ADVERTISEMENT

ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಿದ ದಸರಾ: ಹೋಟೆಲ್‌ಗಳು ಭರ್ತಿ

ಆರ್.ಜಿತೇಂದ್ರ
Published 14 ಅಕ್ಟೋಬರ್ 2024, 7:30 IST
Last Updated 14 ಅಕ್ಟೋಬರ್ 2024, 7:30 IST
<div class="paragraphs"><p>ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ವೀಕ್ಷಿಸಲು ಕೆ.ಆರ್.ವೃತ್ತದಲ್ಲಿ ನೆರೆದಿದ್ದ ಸಾರ್ವಜನಿಕರು</p></div>

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ವೀಕ್ಷಿಸಲು ಕೆ.ಆರ್.ವೃತ್ತದಲ್ಲಿ ನೆರೆದಿದ್ದ ಸಾರ್ವಜನಿಕರು

   

–ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಮೈಸೂರು: ಈ ವರ್ಷದ ಅದ್ದೂರಿ ದಸರಾ ಆಚರಣೆಯಿಂದಾಗಿ ನಗರದಾದ್ಯಂತ ಉತ್ತಮ ವಹಿವಾಟು ನಡೆದಿದ್ದು, ಪ್ರವಾಸೋದ್ಯಮಕ್ಕೆ ಇನ್ನಷ್ಟು ಚೈತನ್ಯ ತುಂಬಿದೆ.

ADVERTISEMENT

ಕಳೆದ ಹತ್ತು ದಿನಗಳವರೆಗೆ ನಗರಕ್ಕೆ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಹೆಜ್ಜೆ ಇಟ್ಟಿದ್ದು, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಯುವ ದಸರಾ, ಜಂಬೂಸವಾರಿ, ಪಂಜಿನ ಕವಾಯತು ಸೇರಿದಂತೆ ಎಲ್ಲ ಪ್ರದರ್ಶನಗಳಲ್ಲೂ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು. ರಾತ್ರಿ 7ರಿಂದ 11ರವರೆಗೂ ನಗರದ ಬೀದಿಗಳು ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದ್ದು, ಇದನ್ನು ಕಾಣಲೆಂದೇ ಸಾವಿರಾರು ಮಂದಿ ಭೇಟಿ ನೀಡಿದ್ದರು. ಇವೆಲ್ಲವೂ ನೇರವಾಗಿ ಆತಿಥ್ಯ ವಲಯಕ್ಕೆ ಶಕ್ತಿ ತುಂಬಿವೆ.

ಪ್ರವಾಸಿ ತಾಣಗಳಿಗೆ ಲಗ್ಗೆ: ಇಲ್ಲಿನ ವಸ್ತುಪ್ರದರ್ಶನ, ಮೃಗಾಲಯ, ಅರಮನೆ, ಚಾಮುಂಡಿ ಬೆಟ್ಟ ಪ್ರವಾಸಿ ತಾಣಗಳು ನವರಾತ್ರಿ ಸಂದರ್ಭ ಕಾಲಿಡಲು ಜಾಗವಿಲ್ಲದಂತೆ ತುಂಬಿದ್ದವು. ಜೊತೆಗೆ ನಗರದ ರೈಲು ಸಂಗ್ರಹಾಲಯ, ಚರ್ಚ್, ಕಾರಂಜಿ ಕೆರೆ ಮೊದಲಾದ ತಾಣಗಳಿಗೂ ಜನರು ಲಗ್ಗೆ ಇಟ್ಟಿದ್ದು, ಇಲ್ಲಿಯೂ ಉತ್ತಮ ಆದಾಯ ಸಂಗ್ರಹ ಹಾಗೂ ವಹಿವಾಟು ನಡೆದಿದೆ.

ಮೈಸೂರು ನಗರದ ಜೊತೆಗೆ ನಂಜನಗೂಡು, ಶ್ರೀರಂಗಪಟ್ಟಣ, ಬಂಡೀಪುರ–ನಾಗರಹೊಳೆ, ಕಬಿನಿ ಹಿನ್ನೀರು, ಗಗನಚುಕ್ಕಿ–ಭರಚುಕ್ಕಿ, ಹಿಮವತ್‌ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ತಲಕಾಡು–ಸೋಮನಾಥಪುರ ಸೇರಿದಂತೆ ಸುತ್ತಲಿನ ಪ್ರವಾಸಿ ತಾಣಗಳತ್ತಲೂ ಪ್ರವಾಸಿಗರ ಚಿತ್ತ ಹರಿದಿದೆ.

ಹೋಟೆಲ್‌ಗಳು ಭರ್ತಿ: ಮೈಸೂರು ನಗರದಲ್ಲಿ 400ಕ್ಕೂ ಹೆಚ್ಚು ವಸತಿಗೃಹಗಳು ಇದ್ದು, ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಕೊಠಡಿಗಳು ಇವೆ. ನವರಾತ್ರಿಯ ದಿನಗಳಲ್ಲಿ ಈ ಕೊಠಡಿಗಳು ಸಂಪೂರ್ಣ ಭರ್ತಿ ಆಗಿದ್ದು, ಆಯುಧಪೂಜೆ, ವಿಜಯದಶಮಿಯಂದು ಕೊಠಡಿ ಸಿಗದೇ ಪ್ರವಾಸಿಗರು ಪರದಾಡುವಂತಹ ಸ್ಥಿತಿ ಇತ್ತು. ಈಗಲೂ ಶೇ 60–70ರಷ್ಟು ಕೊಠಡಿಗಳು ಮೀಸಲಾಗಿವೆ.

‘ಈ ಬಾರಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ಹೀಗಾಗಿ ವಸತಿಗೃಹ, ಹೋಟೆಲ್‌ ಉದ್ಯಮ ಉತ್ತಮ ಗಳಿಕೆ ಕಂಡಿದೆ. ಇವುಗಳ ವಹಿವಾಟಿನ ಅಂದಾಜು ಮಾಡುವುದು ಕಷ್ಟ. ಆದರೆ, ಒಟ್ಟಾರೆ ಆತಿಥ್ಯ ವಲಯದಲ್ಲಿ ಸುಮಾರು ₹100 ಕೋಟಿಯಷ್ಟು ವಹಿವಾಟು ನಡೆದಿರಬಹುದು’ ಎನ್ನುತ್ತಾರೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ.

ಆಹಾರ ಮೇಳದ ಯಶಸ್ಸು: ಈ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ಆಯೋಜಿಸಿದ್ದು, 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಖಾದ್ಯ ವೈವಿಧ್ಯಗಳು ಮಾರಾಟಕ್ಕೆ ಇದ್ದವು. ಈ ಬಾರಿ ವಿಜಯದಶಮಿವರೆಗೆ ಮೇಳ ವಿಸ್ತರಿಸಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಖಾದ್ಯಪ್ರಿಯರು ಭೇಟಿ ನೀಡಿದ್ದರು. ಇದರಿಂದಾಗಿ ಹೋಟೆಲ್ ಉದ್ಯಮದ ವಹಿವಾಟು ಉತ್ತಮವಾಗಿದೆ.

‘10 ದಿನಗಳವರೆಗೆ ಆಹಾರ ಮೇಳ ನಡೆದಿದ್ದು, ಮೊದಲ ದಿನದ ಕಿರಿಕಿರಿ ಬಿಟ್ಟರೆ ಉಳಿದ ದಿನಗಳಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಳೆ ನಡುವೆಯೂ ಗಳಿಕೆ ಉತ್ತಮವಾಗಿದೆ’ ಎನ್ನುತ್ತಾರೆ ವರ್ತಕ ಶ್ರೀನಿವಾಸ್.

ಬಸ್‌ಗಳು ಫುಲ್ ರಶ್‌: ದಸರಾ ಅವಧಿಯಲ್ಲಿ ಮೈಸೂರಿಗೆ ಬರುವವರ ಸಂಖ್ಯೆ ಹಲವು ಪಟ್ಟು ಹೆಚ್ಚಾದ ಕಾರಣ ಕೆಎಸ್‌ಆರ್‌ಟಿಸಿ 2 ಸಾವಿರದಷ್ಟು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಮೈಸೂರು ವಿಭಾಗದಿಂದಲೂ ನೂರಾರು ಬಸ್‌ಗಳು ಹೆಚ್ಚುವರಿಯಾಗಿ ಸಂಚರಿಸಿದ್ದು, ಟ್ರಿಪ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಮೈಸೂರು ವಿಭಾಗವು ನೆರೆಯ ಡಿಪೊಗಳಿಂದ ನೂರಾರು ಬಸ್‌ಗಳನ್ನು  ಎರವಲು ಪಡೆದಿದ್ದು, 8 ಸಾವಿರಕ್ಕೂ ಅಧಿಕ ಟ್ರಿಪ್‌ಗಳಲ್ಲಿ ಸಂಚರಿಸಿವೆ. ಮೈಸೂರು ವಿಭಾಗದಲ್ಲಿ ಪ್ರತಿ ನಿತ್ಯ ಸರಾಸರಿ 5.5 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರೆ, ದಸರೆ ಸಂದರ್ಭ ಈ ಪ್ರಮಾಣವು 8 ಲಕ್ಷಕ್ಕೆ ಏರಿಕೆ ಆಗಿದೆ.

ಟ್ರಾವೆಲ್ಸ್‌ ಕಂಪನಿಗಳಿಗೆ ಶುಕ್ರದೆಸೆ: ಖಾಸಗಿ ಟ್ರಾವೆಲ್‌ ಕಂಪನಿಗಳಿಗೆ ದಸರೆ ಶುಕ್ರದೆಸೆ ತಂದಿದ್ದು, ಖಾಸಗಿ ಬಸ್ ಪ್ರಯಾಣ ದರವು ಸಾಕಷ್ಟು ಏರಿಕೆ ಆಗಿತ್ತು. ಟ್ಯಾಕ್ಸಿ, ಟ್ರಾವೆಲ್‌ ಟೆಂಪೊಗಳಿಗೆ ಬೇಡಿಕೆ ಕುದುರಿದ್ದು, ಮೈಸೂರು–ಬೆಂಗಳೂರು ನಡುವೆ ನವರಾತ್ರಿ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟ್ಯಾಕ್ಸಿಗಳು ಪ್ರಯಾಣ ನಡೆಸಿವೆ. ಇವುಗಳ ದರವೂ ಏರಿಕೆ ಕಂಡಿದ್ದು, ವಾಹನಗಳ ಮಾಲೀಕರು–ಚಾಲಕರು ಉತ್ತಮ ಆದಾಯ ಗಳಿಕೆ ಮಾಡಿದ್ದಾರೆ.

ಟಾಂಗಾ ಸವಾರಿ ಮೈಸೂರಿನ ಸಾಂಪ್ರದಾಯಿಕ ವಿಶೇಷತೆಗಳಲ್ಲಿ ಒಂದು. ಈ ವರ್ಷವೂ ಸಾವಿರಾರು ಸಂಖ್ಯೆಯ ಪ್ರವಾಸಿಗರು ಟಾಂಗಾ ಸವಾರಿ ಮಾಡಿದ್ದು, ಕ್ಷೀಣಿಸುತ್ತಿರುವ ಟಾಂಗಾ ಉದ್ಯಮಕ್ಕೆ ಇದು ಟಾನಿಕ್‌ನಂತೆ ಕೆಲಸ ಮಾಡಿದೆ.

ಮೈಸೂರಿನ ಆತಿಥ್ಯ ವಲಯಕ್ಕೆ ಈ ಬಾರಿ ದಸರಾ ಟಾನಿಕ್‌ ನೀಡಿದ್ದು ಒಟ್ಟಾರೆ ₹100 ಕೋಟಿ ವಹಿವಾಟು ನಡೆದಿರಬಹುದು. ಈಗಲೂ ಪ್ರವಾಸಿಗರು ಬರುತ್ತಿದ್ದು ದೀಪಾಂಲಕಾರ ವಿಸ್ತರಣೆ ಉತ್ತಮ ಬೆಳವಣಿಗೆ
ಸಿ. ನಾರಾಯಣ ಗೌಡ ಅಧ್ಯಕ್ಷ ಮೈಸೂರು ಹೋಟೆಲ್ ಮಾಲೀಕರ ಸಂಘ
ನವರಾತ್ರಿಯ ಒಂಬತ್ತು ದಿನವೂ ಬಿಡುವಿಲ್ಲದ ಕೆಲಸ. ಬೆಂಗಳೂರು ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬುಕ್ಕಿಂಗ್ ಮಾಡಿದ್ದು ಸುತ್ತಲಿನ ಪ್ರವಾಸಿ ತಾಣಗಳಿಗೂ ಕರೆದೊಯ್ದೆವು
ಶಂಕರ್ ಟ್ಯಾಕ್ಸಿ ಚಾಲಕ
ದಸರೆ ಸಮಯದಲ್ಲಿ ಪ್ರತಿ ವರ್ಷ ಪ್ರವಾಸಿಗರು ಹುಡುಕಿಕೊಂಡು ಹೋಟೆಲ್‌ಗೆ ಬರುತ್ತಾರೆ. ಸಾಮಾಜಿಕ ಜಾಲತಾಣ ನೋಡಿ ಬರುವವರ ಸಂಖ್ಯೆ ಹೆಚ್ಚುತ್ತಿದೆ
ಮಹೇಶ್‌ ತುಪ್ಪದ ದೋಸೆ ಹೋಟೆಲ್‌ ಮಾಲೀಕ

‘ಮೈಸೂರು ವಿಶೇಷ’ ಹುಡುಕಿದ ಪ್ರವಾಸಿಗರು

ದಸರಾಕ್ಕೆ ಬಂದ ಪ್ರವಾಸಿಗರು ಇಲ್ಲಿನ ವಿಶೇಷತೆ ಹುಡುಕಿ ಹೋಗುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದ ತಿನಿಸುಗಳು ಹೋಟೆಲ್‌ಗಳನ್ನು ಹುಡುಕಿ ಅಲೆದಿದ್ದಾರೆ. ಗುರು ಸ್ವೀಟ್ಸ್‌ನ ಮೈಸೂರು ಪಾಕ್‌ ನಜರಬಾದ್‌–ಅಗ್ರಹಾರದ ಮೈಲಾರಿ ದೋಸೆ ಮಹೇಶ್‌ ಟಿಫಾನೀಸ್‌ನ ತುಪ್ಪದ ದೋಸೆ ಮೊದಲಾದವುಗಳು ಸಸ್ಯಾಹಾರಿ ಪ್ರಿಯರನ್ನು ಆಕರ್ಷಿಸಿವೆ. ಮಾಂಸಾಹಾರಿ ಪ್ರಿಯರು ಇಲ್ಲಿನ ಜನಪ್ರಿಯ ಮಂಡಿಮೊಹಲ್ಲಾದ ಹನುಮಂತು ಹೋಟೆಲ್ ಪಲಾವ್‌ ಜೊತೆಗೆ ಆರ್‌ಆರ್‌ಆರ್‌ ಲಕ್ಷ್ಮಣ್ ಮೆಸ್ ಹೋಟೆಲ್‌ ಸುಪ್ರಿಯಾ ತೇಗು ಮೆಸ್‌ ದೊನ್ನೆ ಬಿರಿಯಾನಿ ಮೊದಲಾದ ತಾಣಗಳಿಗೆ ಹೆಚ್ಚು ಜನ ಭೇಟಿ ಕೊಟ್ಟಿದ್ದು ಉತ್ತಮ ವಹಿವಾಟು ದಾಖಲಾಗಿದೆ.

ಶೂಟಿಂಗ್ ಸ್ಪಾಟ್‌ ಆದ ಪಾರಂ‍ಪರಿಕ ನಗರಿ

ಮೈಸೂರು ಎಂದಿಗೂ ಶೂಟಿಂಗ್ ಪ್ರಿಯರ ಸ್ವರ್ಗ. ಅದರಲ್ಲೂ ನವರಾತ್ರಿಯಲ್ಲಿ ಮಧುವಣಗಿತ್ತಿಯಂತೆ ಕಂಗೊಳಿಸುವ ನಗರಿ ಫೋಟೊಗ್ರಾಫರ್‌ಗಳ ನೆಚ್ಚಿನ ತಾಣ. ಈ ಬಾರಿಯೂ ಇಲ್ಲಿನ ಅರಮನೆ ಕೆ.ಆರ್. ವೃತ್ತ ದೊಡ್ಡ ಗಡಿಯಾರ ಚಿಕ್ಕಗಡಿಯಾರ ದೇವರಾಜ ಮಾರುಕಟ್ಟೆ ಸಯ್ಯಾಜಿರಾವ್‌ ರಸ್ತೆ ಅರಸು ರಸ್ತೆಗಳಲ್ಲಿ ಪ್ರತಿ ಮುಂಜಾನೆ ಎಳೆಯ ಬಿಸಿಲಲ್ಲಿ ಹಾಗೂ ಸಂಜೆ ದೀಪಗಳ ಬೆಳಕಲ್ಲಿ ನೂರಾರು ಜೋಡಿಗಳು ಫೋಟೊ ಶೂಟ್ ಮಾಡಿಸಿವೆ. ಇದರಿಂದಾಗಿ ದಸರೆ ಸಂದರ್ಭದಲ್ಲಿ ಛಾಯಾಗ್ರಾಹಕರಿಗೂ ಆದಾಯ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.