗಿ ಪ್ರೊ.ಎನ್.ಕೆ. ಲೋಕನಾಥ್ ಅವರನ್ನು ನೇಮಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡುವುದರೊಂದಿಗೆ ನಿರ್ವಾತ ಸೃಷ್ಟಿಯಾಗಿದೆ.

ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠವು ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚಿಸಿ ವಿಚಾರಣೆ ಮುಂದೂಡಿದೆ. ಹೀಗಾಗಿ, ಮತ್ತೊಮ್ಮೆ ವಿಶ್ವವಿದ್ಯಾಲಯವು ‘ಹಂಗಾಮಿ’ಗಳ ಆಡಳಿತ ಕಾಣುವುದೇ ಅಥವಾ ಹಿಂದಿನ ನೇಮಕ ಪ್ರಕ್ರಿಯೆ ಏನಾಗಲಿದೆ ಎಂಬ ಕುತೂಹಲ ಉಂಟಾಗಿದೆ. ಅಲ್ಲದೇ, ಚರ್ಚೆಗೂ ಗ್ರಾಸವಾಗಿದೆ. ಈ ನಡುವೆ, ಲೋಕನಾಥ್‌ ಅವರ ಮುಂದಿನ ನಡೆ ಏನಿರಲಿದೆ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದಿನ ಕಾಯಂ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತಕುಮಾರ್‌ ಅವರ ಅಧಿಕಾರದ ಅವಧಿ 2022ರ ನ.15ರಂದು ಮುಕ್ತಾಯಗೊಂಡಿತ್ತು. ಹಂಗಾಮಿ ಕುಲಪತಿಯಾಗಿ ಪ್ರೊ.ಎಚ್‌.ರಾಜಶೇಖರ್‌ ನ.18ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರ ಬಳಿಕ ಪ್ರೊ.ಮುಜಾಫರ್ ಅಸ್ಸಾದಿ ಫೆ.18ರಂದು ಅಧಿಕಾರ ಸ್ವೀಕರಿಸಿದ್ದರು. ಈ ನಡುವೆ, ವಿಶ್ವವಿದ್ಯಾಲಯದ ಯೋಜನೆ, ಉಸ್ತುವಾರಿ ಹಾಗೂ ಮೌಲ್ಯಮಾಪನ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಲೋಕನಾಥ್ ಅವರನ್ನು ಈ ಹುದ್ದೆಗೆ ಸರ್ಕಾರವು ನೇಮಿಸಿತ್ತು. ಅವರು ಅಂದೇ (ಮಾರ್ಚ್‌ 23ರಂದು) ಸಂಜೆ ಅಧಿಕಾರ ಸ್ವೀಕರಿಸಿದ್ದರು. ಕೆಲವೇ ತಿಂಗಳುಗಳ ಅಂತರದಲ್ಲಿ ಅವರ ನೇಮಕಕ್ಕೆ ತಡೆ ಬಿದ್ದಿದೆ. ಪರಿಣಾಮ, ಮತ್ತೊಮ್ಮೆ ಕುಲಪತಿ ಹುದ್ದೆ ಖಾಲಿಯಾದಂತಾಗಿದೆ.

ADVERTISEMENT

2ನೇ ಪ್ರಕರಣ: ಈ ವಿ.ವಿಯ ಇತಿಹಾಸದಲ್ಲಿ ಕುಲಪತಿ ನೇಮಕ ಆದೇಶಕ್ಕೆ ತಡೆ ಬಿದ್ದಿರುವುದು 2ನೇ ಬಾರಿಯದಾಗಿದೆ. ಇಂಥದ್ದೇ ಪ್ರಕರಣ 1997ರಲ್ಲೂ ನಡೆದಿತ್ತು. 1997ರ ಜುಲೈನಲ್ಲಿ ಪ್ರೊ.ಜೆ.ಶಶಿಧರ್ ಪ್ರಸಾದ್ ಅವರನ್ನು ಕುಲಪತಿಯಾಗಿ ರಾಜ್ಯಪಾಲರು ನೇಮಿಸಿದ್ದರು. ಆಗ ಸಿಂಡಿಕೇಟ್ ಸದಸ್ಯರಾಗಿದ್ದ ಡಾ.ಕೆ.ಮಹದೇವ ಹಾಗೂ ಎಚ್.ಎ.ವೆಂಕಟೇಶ್ ತಕರಾರು ತೆಗೆದಿದ್ದರು. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರ ನೇಮಕ ಪ್ರಶ್ನಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಬಳಿಕ ರಾಜ್ಯಪಾಲರು ನೇಮಕ ಆದೇಶಕ್ಕೆ ತಡೆ ನೀಡಿದ್ದರು. ನಂತರ ಪ್ರೊ.ಎಸ್.ಎನ್.ಹೆಗ್ಡೆ ಅವರನ್ನು ಕುಲಪತಿಯಾಗಿ ನೇಮಿಸಲಾಗಿತ್ತು.

ಎರಡು ಅವಧಿಗೆ ಒಟ್ಟು ಆರು ವರ್ಷಗಳ ಕಾಲ ಹೆಗ್ಡೆ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕುಲಪತಿಗಳ ಅಧಿಕಾರ ಅವಧಿಯನ್ನು ಮೂರು ವರ್ಷಗಳಿಂದ 4 ವರ್ಷಕ್ಕೆ ಏರಿಸಿ 2ನೇ ಅವಧಿಗೆ ಮುಂದುವರಿಯದಂತೆ ನಿಯಮ ರೂಪಿಸಲಾಯಿತು. ಹೆಗ್ಡೆ ನಂತರ 2003ರಲ್ಲಿ ಪ್ರೊ.ಜೆ.ಶಶಿಧರ್ ಪ್ರಸಾದ್ ಅವರು ಕುಲಪತಿಯಾಗಿ ನೇಮಕಗೊಂಡು ನಾಲ್ಕು ವರ್ಷ ಅಧಿಕಾರದ ಅವಧಿಯನ್ನು ಪೂರೈಸಿದರು.

ಶಶಿಧರ್ ಪ್ರಸಾದ್ ನೇಮಕಕ್ಕೆ ತಡೆ ಬಿದ್ದಿದ್ದ ಅವಧಿಯಲ್ಲೇ ಎನ್‌.ಕೆ.ಲೋಕನಾಥ್ ಭೌತವಿಜ್ಞಾನ ವಿಷಯದಲ್ಲಿ ಅವರ ಬಳಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಗುರುವಿನ ನೇಮಕ ಆದೇಶವನ್ನು ರಾಜ್ಯಪಾಲರು ತಡೆಹಿಡಿದಿದ್ದರು; ಈಗ ಶಿಷ್ಯನ ನೇಮಕಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಇಲ್ಲಿ ಕುಲಪತಿ ನೇಮಕಕ್ಕೆ ಹೈಕೋರ್ಟ್‌ ತಡೆ ನೀಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಇದೆಲ್ಲವೂ ಈಗ ಮಾನಸಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಚರ್ಚೆಯ ವಸ್ತುವಾಗಿದೆ.

ಪ್ರತಿಕ್ರಿಯೆಗೆ ಪ್ರೊ.ಎನ್‌.ಕೆ.ಲೋಕನಾಥ್‌ ಲಭ್ಯವಾಗಲಿಲ್ಲ.

ಮಾರ್ಚ್‌ 23ರಂದು ಅಧಿಕಾರ ಸ್ವೀಕರಿಸಿದ್ದ ಎನ್‌.ಕೆ.ಲೋಕನಾಥ್‌ ಡೀನ್‌ಗಳಿಗೆ ಸಿಗುವುದೇ ‘ಹಂಗಾಮಿ ಕುಲಪತಿ’ ಅವಕಾಶ? ಮಾನಸಗಂಗೋತ್ರಿಯಲ್ಲಿ ಹಲವು ಚರ್ಚೆ

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ವಿಷಯದಲ್ಲಿ ನಮಗೆ ರಾಜಭವನದಿಂದಾಗಲಿ ಸರ್ಕಾರದಿಂದಾಗಲಿ ಯಾವುದೇ ಆದೇಶ ಬಂದಿಲ್ಲ
ವಿ.ಆರ್.ಶೈಲಜಾ ಕುಲಸಚಿವೆ
ಹಂಗಾಮಿ ಕುಲಪತಿ ಚರ್ಚೆ...
ಪ್ರೊ.ಎನ್‌.ಕೆ. ಲೋಕನಾಥ್‌ ನೇಮಕವನ್ನು ಪ್ರಶ್ನಿಸಿ ಪ್ರೊ.ಶರತ್ ಅನಂತಮೂರ್ತಿ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಪುತ್ರ) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಆದೇಶ ನೀಡಿದೆ. ಈಗ ಸರ್ಕಾರ ಅಥವಾ ರಾಜ್ಯಪಾಲರು ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಹಂಗಾಮಿ ಕುಲಪತಿಯನ್ನು ನೇಮಿಸಿದಲ್ಲಿ ಯಾರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಹಿರಿಯ ಡೀನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಪ್ರೊ.ಮುಜಾಫರ್‌ ಅಸ್ಸಾದಿ ಪ್ರೊ.ಎಚ್‌.ಟಿ.ಬಸವರಾಜಪ್ಪ ಅವರ ಹೆಸರು ಕೇಳಿಬರುತ್ತಿವೆ. ಹಿರಿಯರಾದ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಲೋಕನಾಥ್‌ ನೇಮಕಕ್ಕೆ ಮುಂಚೆ ಅಸ್ಸಾದಿ ಹಂಗಾಮಿ ಕುಲಪತಿಯಾಗಿದ್ದರು. ಆದರೆ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದಾಗಲಿ ರಾಜ್ಯಪಾಲರಿಂದಾಗಿ ಯಾವುದೇ ಆದೇಶ ಹೊರಬಿದ್ದಿಲ್ಲ. ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೂ ಮಾಹಿತಿ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಲೋಕನಾಥ್ ಪ್ರಕರಣ ಯಾವ ದಿಕ್ಕು ತೆಗೆದುಕೊಳ್ಳುತ್ತದೆ ಎನ್ನುವುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿಸಿವೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.