ADVERTISEMENT

Mysuru Dasara 2023 | ದೀಪದ ಬೆಳಕಲ್ಲಿ ಸಾಂಸ್ಕೃತಿಕ ಸೌರಭದ ರಂಗು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 16:27 IST
Last Updated 15 ಅಕ್ಟೋಬರ್ 2023, 16:27 IST
   

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ವಿದ್ಯುತ್‌ ದೀಪಾಲಂಕಾರ ಬೆಳಗುತ್ತಿದ್ದಂತೆಯೇ, ದಸರಾ ಅಂಗವಾಗಿ ವಿವಿಧ 12 ವೇದಿಕೆಗಳಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಸಂಜೆ ವರ್ಣರಂಜಿತ ಚಾಲನೆ ದೊರೆಯಿತು.

ಅರಮನೆ, ಕಲಾಮಂದಿರ, ಜಗನ್ಮೋಹನ ಅರಮನೆ ಸಭಾಂಗಣ, ನಾದಬ್ರಹ್ಮ ಸಂಗೀತಸಭಾ, ಗಾನಭಾರತಿ, ಪುರಭವನ, ಕಿರುರಂಗಮಂದಿರ, ಚಿಕ್ಕಗಡಿಯಾರ, ನಟನ ರಂಗಮಂದಿರ, ರಮಾಗೋವಿಂದ ರಂಗಮಂದಿರ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರಿ ದೇವಸ್ಥಾನದ ಆವರಣದ ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ಉದ್ಘಾಟನೆಗೊಂಡಿತು. ಅರಮನೆಯ ದೀಪಗಳ ಬೆಳಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೊಳೆದವು.

ಕಲಾವಿದೆ, 91 ವರ್ಷ ವಯಸ್ಸಿನ ಪದ್ಮಾ ಮೂರ್ತಿ ಅವರಿಗೆ ಪ್ರಸಕ್ತ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು. ₹ 5 ಲಕ್ಷ ನಗದು, ಸರಸ್ವತಿ ವಿಗ್ರಹದ ಸ್ಮರಣಿಕೆಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು.

ADVERTISEMENT

‘ನಾನು ಮೈಸೂರಿನವಳು. ವಿದ್ಯಾಭ್ಯಾಸ ಪಡೆದದ್ದು, ಸಂಗೀತ ಕಲಿತದ್ದೆಲ್ಲವೂ ಇಲ್ಲೇ. ಕರ್ನಾಟಕ ಸಂಗೀತಕ್ಕೆ ನಾನು ಸಲ್ಲಿಸಿರುವ ಅಳಿಲು ಸೇವೆಯನ್ನು ಗುರುತಿಸಿ ಸರ್ಕಾರವು ಅತ್ಯಂತ ದೊಡ್ಡ ಪ್ರಶಸ್ತಿ ನೀಡಿದ್ದರಿಂದ ಬಹಳ ಖುಷಿಯಾಗಿದೆ. ಇದು ನನ್ನ ಜೀವನದ ಪರ್ವ ದಿನ. ಮನಸ್ಸು ತುಂಬಿ ಬಂದಿದ್ದು’ ಎಂದು ಪದ್ಮಾ ಮೂರ್ತಿ ಸಂತಸ ಹಂಚಿಕೊಂಡರು.

ದೈವ ಕೃಪೆಯಿಂದ:

‘ಶ್ರೋತೃಗಳಿಲ್ಲದಿದ್ದರೆ ಕಲಾವಿದರ ಜೀವನ ವ್ಯರ್ಥವಾಗುತ್ತದೆ. ಅವರ ಪ್ರೋತ್ಸಾಹದಿಂದ ನಾನು ಮುಂದೆ ಬರುವುದು ಸಾಧ್ಯವಾಯಿತು. ಎಷ್ಟೇ ಪ್ರತಿಭೆ ಇದ್ದರೂ ಮನೆಯವರ ಸಹಕಾರ ಇಲ್ಲದೆ ಮುಂದೆ ಬರಲಾಗುವುದಿಲ್ಲ. ಕುಟುಂಬದವರು ನನಗೆ ಸಹಕಾರ ನೀಡಿದ್ದಾರೆ. ತಂದೆ–ತಾಯಿ ನನಗೆ ಉತ್ತಮ ಗುರುಗಳಿಂದ ಶಿಕ್ಷಣ ಕೊಡಿಸಿದರು. ದೈವಕೃಪೆಯಿಂದ ನನಗೆ ಈ ಪ್ರಶಸ್ತಿ ಸಿಕ್ಕಿದೆ. ದೇವರು ಸರ್ಕಾರದಿಂದ ಈ ಕೆಲಸ ಮಾಡಿಸಿದ್ದಾನೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ‘ಮೈಸೂರು ಮಹಾರಾಜರು ಸಂಸ್ಕೃತಿ ಕಲೆಗೆ ವಿಶೇಷ ಆದ್ಯತೆ ನೀಡಿದ್ದರು. ಅದೇ ರೀತಿ ಈಗಿನ ಮುಖ್ಯಮಂತ್ರಿಯೂ ಒತ್ತು ಕೊಡುತ್ತಿದ್ದಾರೆ’ ಎಂದರು.

ಎಲ್ಲ ರೀತಿಯ ಪ್ರೋತ್ಸಾಹ:

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ದೇಶ–ವಿದೇಶಗಳಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟು ದೀರ್ಘ ಕಾಲ ಕಲಾ ಸೇವೆ ಮಾಡಿರುವ ಪದ್ಮಾ ಮೂರ್ತಿ ಅವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಪ್ರಶಸ್ತಿ ನೀಡಿದೆ. ಇಲ್ಲಿಯವರೆಗೆ 30 ಪ್ರಶಸ್ತಿಯನ್ನು ನೀಡಲಾಗಿದೆ. ಮೊದಲಿಗೆ ಪುಟ್ಟರಾಜ ಗವಾಯಿ ಅವರಿಗೆ ಕೊಡಲಾಗಿತ್ತು. ರಾಜ ಮಹಾರಾಜರು ಕೂಡ ಈ ಕೆಲಸ ಮಾಡುತ್ತಿದ್ದರು’ ಎಂದು ತಿಳಿಸಿದರು.

‘ಮೈಸೂರು ಮಹಾರಾಜರು ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ ಹಾಗೂ ನೃತ್ಯಕ್ಕೆ ಹೆಚ್ಚು ಪ್ರೋತ್ಸಾಹ ಕೊಡುತ್ತಿದ್ದರು. ಅದೇ ರೀತಿ ನಮ್ಮ ಸರ್ಕಾರವೂ ಮಾಡುತ್ತಿದೆ. ಕಲೆ–ಸಂಸ್ಕೃತಿಗೆ ಎಲ್ಲ ರೀತಿಯ ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ವಿದ್ವಾನ್‌ ಎಸ್.‍‍ಪುಟ್ಟರಾಜು ಮತ್ತು ತಂಡ ಹಾಗೂ ಯದುಕುಮಾರ್ ಮತ್ತು ತಂಡದವರು ನಾದಸ್ವರ ಕಾರ್ಯಕ್ರಮ ಪ್ರಸ್ತುತಪಸಿದರು. ರಾಜಪ್ಪ ಹಾಗೂ ಮಲ್ಲೇಶ್ ತಂಡದವರು ವೀರಭದ್ರ ಕುಣಿತ ಪ್ರದರ್ಶಿಸಿ ನೆರೆದಿದ್ದವರ ಗಮನಸೆಳೆದರು. ವಿದುಷಿ ಬಿ. ರಶ್ಮಿ ಮತ್ತು ತಂಡದವರು ನಾಡಗೀತೆ, ಆಸ್ಥಾನ ಗೀತೆ ಹಾಡಿದರು. ಬಳಿಕ ಚಲನಚಿತ್ರ ನಟಿ ಭಾವನಾ ರಾಮಣ್ಣ ಹಾಗೂ ತಂಡದವರು ಚಾಮುಂಡೇಶ್ವರಿ, ಮರ್ದಿನಿ ಹಾಗೂ ಸಿಂಹವಾಹಿನಿ ನೃತ್ಯರೂಪಗಳನ್ನು ಪ್ರಸ್ತುತಪಡಿಸಿ ನೆರೆದಿದ್ದವರಲ್ಲಿ ದೈವೀಕ ಭಾವನೆ ತುಂಬಿದರು. ಮುಖ್ಯಮಂತ್ರಿ, ಸಚಿವರು ಹಾಗೂ ಗಣ್ಯರು ಕಾರ್ಯಕ್ರಮ ವೀಕ್ಷಿಸಿದರು.

ಮೈಸೂರಿನ ಅರಮನೆ ಆವರಣದ ವೇದಿಕೆಯಲ್ಲಿ ಚಲನಚಿತ್ರ ನಟಿ ಭಾವನಾ ರಾಮಣ್ಣ ಹಾಗೂ ತಂಡದವರು ನೃತ್ಯರೂಪಕ ಪ್ರಸ್ತುತಪಡಿಸಿದರು

ಮೈಸೂರಿನಲ್ಲಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸ್ವೀಕರಿಸಿ ಕಲಾವಿದೆ ಪದ್ಮಾ ಮೂರ್ತಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.