ಮೈಸೂರು: ನಿಶಾನೆ ಆನೆ ಧನಂಜಯ ಗಂಭೀರ ಹೆಜ್ಜೆ ಇಡುತ್ತಿದ್ದಂತೆ ವಿದೇಶಿಗರ ಕುತೂಹಲ ಕೆರಳಿತು. ‘ಓ ಮೈ ಗಾಡ್ ಎಲಿಫೆಂಟ್ ಈಸ್ ಸೋ ಬ್ಯೂಟಿಫುಲ್’ (ಆನೆ ತುಂಬಾ ಸುಂದರವಾಗಿದೆ) ಎಂದು ಉದ್ಗಾರ ತೆಗೆದ ಜರ್ಮನಿಯ ಕತ್ರಿನ್ ಫೋಟೊ ಕ್ಲಿಕ್ಕಿಸಿಕೊಂಡರು.
ಅವರು ಕಳೆದ ಐದು ದಿನಗಳಿಂದ ನಗರವನ್ನು ಸುತ್ತಿದ್ದು, ಇಲ್ಲಿನ ಜನರ ಪ್ರೀತಿಗೆ ತಲೆಬಾಗಿದ್ದಾರೆ. ದಸರಾದ ಸೌಂದರ್ಯ ಬಣ್ಣಿಸುವುದರೊಂದಿಗೆ ಪಾರಂಪರಿಕ ನಗರಿಯ ಬಗೆಗಿನ ಕುತೂಹಲಕಾರಿ ವಿಷಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.
‘ಮೈಸೂರಿನ ರಾಜ ಪರಂಪರೆಯನ್ನು ಗೈಡ್ ಮೂಲಕ ತಿಳಿದಿದ್ದೆ. ರೋಮಾಂಚನಕಾರಿ ಹಿನ್ನೆಲೆಯುಳ್ಳ ಒಡೆಯರ್ ಅವರ ಇತಿಹಾಸಕ್ಕೆ ದಸರಾ ಶೋಭೆ ತುಂಬಿದೆ. ಮೊದಲ ಬಾರಿ ಜಂಬೂಸವಾರಿ ವೀಕ್ಷಿಸುತ್ತಿದ್ದು, ಹೊಸ ಲೋಕವನ್ನು ಕಂಡಂತಾಗುತ್ತಿದೆ’ ಎಂದು ಹೇಳಿದರು.
ಅಮೆರಿಕ, ಜರ್ಮನ್, ಇಸ್ರೇಲ್, ಫ್ರೆಂಚ್ ಮುಂತಾದ ಕಡೆಯಿಂದ ಬಂದ ವಿದೇಶಿಗರು ಮೆರವಣಿಗೆ ಕಣ್ತುಂಬಿಕೊಂಡರು. ಸಾಂಸ್ಕೃತಿಕ ಲೋಕ ಟ್ರಸ್ಟ್ ಆಯುರ್ವೇದ ಆಸ್ಪತ್ರೆ ಬಳಿ ವಿದೇಶಿ ಪ್ರವಾಸಿಗರಿಗಾಗಿ ಮಾಡಿದ್ದ ಗ್ಯಾಲರಿಯಲ್ಲಿ 300 ಜನರಿದ್ದರು. ಅಲ್ಲಲ್ಲಿ, ಜನರ ನಡುವೆಯೂ ಅನೇಕರು ನಿಂತು ದಸರಾ ವೈಭವವನ್ನು ವೀಕ್ಷಿಸಿದರು.
‘ಕಂಜನ್' ಹಾಗೂ ‘ಭೀಮ’ ಆನೆಯು ಸೊಂಡಿಲೆತ್ತಿದಾಗ ಚಪ್ಪಾಳೆ ತಟ್ಟಿ ಖುಷಿಪಟ್ಟರು. ನೆಲದ ಸಂಸ್ಕೃತಿ ಸಾರುವ ಸ್ತಬ್ಧಚಿತ್ರ, ಕಲಾ ತಂಡಗಳ ಕುಣಿತವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಅನೇಕ ಯೂಟ್ಯೂಬ್ ವ್ಲಾಗರ್‌ಗಳೂ ಭಾಗವಹಿಸಿದ್ದು ಕಂಡುಬಂತು.
‘ದಸರೆಯಲ್ಲಿ ಪ್ರಥಮ ಬಾರಿಗೆ ಭಾಗವಹಿಸುತ್ತಿದ್ದೇನೆ. ನಗರವನ್ನು ದೀಪಗಳಿಂದ ಅಲಂಕರಿಸಿರುವುದನ್ನು ನೋಡುವುದೇ ಖುಷಿ ಕೊಡುತ್ತದೆ. ನಾನು ಇನ್ನೂ ಮೂರು ದಿನ ಉಳಿದುಕೊಂಡು ಇಲ್ಲಿನ ಆಹಾರಗಳನ್ನು ಆಸ್ವಾದಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದೇನೆ’ ಎಂದು ಫ್ರೆಂಚ್‌ನಿಂದ ಬಂದಿರುವ ಪೀಟರ್ ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು.
ಈ ನಗರ ಇತರೆಡೆಗಿಂತ ಭಿನ್ನವಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಎಲ್ಲೆಡೆ ಕಾಣಸುತ್ತಿದ್ದು ಇನ್ನಷ್ಟು ದಿನ ಇಲ್ಲಿ ಉಳಿದುಕೊಂಡು ನಗರದ ಪರಂಪರೆ ತಿಳಿದುಕೊಳ್ಳುತ್ತೇನೆಕೋಬಿ ಇಸ್ರೇಲ್
ಈ ರೀತಿಯ ಪಾರಂಪರಿಕ ನಗರ ಕೆಲವಷ್ಟೇ ಇದ್ದು ಪ್ರತಿಯೊಂದು ಕಟ್ಟಡದ ಬಗ್ಗೆಯೂ ಜನ ಒಂದೊಂದು ಕಥೆ ಹೇಳುತ್ತಾರೆ. ಇಲ್ಲಿನ ಜನರ ಪ್ರೀತಿ ಆತಿಥ್ಯವೂ ಅದ್ಭುತ ಅನುಭವ ನೀಡಿದೆಕತ್ರಿನ್ ಜರ್ಮನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.