ಮೈಸೂರು: ದಸರಾ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ವಲಯ ಪೊಲೀಸ್ ಅಧಿಕಾರಿಗಳ ಭದ್ರತಾ ಪರಿಶೀಲನಾ ಸಭೆಯು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆಯಿತು.
‘ದಸರೆಯಲ್ಲಿ ಅನೇಕ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಯ ತವರು ಜಿಲ್ಲೆಯ ಕಾರ್ಯಕ್ರಮವಾಗಿರುವುದರಿಂದ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಒದಗಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮನವಿ ಮಾಡಿದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜು ಅವರು ದಸರಾ ಭದ್ರತಾ ವ್ಯವಸ್ಥೆಗಳ ಬಗ್ಗೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಪ್ರಸ್ತುತ ನಗರ ಪೊಲೀಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ, ಡಿಎಆರ್, ಸಿಎಆರ್, ಸಂಚಾರ, ಕೆಎಸ್‌ಆರ್‌ಪಿ, ಮೌಂಟೆಡ್ ಪೊಲೀಸ್, ಚಾಮುಂಡಿ, ಕಮಾಂಡೋ ಪಡೆ ಸಿಬ್ಬಂದಿ ಹಾಗೂ ಸಂಖ್ಯೆಯ ಕುರಿತು ಮಾಹಿತಿ ನೀಡಿದರು.
ನಗರದ ಹೊರವಲಯದಲ್ಲಿ ಯುವ ದಸರಾವನ್ನು ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿರುವ ಬಗ್ಗೆ ಹಾಗೂ ಹೆಚ್ಚುವರಿ ಸಿಬ್ಬಂದಿ ಬಗ್ಗೆ ಚರ್ಚಿಸಲಾಯಿತು.
ಎಡಿಜಿಪಿ ಹಿತೇಂದ್ರ ಮಾತನಾಡಿ, ‘ದಸರಾ ಸಂದರ್ಭದಲ್ಲಿ ಅಗತ್ಯವಿರುವ ಭದ್ರತಾ ವ್ಯವಸ್ಥೆಗಳನ್ನು ಮಾಡಿ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಿ. 10 ದಿನದ ಕಾರ್ಯಕ್ರಮಕ್ಕಾಗಿ ಹೋಟೆಲ್, ರೆಸಾರ್ಟ್‌ಗಳು, ಪಿಜಿ, ಸರ್ವಿಸ್ ಅಪಾರ್ಟ್‌ಮೆಂಟ್ ಮತ್ತು ಹೊರಗಿನಿಂದ ಬರುವ ಅತಿಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು’ ಎಂದು ಸೂಚಿಸಿದರು.
ದಕ್ಷಿಣ ವಲಯ ಡಿಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಚಾಮರಾಜನಗರ ಎಸ್‌ಪಿ ಬಿ.ಟಿ.ಕವಿತಾ, ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಕೊಡಗು ಎಸ್‌ಪಿ ಕೆ.ರಾಮರಾಜನ್, ಹಾಸನ ಎಸ್‌ಪಿ ಎಂ.ಎಸ್.ಮಹಮ್ಮದ್ ಸುಜೀತಾ, ಡಿಸಿಪಿ ಎಸ್.ಜಾಹ್ನವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.