ಮೈಸೂರು: ‘ದಸರಾದಲ್ಲಿ ಮೊದಲ ಬಾರಿಗೆ ₹3.50 ಕೋಟಿ ವೆಚ್ಚದಲ್ಲಿ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪ್ರಧಾನ ಕಚೇರಿಯಲ್ಲಿ ‘ವಿದ್ಯುತ್ ದೀಪಾಲಂಕಾರ’ದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಅ.6 ಮತ್ತು 7ರಂದು ಉಚಿತವಾಗಿ ಹಾಗೂ ಅ.11 ಮತ್ತು 12ರಂದು ದಸರೆಯ ಪೂರ್ವನಿಯೋಜಿತ ಕಾರ್ಯಕ್ರಮದ ಜೊತೆ ಡ್ರೋನ್ ಶೋ ನಡೆಯಲಿದೆ’ ಎಂದರು.
‘ಅಯೋಧ್ಯೆ, ಹರಿದ್ವಾರ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಡ್ರೋನ್ ಶೋ ನೀಡಿದ್ದ ಸಂಸ್ಥೆ ದೆಹಲಿಯ ಬೋಟ್‌ಲ್ಯಾಬ್ ಸಂಸ್ಥೆಯು ನಿರ್ವಹಣೆ ಜವಬ್ದಾರಿ ಹೊಂದಿದೆ. ಎಲ್‌ಇಡಿ ಬಲ್ಬ್ ಅಳವಡಿಸಿದ 1,500 ಡ್ರೋನ್‌ಗಳ ಮೂಲಕ ಹದಿನೈದು ನಿಮಿಷ ಪ್ರದರ್ಶನ ನೀಡಲಿದ್ದು, ಚಾಮುಂಡೇಶ್ವರಿ, ಅರಮನೆ, ಅಂಬಾರಿ ಮತ್ತು ಆನೆ, ಗ್ಯಾರಂಟಿ ಯೋಜನೆಗಳ ಕುರಿತ ವಿಚಾರಗಳು ಪ್ರದರ್ಶನಗೊಳ್ಳಲಿದೆ. ಶೋ ನಡೆಯುವ 4 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟದ ಸೊಬಗು ಕಾಣಿಸಲಿದೆ’ ಎಂದು ಮಾಹಿತಿ ನೀಡಿದರು.
‘ದೀಪಾಲಂಕಾರವನ್ನು ಈ ಬಾರಿ 21 ದಿನಗಳ ಕಾಲ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ಅ.3 ರಿಂದ 23ರವರೆಗೆ ದೀಪಾಲಂಕಾರ ಇರಲಿದೆ. ಅವನ್ನು ವಿಶಿಷ್ಟವಾಗಿ ರೂಪಿಸಲು ನಮ್ಮ ತಂಡ ಯೋಜನೆ ರೂಪಿಸಿದೆ. ಈ ಬಾರಿಯ ದೀಪಾಲಂಕಾರಕ್ಕೆ ಒಟ್ಟು ₹10 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಆಗಿರುವ ಘಟನೆಗಳ ಅನುಭವದಿಂದಾಗಿ ವಿದ್ಯುತ್ ಅಡೆತಡೆ ತಡೆಯಲು ಹಾಗೂ ಸಾರ್ವಜನಿಕರಿಂದ ತೊಂದರೆಯಾಗದಂತೆ ತಡೆಗಟ್ಟಲು ನಿಗಮವು ಸಿಬ್ಬಂದಿ ನಿಯೋಜಿಸಲಿದೆ’ ಎಂದು ತಿಳಿಸಿದರು.
ಹಸಿರು ಚಪ್ಪರ ಉದ್ಘಾಟನೆ: ‘ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ನಿರ್ಮಿಸಿರುವ ಹಸಿರು ಚಪ್ಪರವನ್ನು ಇಂಧನ ಇಲಾಖೆಯ ಸಚಿವ ಕೆ.ಜೆ.ಜಾರ್ಜ್ ಅ.3ರಂದು ಸಂಜೆ 6.30ಕ್ಕೆ ಉದ್ಘಾಟಿಸಲಿದ್ದಾರೆ. ನಂತರ ಉಳಿದ ಎಲ್ಲಾ ಕಡೆ ದೀಪಗಳು ಉರಿಯಲಿವೆ’ ಎಂದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ‘ಡ್ರೋನ್ ಶೋಗಾಗಿ ವೀಕ್ಷಣೆಗೆ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲೂ ವ್ಯವಸ್ಥೆ ಮಾಡಲಾಗಿದೆ. ನೀರಾವರಿ ಇಲಾಖೆ ಮೂಲಕ ಕೆಆರ್‌ಎಸ್ ಡ್ಯಾಂನಲ್ಲಿ ಅ.3ರಿಂದ ದೀಪಾಲಂಕಾರ ಆರಂಭಿಸಲಿದ್ದು, ಅದೂ 21 ದಿನ ನಡೆಯಲಿದೆ’ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ, ಹಣಕಾಸು ನಿರ್ದೇಶಕ ಮಹಮ್ಮದ್ ಮಹೀಮುಲ್ಲಾ ಇದ್ದರು.
ಅ.3ರಿಂದ 23ರವರೆಗೆ ದೀಪಾಲಂಕಾರ 21 ದಿನ ದೀಪ ಉರಿಸಲು ಸಿದ್ಧತೆ ಕೆಆರ್‌ಎಸ್ ಡ್ಯಾಂನಲ್ಲೂ ಅಲಂಕಾರ
ವಿದ್ಯುತ್ ರಥ ಸಂಚಾರ
‘ದಸರಾ ಸಂದರ್ಭದಲ್ಲಿ ದೀಪಾಲಂಕಾರದಿಂದ ಅಲಂಕೃತಗೊಂಡ ‘ವಿದ್ಯುತ್ ರಥ’ವು ನಗರದ ಪ್ರಮುಖ ರಸ್ತೆ ಹಾಗೂ ವೃತ್ತದಲ್ಲಿ ಸಂಚರಿಸಲಿದೆ. ಈ ರಥದಲ್ಲಿ ಪವರ್‌ಮ್ಯಾನ್‌ಗಳ ಕರ್ತವ್ಯ ಗೃಹಜ್ಯೋತಿ ಕೃಷಿ ಬಳಕೆಗೆ ಸೌರ ವಿದ್ಯುತ್ ವಿದ್ಯುತ್ ಸುರಕ್ಷತೆ ನುಡಿದಂತೆ ನಡೆದ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆ ಕುರಿತು ಪ್ರದರ್ಶಿಸಲಾಗುವುದು’ ಎಂದು ತಿಳಿಸಿದರು.
ದಸರಾ ವಿದ್ಯುತ್ ದೀಪಾಲಂಕಾರದ ವಿವರ
*130 ಕಿ.ಮೀ ರಸ್ತೆ ಅಲಂಕಾರ: ಕೆ.ಆರ್ ವೃತ್ತದಿಂದ ದೇವರಾಜ ಅರಸು ರಸ್ತೆ ಕಾಫಿ ಡೇ ವೃತ್ತ ಮತ್ತು ಜಿಲ್ಲಾಧಿಕಾರಿಗಳ ಹಳೇ ಕಚೇರಿ ರಸ್ತೆ ಹೊರ ವರ್ತುಲ ರಸ್ತೆ ಬಳಿ ಇರುವ ಹಿನಕಲ್ ಮೇಲ್ಸೇತುವೆಗೆ ಎಲ್‌ಇಡಿ ಬಲ್ಬ್‌ಗಳ ವಿನ್ಯಾಸ.
*ವೃತ್ತಗಳು: ದಸರಾ ವಿದ್ಯುತ್ ದೀಪಾಲಂಕಾರದಲ್ಲಿ 100 ವೃತ್ತಗಳು.
*65 ಪ್ರತಿಕೃತಿ: ಭಾರತದಲ್ಲಿ ಪ್ರಜಾಪ್ರಭುತ್ವ ಸಾಗಿಬಂದ ಹಾದಿ ತಾಯಿ ಭುವನೇಶ್ವರಿ ಸೋಮನಾಥೇಶ್ವರ ದೇವಾಲಯ ಸಂವಿಧಾನದ ಪ್ರಸ್ತಾವನೆ ಮೈಸೂರು ರಾಜಮನೆತನದ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಣಿ ಕೆಂಪನಂಜಮ್ಮಣಿ ದೇವೆ ಜಯಚಾಮರಾಜೇಂದ್ರ ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್.
*ಇತರೆ 25 ಕಡೆಗಳಲ್ಲಿ ದೀಪಾಲಂಕಾರ: ಹಸಿರು ಚಪ್ಪರ ಸುಸ್ವಾಗತ ವಿವಿಧ ಕಮಾನು ನಿಗಮದ ಕಚೇರಿ ದೀಪಾಲಂಕಾರ.
*ಕಾಮಗಾರಿ ಅಂದಾಜು ಮೊತ್ತ: ₹6.50 ಕೋಟಿ
*ತಾತ್ಕಾಲಿಕ ವಿದ್ಯುತ್ ಸಂಪರ್ಕ ಭಾರ: 3 ಮೆಗಾ ವ್ಯಾಟ್ *ವಿದ್ಯುತ್ ಬಳಕೆ ಪ್ರಮಾಣ: 2.5 ಲಕ್ಷ ಯೂನಿಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.