ಮೈಸೂರು: ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್ ಅನ್ನು ಸರ್ಕಾರಿ ಶಾಲೆಗಳ ನೆರವಿಗೆ ಬಳಸಿಕೊಳ್ಳುವ ಮಾದರಿ ಕೆಲಸ ಇಲ್ಲಿ ನಡೆಯುತ್ತಿದೆ.
‘ಸರ್ಕಾರಿ ಶಾಲೆಗಳಿಗಾಗಿ ನಾವು ನೀವು’ ಹೆಸರಿನ ಗ್ರೂಪ್ ರಚಿಸಿಕೊಂಡಿದ್ದು, ಅದರ ಮೂಲಕ ಹಲವು ಸಾಮಗ್ರಿಗಳನ್ನು ಒದಗಿಸುವ ಕಾರ್ಯಕ್ಕೆ ಸಮಾಜದ ಹಲವು ಕ್ಷೇತ್ರದ ಪ್ರಮುಖರು ಕೈಜೋಡಿಸಿದ್ದಾರೆ. ತಂತ್ರಜ್ಞಾನದ ವೇದಿಕೆಯನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳಬಹುದು ಎಂಬುದನ್ನು ನಿರೂಪಿಸಿದ್ದಾರೆ.
ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು, ಶಿಕ್ಷಕರು, ಉದ್ಯಮಿಗಳು, ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ಹಾಗೂ ಸೇವಾಕಾಂಕ್ಷಿಗಳು ಸೇರಿ ಒಟ್ಟು 123 ಮಂದಿ ಸದ್ಯ ಈ ಗ್ರೂಪ್‌ನಲ್ಲಿದ್ದಾರೆ. ಅಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅಥವಾ ಸಹಾಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತವೆ.
ಗ್ರೂಪ್‌ನಲ್ಲಿರುವವರು ಅವರ ಅಥವಾ ಮಕ್ಕಳ ಹುಟ್ಟುಹಬ್ಬ, ಮದುವೆ, ಹಿರಿಯರ ಪುಣ್ಯಸ್ಮರಣೆ ಮೊದಲಾದವುಗಳ ಸಂದರ್ಭದಲ್ಲಿ ಅವರ ಶಕ್ತಾನುಸಾರ ಆರ್ಥಿಕ ನೆರವನ್ನು ಸರ್ಕಾರಿ ಶಾಲೆಗೆ ನೀಡುತ್ತಾರೆ. ಹೀಗೆ, ಈವರೆಗೆ 140 ಶಾಲೆಗಳಿಗೆ ಗ್ರೀನ್ ಬೋರ್ಡ್‌ಗಳನ್ನು ಕೊಡಿಸಲಾಗಿದೆ. ಕುಕ್ಕರ್, ಮಿಕ್ಸಿ, ಊಟದ ಲೋಟ–ತಟ್ಟೆಗಳು, ಪಾತ್ರೆಗಳು, ಶಾಲಾ ಮಕ್ಕಳಿಗೆ ಬ್ಯಾಗ್, ಲೇಖನ ಸಾಮಗ್ರಿ, ಥರ್ಮಲ್ ಸ್ಕ್ಯಾನರ್‌ಗಳು, ಶ್ರವಣ ದೋಷವುಳ್ಳವರಿಗೆ ಶ್ರವಣ ಸಾಧನಗಳ ವಿತರಣೆ, ಸೌಂಡ್ ಸಿಸ್ಟಂ, ಕಾರ್ಡ್‌ಲೆಸ್ ಮೈಕ್, ಕ್ರೀಡಾ ಸಾಮಗ್ರಿಗಳು, ರೌಂಡ್ ಟೇಬಲ್‌ಗಳನ್ನು ಒದಗಿಸಲಾಗಿದೆ. ಉದ್ಯಮಿಯೊಬ್ಬರು ತಮಿಳುನಾಡಿನ ಭವಾನಿಯಿಂದ 40ಕ್ಕೂ ಹೆಚ್ಚು ಜಮ್ಖಾನಾಗಳನ್ನು ತರಿಸಿಕೊಟ್ಟಿದ್ದರು.
ಅಗತ್ಯ ಪರಿಕರಗಳು: ಹೆಚ್ಚಿನ ಪ್ರಮಾಣದ ನೆರವನ್ನೆಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒದಗಿಸುತ್ತಿರುವುದು ಗ್ರೂಪ್‌ನ ವಿಶೇಷ. ಇದರಿಂದ, ಜಿಲ್ಲೆಯ ವಿವಿಧ ಶಾಲೆಗಳಿಗೆ ಅನುಕೂಲವಾಗಿದೆ.
ಗ್ರೂಪ್‌ನಲ್ಲಿ ಹಲವು ಜಿಲ್ಲೆಗಳ ಅಧಿಕಾರಿಗಳು ಇದ್ದಾರಾದರೂ, ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಾತ್ರವೇ ಅಗತ್ಯ ಪರಿಕರಗಳನ್ನು ಕೊಡಿಸಲಾಗುತ್ತಿದೆ. ವಿಶೇಷ ಸಂದರ್ಭಗಳನ್ನು ಸ್ಮರಣೀಯವಾಗಿಸಿಕೊಳ್ಳುವ ಕೆಲಸವನ್ನು ಗ್ರೂಪ್‌ನವರು ಮಾಡುತ್ತಿದ್ದಾರೆ.
‘ಕೆಲವು ವರ್ಷಗಳಿಂದ ಈ ಸೇವಾ ಕಾರ್ಯ ನಡೆಯುತ್ತಿದೆ. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ನಾವು–ನೀವು ಹಾಗೂ ಸಮಾಜ ಕೈಜೋಡಿಸಬೇಕು ಎಂಬುದು ಗ್ರೂಪ್‌ನ ಉದ್ದೇಶ. ಈ ನಿಟ್ಟಿನಲ್ಲಿ ಪ್ರೇರಣೆ ನೀಡುವ ಕೆಲಸವನ್ನೂ ನಡೆಸುತ್ತಿದ್ದೇವೆ. ದಾನಿಗಳಿಂದ ಉತ್ತಮ ಸ್ಪಂದನೆ ಬರುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಅಥವಾ ಪ್ರಚಾರವನ್ನು ಬಯಸದೇ ಹಲವರು ದೇಣಿಗೆ ನೀಡುತ್ತಿದ್ದಾರೆ. ಅದು ನೇರವಾಗಿ ನಿಗದಿತ ಸರ್ಕಾರಿ ಶಾಲೆಯನ್ನು ತಲುಪುತ್ತಿದೆ’ ಎಂದು ಗ್ರೂಪ್‌ನ ಅಡ್ಮಿನ್ ಮಂಜುನಾಥ್ ‘ಪ್ರಜಾವಾಣಿ’ ತಿಳಿಸಿದರು.
‘ಸರ್ಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ಸಮಾಜದ ಸ್ಪಂದನೆಯೂ ಅಗತ್ಯವಾಗಿರುತ್ತದೆ. ಗ್ರೂಪ್‌ನ ಪ್ರೇರಣೆ ಪಡೆದು ಅಮೆರಿಕದ ನಿವಾಸಿ ದತ್ತು ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೈಸೂರು ಗ್ರಾಮಾಂತರ ವಲಯದ ಕೂಡನಹಳ್ಳಿ, ಲಲಿತಾದ್ರಿಪುರ, ಹಾರೋಹಳ್ಳಿ, ಮೂಗನಹುಂಡಿ, ರಟ್ಟನಹಳ್ಳಿ ಮತ್ತು ಅರಸನಕೆರೆ ಶಾಲೆಗಳಿಗೆ ಗ್ರೀನ್ ಬೋರ್ಡ್‌ಗಳನ್ನು ದೇಣಿಗೆ ನೀಡಿದ್ದಾರೆ. ಅಲ್ಲಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಹಾಗೂ ಪ್ಯಾಡ್ ವೆಂಡಿಂಗ್ ಯಂತ್ರಗಳನ್ನು ಕೂಡ ಕೊಡಿಸಲಾಗಿದೆ. ಕೆಲವೆಡೆ ಆಯಾ ಭಾಗದ ಜನಪ್ರತಿನಿಧಿಗಳ ಮೂಲಕ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡು, ಅಲ್ಲಿನ ಸುಧಾರಣೆಗೆ ಆಗಬೇಕಿರುವ ಕೆಲಸಗಳ ಬಗ್ಗೆಯೂ ಗಮನಸೆಳೆಯುವ ಕೆಲಸ ನಡೆದಿದೆ’ ಎಂದು ಅವರು ಮಾಹಿತಿ ನೀಡಿದರು.
Highlights - ಗ್ರೂಪ್‌ನಲ್ಲೀಗ 123 ಮಂದಿ ವಿಶೇಷ ಸಂದರ್ಭ ಸ್ಮರಣೀಯವಾಗಿಸುವ ಸದಸ್ಯರು ವಿವಿಧ ಪರಿಕರಗಳನ್ನು ಕೊಡಿಸುವ ಕಾರ್ಯ
Quote - ಒಬ್ಬರಿಂದ ಮತ್ತೊಬ್ಬರು ಪ್ರೇರಣೆ ಪಡೆದು ಶುಭ ಸಂದರ್ಭಗಳಲ್ಲಿ ಸರ್ಕಾರಿ ಶಾಲೆಗಳಿಗ ಉನ್ನತೀಕರಣಕ್ಕೆ ನೆರವಾಗುವ ಕೆಲಸ ನಮ್ಮ ಗ್ರೂಪ್‌ನಲ್ಲಿರುವವರಿಂದ ನಡೆಯುತ್ತಿದೆ ಮಂಜುನಾಥ್ ಸದಸ್ಯ ‘ಸರ್ಕಾರಿ ಶಾಲೆಗಳಿಗಾಗಿ ನಾವು ನೀವು’ ವಾಟ್ಸ್‌ಆ್ಯಪ್ ಗ್ರೂಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.