ಮೈಸೂರು: ಸಾಂಸ್ಕೃತಿಕ ನಗರಿಯ ರಾಜಪಥದಲ್ಲಿ ಜಂಬೂಸವಾರಿ ವೈಭವದ ಜೊತೆ ಪ್ರವಾಹ, ಸಾಹಸಗಾಥೆಯ ಚಿತ್ರಣ ಮೂಡಿಬಂತು. ಲಕ್ಷಾಂತರ ಜನರ ಮುಂದೆ ನೆರೆ ಅನಾಹುತದ ಪರಿಯನ್ನು ತೆರೆದಿಡುವುದರ ಜೊತೆಗೆ ವಾಯುದಾಳಿ, ಚಂದ್ರಯಾನವನ್ನೂ ಪರಿಚಯಿಸಲಾಯಿತು.
ಅದಕ್ಕೆ ಕಾರಣವಾಗಿದ್ದು, ದಸರಾ ಮಹೋತ್ಸವ ಅಂಗವಾಗಿ ಮಂಗಳವಾರ ನಡೆದ ವಿಜಯದಶಮಿ ಮೆರವಣಿಗೆ. ವಿಭಿನ್ನವಾಗಿ ರಚಿಸಲಾಗಿದ್ದ 38 ಸ್ತಬ್ಧಚಿತ್ರಗಳು ಜನರ ಮನಸೂರೆಗೊಂಡವು. ನೆತ್ತಿ ಮೇಲೆ ಬಿಸಿಲಿನ ತಾಪ ಕುಕ್ಕುತ್ತಿದ್ದರೂ ಮನಸ್ಸು, ಹೃದಯಕ್ಕೆ ಹಿತಾನುಭವ ನೀಡಿದವು.
ಅತಿವೃಷ್ಟಿ, ವಾಯುಪಡೆ ಸಾಧನೆ, ಸಂಸ್ಕೃತಿ, ಮಠಗಳು, ಸಾಧಕರು, ಜಾಗೃತಿ, ಪರಿಸರ, ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸ್ತಬ್ಧಚಿತ್ರಗಳು ಬೆಳಕು ಚೆಲ್ಲಿದವು.
ಪ್ರವಾಹಕ್ಕೆ ಸಂಬಂಧಿಸಿದ ಸ್ತಬ್ಧಚಿತ್ರಗಳನ್ನುಬೆಳಗಾವಿ, ಬಾಗಲಕೋಟೆ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ರಚಿಸಲಾಗಿತ್ತು. ನೆರೆಗೆ ಸಿಲುಕಿದ ಜನ ಎದುರಿಸುತ್ತಿರುವ ಸಂಕಷ್ಟ, ಹೆಲಿಕಾಪ್ಟರ್‌ಗಳ ಮೂಲಕ ಅವರ ರಕ್ಷಣೆ, ಕಾರ್ಯಾಚರಣೆ ಸ್ವರೂಪವನ್ನು ತೆರೆದಿಡಲಾಯಿತು.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸ್ತಬ್ಧಚಿತ್ರದಲ್ಲಿ ಮೂಡಿಬಂದು ಚಪ್ಪಾಳೆ ಗಿಟ್ಟಿಸಿಕೊಂಡರು. ಪಾಕಿಸ್ತಾನ ವಿರುದ್ಧ ನಡೆದ ಬಾಲಾಕೋಟ್ ವಾಯುದಾಳಿಯನ್ನು ಸ್ತಬ್ಧಚಿತ್ರದ ಮೂಲಕ ಅನಾವರಣ ಗೊಳಿಸಲಾಯಿತು.
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯನ್ನು ಒಂದೇ ವೇದಿಕೆಯಲ್ಲಿ ಸ್ತಬ್ಧಚಿತ್ರಗಳ ಮೂಲಕ ಕಣ್ತುಂಬಿಕೊಳ್ಳುವ ಅವಕಾಶ ಭಕ್ತರಿಗೆ ಲಭಿಸಿತು.
ಪ್ರಮುಖ ವಾಗಿ ಎಲ್ಲರ ಮನ ಸೆಳೆದಿದ್ದು ಇಸ್ರೊ ಚಂದ್ರಯಾನ–2. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ರಚಿಸಿದ್ದ ಈ ಸ್ತಬ್ಧಚಿತ್ರಕ್ಕೆ ಚಪ್ಪಾಳೆಯ ಸುರಿಮಳೆ ಲಭಿಸಿತು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಚಯಿಸಲೂ ಮೆರವಣಿಗೆ ವೇದಿಕೆಯಾಯಿತು, ಪ್ರಧಾನಿ ಮೋದಿ ಅವರ ಘೋಷಣೆಗಳು ಸ್ತಬ್ಧಚಿತ್ರದಲ್ಲಿ ಕಾಣಿಸಿಕೊಂಡವು. ಫಸಲ್ ಬಿಮಾ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಬೇಟಿ ಬಚಾವೋ ಬೇಟಿ ಪಡಾವೋ, ಫಿಟ್ ಇಂಡಿಯಾ, ಆಯುಷ್ಮಾನ್ ಭಾರತ, ಸ್ವಚ್ಛಭಾರತ ಯೋಜನೆಗಳನ್ನು ಪ್ರಸ್ತುತ ಪಡಿಸಲಾಯಿತು.
ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮ ರಾಜೇಂದ್ರ ಒಡೆಯರ್ ಸ್ತಬ್ಧಚಿತ್ರವೂ ಮೆರವಣಿಗೆಗೆ ಕಳೆ ನೀಡಿತು. ಅವರ ಜನ್ಮ ಶತಾಬ್ದಿಗೆ ಮೈಸೂರು ಜಿಲ್ಲಾ ಪಂಚಾಯಿತಿ ಸಲ್ಲಿಸಿದ ಗೌರವವಿದು. ಹುಲಿಗೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲೆ ಪ್ರಸ್ತುತಪಡಿಸಿದ ಸ್ತಬ್ಧಚಿತ್ರ ಸೊಗಸಾಗಿತ್ತು. ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತಂತೆ ಚಿತ್ರದುರ್ಗ ಜಿಲ್ಲೆ ರಚಿಸಿದ್ದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯುವಂತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.