ADVERTISEMENT

Mysuru Dasara: ಡ್ರೋನ್ ತೆರೆದಿಟ್ಟ ಮಾಯಾಲೋಕ

ಮೋಹನ್‌ ಕುಮಾರ್‌ ಸಿ.
Published 13 ಅಕ್ಟೋಬರ್ 2024, 5:04 IST
Last Updated 13 ಅಕ್ಟೋಬರ್ 2024, 5:04 IST
<div class="paragraphs"><p>ಮೈಸೂರು ನಗರದ ಬನ್ನಿಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಪಂಜಿನ ಕವಾಯತಿನಲ್ಲಿ ಶ್ವೇತಾಶ್ವ ತಂಡದ ಸಾಹಸ ಪ್ರದರ್ಶನ (ಎಡಚಿತ್ರ). ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಕಲಾವಿದರು </p></div>

ಮೈಸೂರು ನಗರದ ಬನ್ನಿಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಪಂಜಿನ ಕವಾಯತಿನಲ್ಲಿ ಶ್ವೇತಾಶ್ವ ತಂಡದ ಸಾಹಸ ಪ್ರದರ್ಶನ (ಎಡಚಿತ್ರ). ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಕಲಾವಿದರು

   

–‍ಪ್ರಜಾವಾಣಿ ಚಿತ್ರಗಳು: ಹಂಪ ನಾಗರಾಜ

ಮೈಸೂರು: ಮಿಂಚು ಹುಳಗಳಂತೆ ಹಾರಿ ಬಂದ 1,500 ಡ್ರೋನ್‌ಗಳು ತೆರೆದಿಟ್ಟ ಮಾಯಾಲೋಕ.. ಅಶ್ವರೋಹಿ ದಳವು ಮಿಂಚಿನ ವೇಗದಲ್ಲಿ ನಡೆಸಿದ ಟೆಂಟ್‌ ಪೆಗ್ಗಿಂಗ್‌... ಕೆಸರಿನ ಕಣದಲ್ಲಿ ವೇಗವಾಗಿ ಬೈಕ್‌ ಓಡಿಸುತ್ತಾ ಎದೆಝಲ್ಲೆನಿಸುವ ಸಾಹಸ ಮೆರೆದ ‘ಶ್ವೇತಾಶ್ವ’ ಬೆಂಕಿ ಜೊತೆ ಸರಸ..

ADVERTISEMENT

ದಸರಾ ಮಹೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಬನ್ನಿಮಂಟಪದ ಮೈದಾನದಲ್ಲಿ ನಡೆದ ‘ಪಂಜಿನ ಕವಾಯತು’ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಕಿಕ್ಕಿರಿದ್ದು ನೆರೆದಿದ್ದ 40 ಸಾವಿರಕ್ಕೂ ಅಧಿಕ ಮಂದಿಗೆ ವಿಸ್ಮಯ ಲೋಕವನ್ನು ತೆರೆದಿಟ್ಟು ಸಂತಸ ಭಾವ ಮೂಡಿಸಿತ್ತು. ಇದರೊಂದಿಗೆ 9 ದಿನಗಳ ಉತ್ಸವಕ್ಕೆ ವೈಭವದ ತೆರೆಬಿತ್ತು.

ಗೌರವ ವಂದನೆ: ಪಥ ಸಂಚಲನದ ಪರಿವೀಕ್ಷಣೆಗೆ ಸಶಸ್ತ್ರ ಮೀಸಲು ಪಡೆಯ ಕಮಾಂಡೆಂಟ್‌ ಸಿ.ವಿ.ಶೈಲೇಂದ್ರ ಅವರು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್ ಅವರಿಂದ ಅನುಮತಿ ಪಡೆದರು. ನಂತರ ಪಥಸಂಚಲನದ ಗೌರವ ವಂದನೆಯನ್ನು ರಾಜ್ಯಪಾಲರು ಸ್ವೀಕರಿಸಿದರು. ನಂತರ ರಾಷ್ಟ್ರಗೀತೆ ಹಾಡುವಾಗ 21 ಕುಶಾಲತೋಪು ಸಿಡಿಸಲಾಯಿತು.

ಅಶ್ವರೋಹಿದಳ, ಎನ್‌ಸಿಸಿ ಭೂದಳ, ನೌಕಾದಳ, ಅಶ್ವಾರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ರೈಲ್ವೆ ರಕ್ಷಣಾ ದಳ, ಗೃಹರಕ್ಷಕ ದಳ ಸೇರಿದಂತೆ 18 ತಂಡಗಳು ಇದ್ದವು. ಪಥಸಂಚಲನದ ನಂತರ ಚಲನಚಿತ್ರ ಗಾಯಕಿ ಅನನ್ಯಾ ಭಟ್‌ ಮತ್ತು ತಂಡ ದವರು ‘ನಾಡಗೀತೆ’ಯನ್ನು ಹಾಡಿದರು.

ಡ್ರೋನ್‌ ಜಾದೂ: ಮಿಂಚುಹುಳಗಳಂತೆ ಕೇಸರಿ, ಬಿಳಿ, ಹಸಿರು ಬೆಳಕನ್ನು ಸೂಸುತ್ತಾ ಮೇಲೇರಿ ಬಂದ ಡ್ರೋನ್‌ಗಳು 15 ನಿಮಿಷ ಸ್ವರ್ಗೀಯ ಲೋಕವನ್ನು ತೆರೆದಿಟ್ಟವು. ದೇಶದ ಸಾಧನೆಗಳನ್ನು ಬಿಂಬಿಸುತ್ತಾ, ರಾಷ್ಟ್ರಪ್ರೇಮದ ಕಿಚ್ಚು ಹೊತ್ತಿಸಿದವು. ಈ ಅಪೂರ್ವ ಕಾರ್ಯಕ್ರಮವನ್ನು ಸೆಸ್ಕ್‌ ಆಯೋಜಿಸಿತ್ತು.

ಸೌರಮಂಡಲ, ಭೂಮಿ, ಭಾರತ ಭೂಪಟ, ಇಸ್ರೊ ಮಾರ್ಕ್‌–3 ನೌಕೆ, ಚಂದ್ರಯಾನ, ಚಂದ್ರನ ಅಂಗಳದಲ್ಲಿಳಿದ ಪ್ರಗ್ಯಾನ್ ರೋವರ್, ಸೈನಿಕ, ಘರ್ಜಿಸುವ ರಾಷ್ಟ್ರಪ್ರಾಣಿ ಹುಲಿ, ನೀಲ ತಿಮಿಂಗಿಲ, ಹದ್ದು, ರಾಜ್ಯದ ಭೂಪಟ, ಪಂಚ ಗ್ಯಾರಂಟಿ ಯೋಜನೆಗಳು, ಅಂಬಾರಿ ಆನೆ, ಚಾಮುಂಡೇಶ್ವರಿ ಅನ್ನು ಮಿಂಚುಹುಳುಗಳು ಬೆಳಕಿನ ರಂಗೋಲಿ ಬರೆದವು. ಹಿನ್ನೆಲೆ ಸಂಗೀತವು ಎಲ್ಲರಲ್ಲೂ ಕಿಚ್ಚು ಹೊತ್ತಿಸಿತು.

ಕೇರಳದ ಕಲಾನೇಶನ್ ತಂಡದ 300ಕ್ಕೂ ಹೆಚ್ಚು ಸದಸ್ಯರು ಚಂಡೆಮೇಳ ಪ್ರಸ್ತುತಪಡಿಸಿದರು. ಸೆಸ್ಕ್‌ ಲೇಸರ್ ಶೋ ಗಮನ ಸೆಳೆಯಿತು. ಕುವೆಂಪು, ರಾಜ್‌ಕುಮಾರ್, ಕನ್ನಡ ನಾಡಿನ ಅಸ್ಮಿತೆಗಳನ್ನು ಪರಿಚಯಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಜಿ. ಪರಮೇಶ್ವರ, ಡಾ. ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ, ಎಂ.ಸಿ. ಸುಧಾಕರ, ಸಿ.ಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದ ರಾಜ್, ಶಾಸಕರಾದ ತನ್ವೀರ್ ಸೇಠ್, ಟಿ.ಬಿ.ಜಯಚಂದ್ರ ಇದ್ದರು. 

ಸಾಂಸ್ಕೃತಿಕ ನೃತ್ಯದ ದೃಶ್ಯ

ತುದಿಗಾಲಿನಲ್ಲಿ ನಿಲ್ಲಿಸಿದ ಶ್ವೇತಾಶ್ವ ತಂಡ

‘ಶ್ವೇತಾಶ್ವ’ ಮಿಲಿಟರಿ ಪೊಲೀಸ್‌ ತಂಡವು 25 ನಿಮಿಷ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಮಳೆಯಿಂದಾಗಿ ಮೈದಾನ ಕೆಸರುಮಯವಾಗಿದ್ದರೂ ಬೈಕ್‌ನಲ್ಲಿ ಸಾಹಸ ಪ್ರದರ್ಶಿಸಿತು. ಸುಖೀಂದರ್ ಸಿಂಗ್‌, ಫಕೀರಪ್ಪ, ಶಶಿಕಾಂತ್, ಈರಪ್ಪ ದೊಂಡಿ, ಮಧುಸೂದನ್ ಅವರು ವಿವಿಧ ಚಮತ್ಕಾರಗಳನ್ನು ಮಾಡಿದರು.

ಎದುರು ಬದುರಾಗಿ, ಕತ್ತರಿ ಆಕಾರದಲ್ಲಿ ಬೈಕ್‌ಗಳು ನುಗ್ಗಿದಾಗ ಪ್ರೇಕ್ಷಕರ ಉದ್ಘಾರ ಮುಗಿಲುಮುಟ್ಟಿತ್ತು. ಸುದರ್ಶನ ಚಕ್ರ ಆಕಾರದಲ್ಲಿ ಬೈಕ್ ಓಡಿಸುತ್ತಾ ರಚಿಸಿದ ‘ಪಿರಮಿಡ್‌’ ರಚಿಸಿ ಎಲ್ಲರ ಹುಬ್ಬೇರಿಸಿತು.

ಬೈಕ್‌ನಲ್ಲಿಯೇ ಏಣಿ ಏರುವುದು, ಒಂಟಿಕಾಲಿನಲ್ಲಿ ನಿಲ್ಲುವುದು, ಹಿಮ್ಮುಖವಾಗಿ ನಿಲ್ಲುವುದು, ಉರಿಯುವ ಬೆಂಕಿಯ ಚಕ್ರದೊಳಗೆ ಮಿಂಚಿನಂತೆ ಹಾರಿ ಎದೆಯನ್ನು ಝಲ್ಲೆನಿಸಿದರು. ಇಬ್ಬರು ಜೋಕರ್‌ ಸವಾರರು ಕಚಗುಳಿಯಿಟ್ಟರು.

ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿ–ರಾಜ್ಯಪಾಲ

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಭೇಟಿಯಾಗಿದ್ದು, ನಗುಮುಖದಿಂದಲೇ ಕುಶಲೋಪರಿ ವಿಚಾರಿಸಿದರು.

ಕಾರ್ಯಕ್ರಮದ ವೇದಿಕೆಗೆ ಬಂದ ರಾಜ್ಯಪಾಲರನ್ನು ಸಿದ್ದರಾಮಯ್ಯ ಎದ್ದು ನಿಂತು ಸ್ವಾಗತಿಸಿದರು. ಇಬ್ಬರೂ ಅಕ್ಕ‍ಪಕ್ಕದಲ್ಲೇ ಕುಳಿತರು. ಆಗಾಗ್ಗೆ ಒಂದಿಷ್ಟು ನಿಮಿಷಗಳ ಕಾಲ ಆತ್ಮೀಯವಾಗಿ ಚರ್ಚೆ ನಡೆಸಿದರು. ಈ ಸಂದರ್ಭ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗಿದ್ದರು.

ರೋಮಾಂಚಕ ಟೆಂಟ್‌ ಪೆಗ್ಗಿಂಗ್‌

ಮೈಸೂರಿನ ಅಶ್ವಾರೋಹಿ ಪಡೆಯು ನಡೆಸಿದ ಟೆಂಟ್‌ ಪೆಗ್ಗಿಂಗ್‌ ಸಾಹಸ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಪೊಲೀಸರಾದ ಶರಣಪ್ಪ ಡಿ.ಸಾಸನೂರ, ಆನಂದ್‌ಸಿಂಗ್, ಮಂಜುನಾಥ್, ರುದ್ರಪ್ಪ, ಮಹೇಶ್, ಸುರೇಶ್ ಮಳಲಿ, ಸಂದೇಶ್, ಚಂದ್ರು, ಜಯ ಪ್ರಕಾಶ್ ಸಾಹಸ ಮೆರೆದರು.

ಪಂಜಿನ ರಂಗೋಲಿ: ಬೆಂಗಳೂರು ತಣಿಸಂದ್ರ ಪೊಲೀಸ್‌ ತರಬೇತಿ ಶಾಲೆಯ ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಬ್ಯಾಂಡ್ ಸಂಗೀತಕ್ಕೆ‌ ತಕ್ಕಂತೆ ಉರಿವ ಪಂಜಿನಲ್ಲಿ ಕರ್ನಾಟಕ, ‘ಸುಸ್ವಾಗತ’, ‘ಕನ್ನಡವೇ ಸತ್ಯ’ ‘ಮೈಸೂರು ದಸರಾ..’, ‘ಜೈ ಚಾಮುಂಡಿ..’, ‘ಕರ್ನಾಟಕ ಪೊಲೀಸ್‌’ ಎಂದು ಉರಿವ ಪಂಜುಗಳಲ್ಲಿ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.