ADVERTISEMENT

ಮೈಸೂರು: ಬಾನಂಗಳದಲ್ಲಿ ಡ್ರೋನ್‌ಗಳ ‘ಚಿತ್ತಾರ’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 16:21 IST
Last Updated 6 ಅಕ್ಟೋಬರ್ 2024, 16:21 IST
   

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಡ್ರೋನ್ ಪ್ರದರ್ಶನ ನಗರದ ಬಾನಂಗಳದಲ್ಲಿ ಚಿತ್ತಾರ ಬಿಡಿಸುವ ಮೂಲಕ, ಜನರ ಕಣ್ಮನ ಸೆಳೆಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ಇದೇ ಮೊದಲ ಬಾರಿಗೆ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.

ಬಳಿಕ ನಡೆದ ಪ್ರದರ್ಶನದಲ್ಲಿ 1,500 ಡ್ರೋನ್‌ಗಳು ಏಕಕಾಲದಲ್ಲಿ ಆಗಸದ ಎತ್ತರಕ್ಕೆ ಹಾರಿ ಹಲವು ಬಗೆಯ ಕಲಾಕೃತಿಗಳನ್ನು ರಚಿಸಿದವು. ಬಾಟ್ ಲ್ಯಾಬ್ ಡೈನಮಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಪ್ರದರ್ಶನ ನಡೆಯಿತು.

ADVERTISEMENT

ರಾತ್ರಿ 8.45ರ ಸುಮಾರಿಗೆ ಆರಂಭವಾದ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸುವ ಮೂಲಕ ನೆರೆದಿದ್ದರನ್ನು ರಂಜಿಸಿತು. ಪಂಜಿನ ಕವಾಯತು ಮೈದಾನದಲ್ಲಿ ಸಾವಿರಾರು ಜನರು ಸೇರಿದ್ದರು.

ರಾಜೇಶ್ ಕೃಷ್ಣನ್ ಹಾಡಿನ ಮೋಡಿ:

ಪ್ರದರ್ಶನಕ್ಕೂ ಮುನ್ನ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ‘ಉಸಿರೇ ಉಸಿರೇ’, ‘ಜೊತೆಯಲಿ ಜೊತೆ ಜೊತೆಯಲಿ‘, ‘ಯಾರೋ ಕಣ್ಣಲ್ಲಿ ಕಣ್ಣನಿಟ್ಟು’, ‘ಕುಚಿಕ್ಕು ಕುಚ್ಚಿಕು‘, ‘ಕೂರಕ್ ಕುಕ್ಕರಹಳ್ಳಿಕೆರೆ’ ಸೇರಿದಂತೆ ಹಲವು ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಶಾಸಕರಾದ ತನ್ವೀರ್ ಸೇಠ್, ಪಿ.ಎಂ.ನರೇಂದ್ರ ಸ್ವಾಮಿ, ಸೆಸ್ಕ್‌ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಂ.ಕೆ.‌ ಸೋಮಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ‌ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೈಯದ್ ಇಕ್ಬಾಲ್, ಉಪಾಧ್ಯಕ್ಷರಾದ ಸುಹೇಲ್ ಬೇಗ್, ಕಾಂತರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.